ಶಾಹಿದ್​ ಅಫ್ರಿದಿ ವಿಶ್ವದಾಖಲೆಗೆ ಕಾರಣ ಸಚಿನ್​ ಬ್ಯಾಟ್​!

ಅಬುದಾಭಿ: ಏಕದಿನ ಪಂದ್ಯದಲ್ಲಿ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದ ಪಾಕಿಸ್ತಾನದ ಸ್ಫೋಟಕ ಆಟಗಾರ ಶಾಹಿದ್​ ಅಫ್ರಿದಿ, ಆ ಸಾಧನೆ ಹಿಂದಿನ ರಹಸ್ಯವೊಂದನ್ನು ಬಹಿರಂಗಪಡಿಸಿದ್ದಾರೆ.

ಅಫ್ರಿದಿ ಈ ಅಮೋಘ ಸಾಧನೆ ಮಾಡಿದ್ದು ಸಚಿನ್​ ಅವರ ಬ್ಯಾಟ್​ನಿಂದ ಎಂಬ ಆಸಕ್ತಿದಾಯಕ ವಿಷಯವನ್ನು ಬುಧವಾರ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಆಗ ತಾನೇ ನಾನು ಪಾಕಿಸ್ತಾನ ತಂಡವನ್ನು ಸೇರಿಕೊಂಡಿದ್ದೆ. ನೈರೋಬಿಯಲ್ಲಿ ನಡೆಯಬೇಕಿದ್ದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯಕ್ಕೆ ಅಭ್ಯಾಸ ಮಾಡುತ್ತಿರುವ ವೇಳೆ ವಿಕಿ ಭಾಯ್​(ವಾಕರ್​ ಯೂನಿಸ್​) ನನ್ನ ಬಳಿ ಬಂದು ಒಂದು ಬ್ಯಾಟ್​ ಕೊಟ್ಟರು. ಇದರಲ್ಲಿ ಆಡಿ ನೋಡು. ಇದು ಸಚಿನ್​ ಆಡುತ್ತಿದ್ದ ಬ್ಯಾಟ್​ ಎಂದು ಹೇಳಿದರು.

ಬ್ಯಾಟ್​ ನನಗೆ ಉತ್ತಮ ಎನಿಸಿತು. ನಾನು ಪ್ರಯತ್ನಿಸಿದೆ. ಮೊದಲ ಪಂದ್ಯದಲ್ಲೇ ಕೇವಲ 37 ಎಸೆತದಲ್ಲಿ 100 ರನ್​ ಬಾರಿಸುವ ಮೂಲಕ ಆ ದಿನ ನನ್ನ ಜೀವನದಲ್ಲಿ ಅವಿಸ್ಮರಣಿಯವಾಗಿ ಉಳಿಯಿತು ಎಂದು ತಿಳಿಸಿದ್ದಾರೆ.

ಈ ಮೂಲಕ ಅಫ್ರಿದಿ ಅವರು 16 ವರ್ಷದಲ್ಲೇ ದಾಖಲೆಯ ಪುಟವನ್ನು ಸೇರಿದರು. ಅಕ್ಟೋಬರ್​ 4, 1996 ರಂದು ಶ್ರೀಲಂಕಾದ ವಿರುದ್ಧ ನಡೆದ ಪಂದ್ಯದಲ್ಲಿ ಈ ಸಾಧನೆ ಗೈದರು. ಈ ಪಂದ್ಯದಲ್ಲಿ ಅವರು 11 ಸಿಕ್ಸರ್​ ಹಾಗೂ 6 ಬೌಂಡರಿಗಳನ್ನು ಬಾರಿಸಿದ್ದರು. ಇಂದಿಗೂ ಇದು ಅತಿವೇಗದ ಶತಕ ದಾಖಲೆಯಾಗಿ ಉಳಿದಿದೆ.

ಸಚಿನ್​ ಬ್ಯಾಟ್​ನಲ್ಲಿ ಆಡಿದ್ದು ಮಹಾನ್​ ಗೌರವ ನೀಡಿದಂತಾಯಿತು. ಅವರೊಬ್ಬರು ಲೆಜೆಂಡರಿ ಆಟಗಾರ. ಸಚಿನ್​ ಅವರು ವಿಕಿ ಭಾಯ್​ಗೆ ಬ್ಯಾಟ್​ ನೀಡಿ, ಸಿಯಾಲ್ಕೋಟ್​ನಲ್ಲಿ ಇದೇ ರೀತಿಯ ಬ್ಯಾಟ್ ಅನ್ನು ತೆಗೆದುಕೊಂಡು ಬರಲು ಹೇಳಿದ್ದರು ಎಂದು ಅಫ್ರಿದಿ ತಿಳಿಸಿದರು.

ಆ ಬ್ಯಾಟ್​ನಲ್ಲಿ ನಾನು ಶೂನ್ಯಕ್ಕೂ ಔಟಾಗಿದ್ದೇನೆ. ಸದ್ಯ ಆ ಬ್ಯಾಟ್​ ನನ್ನ ಬಳಿಯೇ ಇದೆ. ಕೆಲವೊಮ್ಮೆ ಕೆಲವರು ಅದನ್ನು ಹರಾಜಿಗೆ ಇಡುವಂತೆ ಹೇಳುತ್ತಾರೆ. ಆದರೆ, ನಾನು ಅದನ್ನು ಜೋಪಾನವಾಗಿ ನನ್ನ ಬಳಿಯೇ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.

ಸಚಿನ್​ ಬ್ಯಾಟ್​ ನನ್ನ ಅಮೂಲ್ಯವಾದ ಆಸ್ತಿಗಳಲ್ಲಿ ಒಂದಾಗಿದೆ. ದೇಶದ ಪರವಾಗಿ ಆಡಿದ ಮೊದಲ ಪಂದ್ಯದಲ್ಲೇ ನಾನು ಅದನ್ನು ಬಳಸಿ, ವಿಶ್ವದಾಖಲೆ ನಿರ್ಮಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)