ಸಿನಿಮಾ ಟು ಸರ್ಕಾರ MeToo

ನವದೆಹಲಿ: ಲೈಂಗಿಕ ಶೋಷಣೆ ವಿರುದ್ಧ ಪ್ರತಿಭಟಿಸುವ ಮಹಿಳಾ ಧ್ವನಿಯಾಗಿ ಬಾಲಿವುಡ್ ಅಂಗಳದಿಂದ ಆರಂಭವಾದ ‘ಮೀಟೂ (ನಾನೂ ಕೂಡ) ’ ಅಭಿಯಾನವು ರಾಜಕೀಯ, ಮಾಧ್ಯಮ ಸೇರಿ ಎಲ್ಲ ಕ್ಷೇತ್ರಗಳ ದಿಗ್ಗಜರಿಗೆ ನಡುಕ ಹುಟ್ಟಿಸುತ್ತಿದೆ. ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಬಾಲಿವುಡ್​ನ ಕೆಲ ನಟ-ನಟಿಯರು ದತ್ತಾ ಪರ ನಿಂತು ‘ಮೀಟೂ ’ ಎಂಬ ಅಭಿಯಾನ ಚುರುಕುಗೊಂಡಿತ್ತು.

ಮಂಗಳವಾರ ಕೇಂದ್ರ ಸರ್ಕಾರದ ಪ್ರಭಾವಿ ಸಚಿವ ಎಂ.ಜೆ.ಅಕ್ಬರ್ ವಿರುದ್ಧವೂ ಲೈಂಗಿಕ ಶೋಷಣೆ ಆರೋಪ ಕೇಳಿಬರುವ ಮೂಲಕ ಮೀಟೂ ಸರ್ಕಾರದ ಅಂಗಳಕ್ಕೆ ಪ್ರವೇಶಿಸಿದೆ. ಆದರೆ ಈ ಬೆಳವಣಿಗೆ ಕುರಿತು ಅಕ್ಬರ್ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಅಧಿಕೃತ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನೈಜೇರಿಯಾಕ್ಕೆ ಹೋಗಿದ್ದಾರೆ. ಏತನ್ಮಧ್ಯೆ ಮೀಟೂ ಮತ್ತು ಅಕ್ಬರ್ ವಿರುದ್ಧ ಆಂತರಿಕ ತನಿಖೆ ಬಗ್ಗೆ ಪ್ರತಿಕ್ರಿಯಿಸಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿರಾಕರಿಸಿದ್ದಾರೆ.

ಸೋನಮ್ಂದ ಹೊಸ ಬಾಂಬ್: ಕೇಂದ್ರ ಮಹಿಳಾ ಆಯೋಗ ತನ್ನ ಮುಂದಿರುವ ದೂರನ್ನು ಪರಿಗಣಿಸಿದರೆ ರಾಜಕೀಯ ವಲಯದ ಬಣ್ಣ ಬಯಲಾಗಲಿದೆ ಎಂದು ಟ್ವಿಟರ್ ಸೆಲೆಬ್ರಿಟಿ ಸೋನಮ್ ಮಹಾಜನ್ ಟ್ವೀಟ್ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಡ್​ರೂಮ್ಲ್ಲಿ ಸಂದರ್ಶನ!

ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ.ಅಕ್ಬರ್ ವಿರುದ್ಧ ಮಾಜಿ ಸಹೋದ್ಯೋಗಿಗಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಐಷಾರಾಮಿ ಹೋಟೆಲ್ ಕೊಠಡಿಗೆ ಕರೆಸಿ ಸಂದರ್ಶನ ಮಾಡುವುದು ಅಕ್ಬರ್ ಅವರ ಅಭ್ಯಾಸವಾಗಿತ್ತು. ಹೋಟೆಲ್ ಕೊಠಡಿಯ ಹಾಸಿಗೆ ಮೇಲೆ ಕೂರಿಸಿಕೊಂಡು ಸಂದರ್ಶನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಪತ್ರಕರ್ತೆಯೊಬ್ಬರು ಆರೋಪಿಸಿದ್ದಾರೆ.

ಪತ್ರಕರ್ತೆ ಮಾಡಿರುವ ಟ್ವೀಟ್​ಗೆ ಸಹಮತ ವ್ಯಕ್ತಪಡಿಸಿರುವ 10ಕ್ಕೂ ಅಧಿಕ ಪತ್ರಕರ್ತರು, ಅಕ್ಬರ್ ಅವರ ಈ ವರ್ತನೆಯ ಅನುಭವ ನಮಗೂ ಆಗಿದೆ. ಪತ್ರಕರ್ತರ ವಲಯದಲ್ಲಿನ ಚರ್ಚೆಗೂ ಕಾರಣವಾಗಿತ್ತು ಎಂದಿದ್ದಾರೆ.

ಎಲ್ಲಿಂದ ಶುರು ಆಯ್ತು ಮೀಟೂ?

