ಮಂಗಳೂರು ಕ್ಷೇತ್ರಕ್ಕೆ 4 ದಶಕ ಬಳಿಕ ಕಾಂಗ್ರೆಸ್‌ನಿಂದ ಹೊಸಮುಖ

ಪಿ.ಬಿ.ಹರೀಶ್ ರೈ ಮಂಗಳೂರು

ಒಟ್ಟು 9 ಬಾರಿ ಬಿ.ಜನಾರ್ದನ ಪೂಜಾರಿ, 2 ಬಾರಿ ಎಂ.ವೀರಪ್ಪ ಮೊಯ್ಲಿ.
– ಕಳೆದ 4 ದಶಕಗಳಲ್ಲಿ ಮಂಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಕೇವಲ ಇಬ್ಬರು ನಾಯಕರು. ಈ ಬಾರಿಯ ಚುನಾವಣೆಯಲ್ಲಿ ಪೂಜಾರಿ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿದ್ದರೂ ಹೈಕಮಾಂಡ್ ಅದನ್ನು ಪರಿಗಣಿಸಿಲ್ಲ. ವೀರಪ್ಪ ಮೊಯ್ಲಿ ಮಂಗಳೂರು ಕ್ಷೇತ್ರ ತೊರೆದು ಚಿಕ್ಕಬಳ್ಳಾಪುರ ಸೇರಿದ್ದಾರೆ. ಹಾಗಾಗಿ ಪ್ರಥಮ ಬಾರಿಗೆ ಕಾಂಗ್ರೆಸ್ ಹೊಸ ಅಭ್ಯರ್ಥಿಯನ್ನು ಕಣಕ್ಳಿಳಿಸಲು ಸಜ್ಜಾಗಿದೆ.

ಮೊದಲ 6 ಚುನಾವಣೆಗಳಲ್ಲಿ ಕಾಂಗ್ರೆಸ್ ಸತತ ಜಯ ಗಳಿಸಿದ್ದರೂ, ಪ್ರತಿ ಚುನಾವಣೆಯಲ್ಲಿ ತನ್ನ ಅಭ್ಯರ್ಥಿ ಬದಲಾವಣೆ ಮಾಡುತ್ತಲೇ ಬಂದಿತ್ತು. 1951ರಲ್ಲಿ ಬಿ.ಶಿವರಾವ್, 57ರಲ್ಲಿ ಕೆ.ಆರ್.ಆಚಾರ್, 62ರಲ್ಲಿ ಎ.ಶಂಕರ ಆಳ್ವ, 67ರಲ್ಲಿ ಸಿ.ಎಂ.ಪೂಣಚ್ಚ, 71ರಲ್ಲಿ ಕೆ.ಕೆ.ಶೆಟ್ಟಿ ಕಾಂಗ್ರೆಸ್‌ನಿಂದ ಚುನಾಯಿತರಾಗಿದ್ದರು. ಈ ಪೈಕಿ ಒಮ್ಮೆ ಗೆದ್ದವರು ಮುಂದಿನ ಚುನಾವಣೆ ಸ್ಪರ್ಧಿಸಿಲ್ಲ.

ಪೂಜಾರಿ ಎಂಟ್ರಿ: ಕಾಂಗ್ರೆಸ್‌ನ ಬಿ.ಜನಾರ್ದನ ಪೂಜಾರಿ 1977ರ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಗೆದ್ದು ಲೋಕಸಭೆಗೆ ಎಂಟ್ರಿ ಪಡೆದರು. ಬಳಿಕ ರಾಷ್ಟ್ರೀಯ ನಾಯಕರಾಗಿ ಗುರುತಿಸಿಕೊಂಡು ಸತತ ಜಯ ದಾಖಲಿಸಿದ ಕಾರಣ ಅಭ್ಯರ್ಥಿ ಬದಲಾವಣೆ ಬಗ್ಗೆ ಕಾಂಗ್ರೆಸ್‌ಗೆ ಯೋಚನೆ ಮಾಡಬೇಕಾದ ಸ್ಥಿತಿ ಬರಲಿಲ್ಲ. ಆದರೆ 1991ರ ಚುನಾವಣೆಯಲ್ಲಿ ಪೂಜಾರಿ ಸೋಲಿನ ಸುಳಿಗೆ ಸಿಲುಕಿದರು. 96 ಮತ್ತು 98ರ ಚುನಾವಣೆಯಲ್ಲಿ ಮತ್ತೆ ಟಿಕೆಟ್ ಪಡೆದರೂ ಜಯ ಒಲಿಯಲಿಲ್ಲ.

ಮೊಯ್ಲಿ ಪ್ರವೇಶ: 1991ರ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡ ವೀರಪ್ಪ ಮೊಯ್ಲಿ 99ರ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾದರು. ಆದರೆ ಸೋಲಾಯಿತು. 2004ರಲ್ಲಿ ಮತ್ತೆ ಸೋಲು. ದಶಕದ ಬಳಿಕ 2009ರಲ್ಲಿ ಮತ್ತೆ ಪೂಜಾರಿ ಕಾಂಗ್ರೆಸ್ ಟಿಕೆಟ್ ಪಡೆದರೂ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ.

ಆಂತರಿಕ ಚುನಾವಣೆ: 2014ರಲ್ಲಿ ಆಂತರಿಕ ಚುನಾವಣೆ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಮುಂದಾಗಿತ್ತು. ಹಿರಿಯ ನಾಯಕ ಪೂಜಾರಿ ಟಿಕೆಟ್‌ಗಾಗಿ ಆಂತರಿಕ ಚುನಾವಣೆ ಎದುರಿಸಬೇಕಾಯಿತು. ರೇಸ್‌ನಲ್ಲಿದ್ದ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಅವರ ನಾಮಪತ್ರ ಆಂತರಿಕ ಚುನಾವಣೆಯಲ್ಲಿ ತಿರಸ್ಕೃತಗೊಂಡಿತು. ಕಣದಲ್ಲಿ ಉಳಿದ ಕಣಚೂರು ಮೋನು 62 ಮತ ಗಳಿಸಿದರೆ, ಪೂಜಾರಿ 478 ಮತಗಳಿಸಿದರು. ಆದರೆ ಆ ಲೋಕಸಭೆ ಚುನಾವಣೆ ಅವರ 5ನೇ ಸೋಲಿಗೆ ಕಾರಣವಾಯಿತು. ಈ ಬಾರಿಯ ಚುನಾವಣೆಯಲ್ಲಿ ಇಬ್ಬರು ಮಾಜಿ ಸಚಿವರು ಸಹಿತ 5 ಮಂದಿ ಹೆಸರು ಹೈಕಮಾಂಡ್ ಮುಂದಿದೆ. ಯಾರು ಟಿಕೆಟ್ ಪಡೆದರೂ, ಕಾಂಗ್ರೆಸ್ ಪಾಲಿಗೆ ಅದು ಹೊಸಮುಖ.