ಸೋಲಿನ ಪರಾಮರ್ಶೆಗಾಗಿ ಮಹತ್ತರ ಸಭೆ ಕರೆದ ಬಿಜೆಪಿ ಹೈಕಮಾಂಡ್​

ನವದೆಹಲಿ: ಪಂಚರಾಜ್ಯ ಚುನಾವಣೆ ಫಲಿತಾಂಶದಲ್ಲಿ ಸೋಲು ಕಂಡ ನಂತರ ಎಚ್ಚೆತ್ತಿರುವ ಬಿಜೆಪಿ ಹೈಕಮಾಂಡ್​ ಗುರುವಾರ ಮಧ್ಯಾಹ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರ ನೇತೃತ್ವದಲ್ಲಿ ಸೋಲಿನ ಪರಾಮರ್ಶೆಗಾಗಿ ಪಕ್ಷದ ನಾಯಕರೊಂದಿಗೆ ಸಭೆ ಕರೆದಿದೆ.

ಈ ಮಹತ್ತರ ಸಭೆಯಲ್ಲಿ ಮಧ್ಯಪ್ರದೇಶ, ಛತ್ತೀಸ್​ಗಢ ಮತ್ತು ರಾಜಸ್ಥಾನದಲ್ಲಿ ಪಕ್ಷ ಸೋಲಲು ಕಾರಣವೇನು ಎಂಬುದರ ಕುರಿತು ಚರ್ಚಿಸಿ, 2019ರ ಲೋಕಸಭಾ ಚುನಾವಣೆ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಚರ್ಚಿಸಲಾಗುತ್ತದೆ ಎನ್ನಲಾಗಿದೆ.

ಪಕ್ಷದ ರಾಷ್ಟ್ರೀಯ ನಾಯಕರು, ರಾಜ್ಯಾಧ್ಯಕ್ಷರು, ವಿವಿಧ ರಾಜ್ಯಗಳ ಪ್ರಭಾರಿಗಳು, ಸಹ ಪ್ರಭಾರಿಗಳು, ರಾಷ್ಟ್ರೀಯ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಮತ್ತು ಇನ್ನಿತರ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಮುಂದಿನ ವರ್ಷ ಏಪ್ರಿಲ್​-ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಸಿದ್ಧತೆಯೇ ಸಭೆಯ ಪ್ರಮುಖ ಅಜೆಂಡಾ ಆಗಿದೆ.

ಅಮಿತ್​ ಷಾ ನೇತೃತ್ವದ ಸಭೆಗೂ ಮುಂಚೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದೀಯ ಸಭೆಯಲ್ಲಿ ಬಿಜೆಪಿ ಸಂಸದರ ಜತೆ ಮಾತುಕತೆ ನಡೆಸಲಿದ್ದಾರೆ.

‘ನಾವು ಕಳೆದ 15 ವರ್ಷದಿಂದ ಮಧ್ಯ ಪ್ರದೇಶ ಮತ್ತು ಛತ್ತೀಸ್​ಗಢವನ್ನು ಆಳಿದ್ದು ಈ ರಾಜ್ಯಗಳಲ್ಲಿ ಕೃಷಿಕರ ಯಾತನೆ, ಉದ್ಯೋಗ ಸೃಷ್ಟಿ ಮತ್ತು ಆಕ್ರಮಣಶೀಲ ಕಾಂಗ್ರೆಸ್​ನೊಂದಿಗೆ ವ್ಯವಹರಿಸುವುದು ದೊಡ್ಡ ಸವಾಲುಗಳಾಗಿತ್ತು’ ಎಂದು ಪಕ್ಷದ ನಾಯಕರಿಬ್ಬರು ಸೋಲಿಗೆ ಕಾರಣವೇನು ಎಂಬುದನ್ನು ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)