ಇಂದು ಆರ್​ಸಿಬಿ v/s ಮುಂಬೈ

ಮುಂಬೈ: ಸತತ 6 ಸೋಲಿನ ಬಳಿಕ ಕೊನೆಗೂ ಗೆಲುವಿನ ಖಾತೆ ತೆರೆದ ಆರ್​ಸಿಬಿ ತಂಡ ಐಪಿಎಲ್-12ರಲ್ಲಿ ಸೋಮವಾರ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಪ್ಲೇಆಫ್ ಆಸೆ ಜೀವಂತವಾಗಿ ಇರಿಸಿ ಕೊಳ್ಳಬೇಕಾದರೆ ಇನ್ನುಳಿದ ಪ್ರತಿ ಪಂದ್ಯವನ್ನೂ ಗೆಲ್ಲ ಬೇಕಾಗಿರುವ ವಿರಾಟ್ ಕೊಹ್ಲಿ ಪಡೆ, ವಾಂಖೆಡೆ ಸ್ಟೇಡಿಯಂ ನಲ್ಲೂ ಗೆಲುವಿನ ಲಯ ಮುಂದುವರಿಸುವ ಹಂಬಲದಲ್ಲಿದೆ. ಅಲ್ಲದೆ, ಬೆಂಗಳೂರಿನಲ್ಲಿ ನಡೆದ ಮುಖಾಮುಖಿಯಲ್ಲಿ ರೋಹಿತ್ ಶರ್ಮ ಬಳಗದ ಎದುರು ಕಂಡಿದ್ದ ಸೋಲಿಗೂ ಸೇಡು ತೀರಿಸಿಕೊಳ್ಳುವ ಛಲದಲ್ಲಿದೆ. ವಿಶ್ವ ನಂ. 1 ಬ್ಯಾಟ್ಸ್​ಮನ್ ಕೊಹ್ಲಿ ವಿರುದ್ಧದ ಹಿಂದಿನ ಮುಖಾಮುಖಿಯಲ್ಲಿ ವಿಶ್ವ ನಂ. 1 ಬೌಲರ್ ಜಸ್​ಪ್ರೀತ್ ಬುಮ್ರಾ ಯಶಸ್ಸು ಕಂಡಿದ್ದರು. ಅದಕ್ಕೆ ಕೊಹ್ಲಿ ಈ ಬಾರಿ ತಿರುಗೇಟು ನೀಡುವರೇ ಎಂಬ ಕುತೂಹಲವೂ ಇದೆ. 2015ರಲ್ಲಿ ಮುಂಬೈ ತಂಡ ಲೀಗ್ ಹಂತದ ಮೊದಲ 6 ಪಂದ್ಯಗಳಲ್ಲಿ 5 ಸೋಲು ಕಂಡಿದ್ದರೂ ಪ್ಲೇಆಫ್​ಗೇರುವಲ್ಲಿ ಸಫಲವಾಗಿತ್ತು ಮತ್ತು ಟೂರ್ನಿಯ ಚಾಂಪಿಯನ್ ಕೂಡ ಆಗಿತ್ತು. ಈ ಸಾಧನೆಯೇ ಈಗ ಆರ್​ಸಿಬಿ ತಂಡಕ್ಕೆ ಸ್ಪೂರ್ತಿಯಾಗಿದೆ. -ಏಜೆನ್ಸೀಸ್

ಆರ್​ಸಿಬಿ: ಬದಲಾವಣೆಯ ಸಾಧ್ಯತೆ ಕಡಿಮೆ. ಆದರೆ ಪದೇಪದೇ ದುಬಾರಿಯಾಗುತ್ತಿರುವ ಉಮೇಶ್ ಯಾದವ್ ಅಥವಾ ಮೊಹಮದ್ ಸಿರಾಜ್ ಬದಲು ಎಡಗೈ ವೇಗಿ ಕುಲ್ವಂತ್ ಖೆಜ್ರೋಲಿಯಾರನ್ನು ಆಡಿಸಬಹುದು. ಡೇಲ್ ಸ್ಟೈನ್ ಈಗಾಗಲೆ ತಂಡ ಕೂಡಿಕೊಂಡರೂ ಈ ಪಂದ್ಯದಲ್ಲಿ ಆಡುವುದು ಖಚಿತವಿಲ್ಲ.

ಬಲ: ಕೊಹ್ಲಿ-ಎಬಿಡಿ ಸ್ಥಿರ ಫಾರ್ಮ್​, ಚಾಹಲ್ ಚುರುಕಿನ ಸ್ಪಿನ್; ಮೊದಲ ಜಯ ಕಂಡ ನೆಮ್ಮದಿ.

ದೌರ್ಬಲ್ಯ: ಉಮೇಶ್-ಸಿರಾಜ್ ದುಬಾರಿ; ಕಳಪೆ ಮಧ್ಯಮ ಕ್ರಮಾಂಕ; ಕಳಪೆ ಫೀಲ್ಡಿಂಗ್.

ಕಳೆದ ಪಂದ್ಯ:ಪಂಜಾಬ್ ವಿರುದ್ಧ 8 ವಿಕೆಟ್ ಜಯ

ಮುಂಬೈ ಇಂಡಿಯನ್ಸ್: ಒಂದು ಬದಲಾವಣೆಯೊಂದಿಗೆ ಮುಂಬೈ ಆಡುವ ಸಾಧ್ಯತೆಯಿದೆ. ತನ್ನ ಮೊದಲ ಪಂದ್ಯದಲ್ಲೇ ಹೀರೋ ಆಗಿದ್ದ ವೇಗಿ ಅಲ್ಜಾರಿ ಜೋಸೆಫ್ ಡೆಲ್ಲಿ ವಿರುದ್ಧ ದುಬಾರಿಯಾಗುವ ಜತೆಗೆ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರ ಬದಲು ವೇಗಿ ಲಸಿತ್ ಮಾಲಿಂಗ ಮರಳಬಹುದು. ನಿರೀಕ್ಷಿತ ಮಟ್ಟದಲ್ಲಿ ಯಶ ಕಾಣದ ಜೇಸನ್ ಬೆಹ್ರನ್​ಡಾರ್ಫ್ ಬದಲು ಮಿಚೆಲ್ ಮೆಕ್ಲೀನಘನ್ ಆಡಬಹುದು.

ಬಲ: ಡಿಕಾಕ್-ರೋಹಿತ್ ಉತ್ತಮ ಆರಂಭ; ಪಾಂಡ್ಯ ಸಹೋದರರ ಆಟ; ತವರಿನ ಪಂದ್ಯ.

ದೌರ್ಬಲ್ಯ: ಇಶಾನ್ ಕಿಶನ್, ಸೂರ್ಯಕುಮಾರ್ ವೈಫಲ್ಯ; ಹಿಂದಿನ ಸೋಲು; ಜೋಸೆಫ್ ದುಬಾರಿ.

ಕಳೆದ ಪಂದ್ಯ: ರಾಜಸ್ಥಾನ ವಿರುದ್ಧ 4 ವಿಕೆಟ್ ಸೋಲು