ಗ್ರಾಹಕರ ಹಕ್ಕು ಸದುಪಯೋಗಕ್ಕೆ ಸಲಹೆ

ಬೇಲೂರು :  ಗ್ರಾಹಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಹಲವಾರು ಹಕ್ಕುಗಳನ್ನು ಜಾರಿ ತಂದಿದ್ದು, ಅದನ್ನು ಗ್ರಾಹಕರು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ನಾಗೇಶ್ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಬಳಕೆದಾರರ ವೇದಿಕೆ ಸಂಯುಕ್ತಾಶ್ರಯದಲ್ಲಿ ವಿಶ್ವ ಗ್ರಾಹಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರಕು ಹಾಗೂ ಸೇವೆಯಲ್ಲಿ ಉತ್ಪಾದಕರು ಮಾಡುತಿದ್ದ ಮೋಸವನ್ನು ಕಂಡು ಕೇಂದ್ರ ಸರ್ಕಾರ ಹೊಸ ಕಾಯ್ದೆಯನ್ನು ಜಾರಿ ತಂದಿದೆ. ಆದ್ದರಿಂದ ಗ್ರಾಹಕರು ಸಹ ತಾವುಗಳು ಅಂಗಡಿ ಮುಂಗಟ್ಟು ಸೇರಿದಂತೆ ವಿವಿಧ ರೀತಿಯ ವಹಿವಾಟು ನಡೆಸಿದ ಸಂದರ್ಭ ವಸ್ತುವಿನ ಮೇಲೆ ನಿಗದಿ ಮಾಡಿರುವ ದರವನ್ನು ಕೊಟ್ಟು ಖರೀದಿ ಮಾಡಬೇಕು. ವಸ್ತುವಿನ ಮೇಲಿನ ನಿಗದಿತ ದರಕ್ಕಿಂತ ಹೆಚ್ಚು ಹಣವನ್ನು ಕೇಳಿದರೆ ಆತನಿಂದ ಅಧಿಕೃತವಾದ ಬಿಲ್ ಪಡೆದು ವರ್ತಕನ ವಿರುದ್ಧ ಗ್ರಾಹಕರು ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ನ್ಯಾಯ ಮತ್ತು ಪರಿಹಾರ ಪಡೆಯಬಹುದಾಗಿದೆ ಎಂದರು.

ವಕೀಲರ ಸಂಘದ ಕಾರ್ಯದರ್ಶಿ ಜಿ.ಎಂ.ಸಿದ್ದೇಗೌಡ ಗ್ರಾಹಕರ ಹಕ್ಕುಗಳ ಕುರಿತು ಮಾತನಾಡಿ, ಗ್ರಾಹಕರು ತಾವು ಕೊಳ್ಳುವ ವಸ್ತುಗಳು ನಷ್ಟ ಸಂಭವಿಸಿದಾಗ, ವರ್ತಕ ಹೆಚ್ಚು ಹಣ ಪಡೆದ ಸಂದರ್ಭ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸಬಹುದು. ಗ್ರಾಹಕರು 20 ಲಕ್ಷದೊಳಗಿನ ಪರಿಹಾರ ಕೇಳುವುದಾದರೆ ಜಿಲ್ಲಾ ಕೇಂದ್ರದಲ್ಲಿ ದೂರು ಸಲ್ಲಿಸಬಹುದು. ಅದಕ್ಕಿಂತ ಹೆಚ್ಚು ಪರಿಹಾರಕ್ಕಾದರೆ ರಾಜ್ಯ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು. 1 ಕೋಟಿಗೂ ಹೆಚ್ಚು ಪರಿಹಾರ ಕೇಳುವವರು ರಾಷ್ಟ್ರೀಯ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ವಕೀಲರು ಅಥವಾ ಗ್ರಾಹಕರೇ ನೇರವಾಗಿ ವಾದ ಮಾಡಬಹುದಾಗಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಗ್ರಾಹಕರ ದೂರಿಗೆ ವರ್ತಕ ಉಡಾಫೆಯಿಂದ ವರ್ತಿಸಿದರೆ 3 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸುವುದಕ್ಕೆ ಅವಕಾಶವಿದೆ ಎಂದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ರತೀಶ್, ಸಹಾಯಕ ಸರ್ಕಾರಿ ಅಭಿಯೋಜಕ ಮೋತಿಲಾಲ್ ಚೌದರಿ, ಬಳಕೆದಾರರ ವೇದಿಕೆ ಅಧ್ಯಕ್ಷ ಪದ್ಮೇಗೌಡ, ಗೌ.ಅಧ್ಯಕ್ಷ ರಾಜೇಗೌಡ, ಕಾರ್ಯಾಧ್ಯಕ್ಷ ಶೇಷೇಗೌಡ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿದ್ದೇಗೌಡ, ಕಾರ್ಯದರ್ಶಿ ಶಿವಮೂರ್ತಿ ಇದ್ದರು.