ಚಲಿಸುವ ರೈಲಿನಲ್ಲಿ ಕಿಕಿ ಡ್ಯಾನ್ಸ್​ ಮಾಡಿದ್ದಕ್ಕೆ ಕೋರ್ಟ್​ ನೀಡಿದ ಶಿಕ್ಷೆ ಏನು ಗೊತ್ತಾ?

ಮುಂಬೈ: ಚಲಿಸುವ ರೈಲಿನಲ್ಲಿ ಕಿಕಿ ಡ್ಯಾನ್ಸ್​ ಮಾಡಿದ್ದಕ್ಕೆ ಮೂವರು ಯೂ ಟ್ಯೂಬರ್ಸ್​ಗೆ ಸ್ಥಳೀಯ ನ್ಯಾಯಾಲಯ ಮೂರು ದಿನ ರೈಲ್ವೆ ನಿಲ್ದಾಣವನ್ನು ಸ್ವಚ್ಛಗೊಳಿಸಬೇಕು ಎಂದು ಆದೇಶಿಸಿದೆ.

ಶ್ಯಾಮ್​ ಶರ್ಮಾ (24), ಧ್ರುವ್​ (23) ಮತ್ತು ನಿಶಾಂತ್​ (20) ಎಂಬ ಯುವಕರು ವಸೈ ರೈಲ್ವೆ ನಿಲ್ದಾಣದಲ್ಲಿ ಚಲಿಸುವ ರೈಲಿನಲ್ಲಿ ಚಿತ್ರೀಕರಿಸಿದ್ದ ಕಿಕಿಡ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಒಂದೂವರೆ ಲಕ್ಷ ಮಂದಿ ಇವರ ವಿಡಿಯೋ ವೀಕ್ಷಿಸಿದ್ದರು.

ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಭದ್ರತಾ ಪಡೆಯ ಹಿರಿಯ ಅಧಿಕಾರಿ, ಮೂವರು ಯುವಕರನ್ನು ಬಂಧಿಸಿ ಸ್ಥಳೀಯ ವಸೈ ರೈಲ್ವೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ನಂತರ ಮೂರು ಯುವಕರಿಗೆ ಮೂರು ದಿನಗಳು ಕಿಕಿ ಡ್ಯಾನ್ಸ್​ ಮಾಡಿದ್ದ ರೈಲ್ವೆ ನಿಲ್ದಾಣವನ್ನು ಸ್ವಚ್ಛ ಗೊಳಿಸಬೇಕು. ಹಾಗೆ ಇಂಥ ಸ್ಟಂಟ್​ಗಳಿಂದ ದೂರವಿರುವಂತೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಆದೇಶಿಸಿದೆ ಎಂದು ತಿಳಿಸಿದ್ದಾರೆ.

ನಿನ್ನೆ ಬೆಳಗ್ಗೆ ಶ್ಯಾಂ ಶರ್ಮಾರನ್ನು ಮಾಲ್​ವೊಂದರಲ್ಲಿ ಬಂಧಿಸಿದೆವು. ಆತ ಉಳಿದಿಬ್ಬರ ಬಗ್ಗೆ ಮಾಹಿತಿ ನೀಡಿದ್ದ. ಈ ಮೂವರನ್ನು ಸೆಕ್ಷನ್​ 145ಬಿ, 147, 154, 156ರ ಅಡಿಯಲ್ಲಿ ಬಂಧಿಸಿದೆವು. ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ರೈಲ್ವೆ ಪ್ಲಾಟ್​ಫಾರಂಗಳನ್ನು ಸ್ವಚ್ಛಗೊಳಿಸಬೇಕು. ನಂತರ ಮಧ್ಯಾಹ್ನ 3ರಿಂದ 5ರವರೆಗೆ ಪ್ರಯಾಣಿಕರಿಗೆ ಅಪಾಯಕಾರಿ ಕಿಕಿ ಡ್ಯಾನ್ಸ್​ ಕುರಿತು ಜಾಗೃತಿ ಮೂಡಿಸಬೇಕು ಎಂದು ಘಟನೆ ಕುರಿತು ವಿವರಿಸಿದರು.

ಕಿಕಿ ಡ್ಯಾನ್ಸ್​ ಮಾಡುವವರ ಜೀವಕ್ಕಷ್ಟೇ ಅಲ್ಲದೆ ಬೇರೆಯವರ ಜೀವಕ್ಕೂ ಹಾನಿ ತರಲಿದೆ. ಹಾಗಾಗಿ ಕಿಕಿ ಚಾಲೆಂಜ್​ ತೆಗೆದುಕೊಳ್ಳದಿರುವಂತೆ ದೇಶದ ಹಲವಾರು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್​)