ಅವಳಿ ಬಾಂಬ್‌ ಸ್ಫೋಟ: ಇಬ್ಬರು ಪತ್ರಕರ್ತರು ಸೇರಿ 20 ಜನ ಸಾವು

ಕಾಬುಲ್​: ಅಪ್ಘಾನಿಸ್ತಾನದ ಕಾಬುಲ್​ನ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಸಂಭವಿಸಿರುವ ಅವಳಿ ಬಾಂಬ್ ಸ್ಫೋಟದಿಂದಾಗಿ 20 ಮಂದಿ ಮೃತಪಟ್ಟು, 70ಕ್ಕೂ ಅಧಿಕ ಜನ ಗಾಯಗೊಂಡಿರುವ ಘಟನೆ ನಡೆದಿದೆ.

ದಾತ್-ಇ-ಬರ್ಚಿ ಪ್ರದೇಶದಲ್ಲಿ ಸ್ಫೋಟಗೊಂಡಿದ್ದು, ಸದ್ಯಕ್ಕೆ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಮೊದಲ ಬಾರಿಗೆ ಆತ್ಮಾಹುತಿ ಬಾಂಬ್‌ರ್‌ನಿಂದ ಸ್ಫೋಟ ಸಂಭವಿಸಿದ್ದು, ಸ್ವಲ್ಪ ಸಮಯದ ನಂತರ ಕಾರ್‌ ಬಾಂಬ್‌ ಸ್ಫೋಟಗೊಂಡಿದೆ ಎಂದು ಆಂತರಿಕ ಇಲಾಖೆಯ ವಕ್ತಾರ ನಜೀಬ್‌ ಡ್ಯಾನಿಷ್‌ ತಿಳಿಸಿದ್ದಾರೆ.

ಘಟನೆ ಕುರಿತಂತೆ ಬಾಂಬ್‌ ಸ್ಫೋಟದಲ್ಲಿ ಮೃತಪಟ್ಟವರಿಗೆ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ ಸಂತಾಪ ಸೂಚಿಸಿದ್ದು, ನಾಗರಿಕರು, ಮಾಧ್ಯಮ ಮಂದಿಯನ್ನು ದೇಶದಲ್ಲಿ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವೀಯತೆಯ ಮೇಲೆ ನಡೆಯುತ್ತಿರುವ ಆಕ್ರಮಣವಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯಲ್ಲಿ ಮಾಧ್ಯಮ ಸಂಸ್ಥೆಯೊಂದರ ಕ್ಯಾಮರಾಮನ್‌ ಮತ್ತು ರಿಪೋರ್ಟರ್‌ ಮೃತಪಟ್ಟಿದ್ದು, ಸ್ಥಳೀಯ ಮಾಧ್ಯಮವೊಂದರ ನಾಲ್ಕು ಜನ ಸಿಬ್ಬಂದಿ ಗಾಯಗೊಂಡಿದ್ದಾರೆ. (ಏಜೆನ್ಸೀಸ್)