ಭುವನೇಶ್ವರ: ಹಾಕಿ ನಂತರ ಭಾರತೀಯ ಖೋಖೋ ತಂಡಕ್ಕೂ ಒಡಿಶಾ ಸರ್ಕಾರ ಪ್ರಾಯೋಜಕತ್ವ ವಹಿಸಿಕೊಂಡಿದೆ. ಮುಂದಿನ 3 ವರ್ಷಗಳ ಕಾಲ ಭಾರತದ ಪುರುಷರ ಮತ್ತು ಮಹಿಳಾ ತಂಡಗಳಿಗೆ ಪ್ರಾಯೋಜಕತ್ವ ನೀಡುವ ಮೂಲಕ ದೇಸಿ ಕ್ರೀಡೆಯ ಬೆಳವಣಿಗೆಗೆ ನೆರವಾಗಲು ಒಡಿಶಾ ಸರ್ಕಾರ ಮುಂದಾಗಿದೆ.
2025ರ ಜನವರಿಯಿಂದ 2027ರ ಡಿಸೆಂಬರ್ವರೆಗೆ ಪ್ರತಿ ವರ್ಷಕ್ಕೆ 5 ಕೋಟಿ ರೂ.ನಂತೆ ಒಟ್ಟು 15 ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸೋಮವಾರ ಸಹಿ ಹಾಕಿದ್ದು, ಒಡಿಶಾ ಗಣಿಗಾರಿಕೆ ನಿಗಮದಿಂದ ಈ ಹಣ ಸಂದಾಯವಾಗಲಿದೆ. ಒಡಿಶಾ ಸರ್ಕಾರ ಈಗಾಗಲೆ 2018ರಿಂದ ಭಾರತದ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳಿಗೆ ಪ್ರಾಯೋಜಕತ್ವ ವಹಿಸಿಕೊಂಡು ಬಂದಿದ್ದು, 2036ರವರೆಗೂ ಒಪ್ಪಂದ ಹೊಂದಿದೆ. ಒಡಿಶಾ ಸರ್ಕಾರ ನೀಡಿದ ಬೆಂಬಲದ ಪ್ರತಿಫಲ ಎಂಬಂತೆ ಭಾರತದ ಪುರುಷರ ಹಾಕಿ ತಂಡ ಕಳೆದ ಎರಡೂ (2021, 2024) ಒಲಿಂಪಿಕ್ಸ್ಗಳಲ್ಲಿ ಕಂಚಿನ ಪದಕ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜನವರಿ 13ರಿಂದ 19ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಚೊಚ್ಚಲ ಖೋಖೋ ವಿಶ್ವಕಪ್ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರದ ಈ ಬೆಂಬಲ ಖೋಖೋ ಬೆಳವಣಿಗೆಗೂ ನೆರವಾಗುವ ನಿರೀಕ್ಷೆ ಇದೆ.
“ಒಡಿಶಾ ಸರ್ಕಾರದ ಈ ಬೆಂಬಲ ಖೋಖೋ ಆಟದಲ್ಲಿ ಟರ್ನಿಂಗ್ ಪಾಯಿಂಟ್ ಆಗಲಿದೆ. ಇದು ವಿಶ್ವದರ್ಜೆ ಕ್ರೀಡಾಪಟುಗಳ ಬೆಳವಣಿಗೆಗೆ ನೆರವಾಗಲಿದೆ’ ಎಂದು ಭಾರತೀಯ ಖೋಖೋ ಒಕ್ಕೂಟದ (ಕೆಕೆಎಫ್ಐ) ಅಧ್ಯಕ್ಷ ಸುಧಾಂಶು ಮಿತ್ತಲ್ ಹೇಳಿದ್ದಾರೆ. ಈ ಪ್ರಾಯೋಜಕತ್ವ ಮೊತ್ತವನ್ನು ಕೆಕೆಎಫ್ಐ, ಭಾರತ ತಂಡದ ಸುಧಾರಣೆ, ತರಬೇತಿ ಸೌಕರ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಟೂರ್ನಿಗಳ ಭಾಗವಹಿಸುವಿಕೆಗೆ ವ್ಯಯಿಸಲಿದೆ.
ಟ್ರೋಫಿ ವಿತರಣೆಗೆ ಆಹ್ವಾನಿಸದ ಬಗ್ಗೆ ಗಾವಸ್ಕರ್ ಬೇಸರ; ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟನೆ ಹೀಗಿದೆ…