ಐಷಾರಾಮಿ ಕಾರು ತಯಾರಿಕಾ ಕಂಪನಿ ರೋಲ್ಸ್​ ರಾಯ್ಸ್​ ವಿರುದ್ಧ ಇಡಿಯಿಂದ ದೂರು ದಾಖಲು: ಅಕ್ರಮ ನಗದು ವಹಿವಾಟು ಆರೋಪ

ನವದೆಹಲಿ: ಅಕ್ರಮ ನಗದು ವಹಿವಾಟು ನಡೆಸಿದ ಆರೋಪದಲ್ಲಿ ಐಷಾರಾಮಿ ಕಾರು ತಯಾರಿಕಾ ಕಂಪನಿ ರೋಲ್ಸ್​ ರಾಯ್ಸ್​ ವಿರುದ್ಧ ಸಿಬಿಐ ಬಳಿಕ ಜಾರಿ ನಿರ್ದೇಶನಾಲಯ ಕೂಡ ದೂರು ದಾಖಲಿಸಿಕೊಂಡಿದೆ. ರಾಷ್ಟ್ರದ ಮೂರು ಪ್ರತಿಷ್ಠಿತ ಕಂಪನಿಗಳಿಂದ ಗುತ್ತಿಗೆ ಪಡೆಯುವ ಸಲುವಾಗಿ ಕಂಪನಿಯು ನಗದು ಮೂಲಕ ಅಕ್ರಮವಾಗಿ ಕಮಿಷನ್​ ಪಾವತಿಸಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ರೋಲ್ಸ್​ ರಾಯ್ಸ್​ನ ಇಂಧನ ವಿಭಾಗವು 2007-2011ರ ನಡುವೆ ಹಿಂದೂಸ್ಥಾನ್​ ಏರೋನಾಟಿಕ್ಸ್​ ಲಿಮಿಟೆಡ್​ನಿಂದ (ಎಚ್​ಎಎಲ್​) 286.55 ಕೋಟಿ ರೂ. ಮೊತ್ತದ ಗುತ್ತಿಗೆ ಪಡೆದುಕೊಳ್ಳಲು ಐಕ್ಯತೆಯ ಒಪ್ಪಂದವನ್ನು ಉಲ್ಲಂಘಿಸಿ ಶೇ.10ರಿಂದ ಶೇ.11.3 ಕಮಿಷನ್​ ಅನ್ನು ಆ್ಯಶ್​ಮೋರ್​ ಪ್ರೈವೇಟ್​ ಲಿಮಿಟೆಡ್​ನ ಅಶೋಕ್​ ಪಾಟ್ನಿ ಎಂಬುವರಿಗೆ ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ.

ಈ ವಿಷಯವನ್ನು ಖಚಿತಪಡಿಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಸಿಬಿಐ ದಾಖಲಿಸಿಕೊಂಡಿರುವ ದೂರನ್ನು ಆಧರಿಸಿ, ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಎಂ) ದಾಖಲಿಸಿಕೊಳ್ಳಲಾಗಿದೆ. ಈ ವರದಿಯ ಪ್ರಕಾರ ರೋಲ್ಸ್​ ರಾಯ್ಸ್​ ಕಂಪನಿಯು 2007 ಮತ್ತು 2011ರ ನಡುವೆ ಸಿಂಗಾಪುರ ಮತ್ತು ಹಾಂಕಾಂಗ್​ ಬ್ಯಾಂಕ್​ಗಳ ಮೂಲಕ ಅಂದಾಜು 75 ಕೋಟಿ ರೂ. ಕಮಿಷನ್​ ಅನ್ನು ಅಶೋಕ್​ ಪಾಟ್ನಿಗೆ ಸಂದಾಯ ಮಾಡಲಾಗಿದೆ. ಈ ಮೊತ್ತವನ್ನು ಅವರು ಎಚ್​ಎಎಲ್​, ಒಎನ್​ಜಿಸಿ ಮತ್ತು ಗೇಲ್​ ಸಂಸ್ಥೆಗಳ ಅಧಿಕಾರಿಗಳಿಗೆ ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ. (ಏಜೆನ್ಸೀಸ್​)