ಅಮೆರಿಕದ ಸಾಮಾಜಿಕ ಹೋರಾಟಗಾರ್ತಿ ತರಾನಾ ಬರ್ಕ್ ಅವರು 2006ರಲ್ಲಿ ಮೀಟೂ ಅಭಿಯಾನ ಆರಂಭಿಸಿದರು. ಆದರೆ ಕಳೆದೆರಡು ವರ್ಷದಿಂದ ಈ ಹೋರಾಟಕ್ಕೆ ಇನ್ನಷ್ಟು ಚುರುಕು ಸಿಕ್ಕಿದೆ. ನೊಬೆಲ್ ಸಾಹಿತ್ಯ ಪುರಸ್ಕಾರ ಆಯ್ಕೆ ಸಮಿತಿ ಸದಸ್ಯ ಜೀನ್ ಕ್ಲೌಡ್ ಅರ್ನಾಲ್ಟ್ ವಿರುದ್ಧವೂ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ ಆರೋಪ ಎದುರಾಯಿತು. ಮೀಟೂ ಅಭಿಯಾನದ ಮೂಲಕ ಆಯ್ಕೆ ಸಮಿತಿ ರದ್ದಾಗುವಂತಾಯಿತು. ಕೆಲ ದಿನಗಳ ಹಿಂದೆ ಜೀನ್ ಕ್ಲೌಡ್ ವಿರುದ್ಧದ ಆರೋಪ ಸಾಬೀತಾಗಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ರಮ್ಯಾ ವಿರುದ್ಧ ದೋಷಾರೋಪ ಪಟ್ಟಿ!

ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣ ತಂಡದಲ್ಲಿದ್ದ ಚಿರಾಗ್ ಪಟ್ನಾಯಕ್ ಅವರು ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಬಗ್ಗೆ ರಾಹುಲ್ ಹಾಗೂ ರಮ್ಯಾಗೆ ದೂರು ನೀಡಿದ್ದರೂ ಯಾವುದೆ ಕ್ರಮ ಜರುಗಿಸಿರಲಿಲ್ಲ. ಬದಲಾಗಿ ಸಂತ್ರಸ್ತೆಗೇ ನಿಂದಿಸಿದ್ದರು ಎಂದು ದೂರಲಾಗಿದೆ.

ತನ್ನನ್ನು ಅನುಚಿತವಾಗಿ ಯಾರಾದರೂ ರ್ಸ³ಸಿದ್ದರೆ ಮಹಿಳೆ ಅದನ್ನು ಎಂದಿಗೂ ಮರೆಯು ವುದಿಲ್ಲ. ಆದರೆ ಆಕೆ ಅದನ್ನು ಸಮಾಜದ ಎದುರು ಹೇಳುವ ಪ್ರಯತ್ನ ಮಾಡಿದ್ದರೆ ಆಕೆಯನ್ನು ನಿಯಂತ್ರಿಸುವ ಪ್ರಶ್ನೆಯಿಲ್ಲ. 10 ವರ್ಷದ ಹಿಂದೆ ನಡೆದಿದ್ದರೂ ಸರಿಯೇ ಅದು ಗಂಭೀರ ಪ್ರಕರಣವೇ ಆಗುತ್ತದೆ.

| ಮೇನಕಾ ಗಾಂಧಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

ಪುರುಷ ಸಹೋದ್ಯೋಗಿಗ ಳಿಂದ ಮಹಿಳಾ ಪತ್ರಕರ್ತೆಯರ ಮೇಲೆ ಲೈಂಗಿಕ ಶೋಷಣೆಯ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿದೆ. ಇದನ್ನು ನಾವು ಖಂಡಿಸುತ್ತೇವೆ. ಹಿರಿಯ ಸಹೋದ್ಯೋಗಿಗಳು ಇಂಥ ಹೀನಾಯ ಕೃತ್ಯ ಎಸಗಿದರೆ ಇನ್ನೂ ನೀಚತನ ಎನಿಸುತ್ತದೆ.

| ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ

ಬಾಲಿವುಡ್ ಸ್ಟಾರ್​ಗಳಿಗೆ ನಡುಕ

ತನುಶ್ರೀ ದತ್ತಾ ಹೊರಿಸಿದ ಲೈಂಗಿಕ ಕಿರುಕುಳ ಆರೋಪವು ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಶಾಕ್​ನಲ್ಲೇ ಬಾಲಿವುಡ್ ಇರುವಾಗ ಮತ್ತೊಂದಿಷ್ಟು ಬಾಲಿವುಡ್ ಸ್ಟಾರ್​ಗಳ ಹೆಸರು ಬಹಿರಂಗವಾಗಿದೆ. ‘ಸಂಸ್ಕಾರಿ ನಟ’ ಎಂದೇ ಖ್ಯಾತರಾಗಿರುವ ಆಲೋಕ್​ನಾಥ್, ಗಾಯಕ ಕೈಲಾಶ್ ಖೇರ್, ಅಭಿಜೀತ್, ನಟ ರಜತ್ ಕಪೂರ್, ನಿರ್ದೇಶಕ ವಿಕಾಸ್ ಬಾಹ್ಲ, ಬರಹಗಾರ ವರುಣ್ ಗ್ರೋವರ್ ವಿರುದ್ಧವೂ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ ಆರೋಪಗಳು ಕೇಳಿ ಬಂದಿವೆ. ತಾರಾ ಎನ್ನುವ ಧಾರವಾಹಿ ಶೂಟಿಂಗ್ ಸಂದರ್ಭದಲ್ಲಿ ಅಲೋಕ್​ನಾಥ್ ಅತ್ಯಾಚಾರ ಮಾಡಿದ್ದರು ಎಂದು ಸಹನಟಿಯೊಬ್ಬರು ಆರೋಪಿಸಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಅಲೋಕ್​ನಾಥ್, ‘ನಾನು ಅತ್ಯಾಚಾರ ಮಾಡಿಲ್ಲ, ಬೇರೊಬ್ಬ ವ್ಯಕ್ತಿಯಿಂದ ಆಗಿರಬೇಕು. ನನ್ನಿಂದಾಗಿ ಬೆಳೆದು ಈಗ ಇಂತಹ ಆರೋಪ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.