ಹಣ ದೋಚಿದ್ದ ಆರೋಪಿಗಳ ಬಂಧನ

ತರೀಕೆರೆ: ಬೆಂಗಳೂರಿನ ಗೋಲ್ಡ್ ಕಂಪನಿಯೊಂದರ ಉದ್ಯೋಗಿಯನ್ನು ಬೆದರಿಸಿ ಆತನಿಂದ 30 ಸಾವಿರ ರೂ. ದೋಚಿದ್ದ ವಂಚಕರು ಲಕ್ಕವಳ್ಳಿ ಪೊಲೀಸರು ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಲಕ್ಕವಳ್ಳಿ ಠಾಣಾ ವ್ಯಾಪ್ತಿಯ ಸೋಂಪುರ ಗ್ರಾಮದ ಮಣಿಕಂಠ ಮತ್ತು ಪಂಪಾಪತಿ ಆರೋಪಿಗಳು.

ಬೆಂಗಳೂರು ಯಶವಂತಪುರದ ಸತೀಶ್ ಎಂಬುವವರು ಗೋಲ್ಡ್ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸೋಂಪುರ ಗ್ರಾಮದ ಮಣಿಕಂಠ ಮತ್ತು ಪಂಪಾಪತಿ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಪ್ರತಿನಿತ್ಯ ಬಿತ್ತರಗೊಳ್ಳುವ ಅಡವಿಟ್ಟ ಚಿನ್ನ ಬಿಡಿಸಿ ಮಾರುಕಟ್ಟೆ ದರಕ್ಕೆ ಕೊಂಡುಕೊಳ್ಳುವ ಜಾಹೀರಾತು ನೋಡಿ ಜಾಹೀರಾತಿನಲ್ಲಿ ಪ್ರಕಟಿಸಿದ ಸತೀಶ್ ನಂಬರ್​ಗೆ ಕರೆ ಮಾಡಿದ್ದಾರೆ.

ಕರೆ ಮಾಡಿದ ನಂತರ ಆರೋಪಿ ಮಣಿಕಂಠ ಎಂಬಾತ ನನಗೆ ಸೇರಿದ 30 ಸಾವಿರ ರೂ. ಮೌಲ್ಯದ ಚಿನ್ನಾಭರಣಗಳನ್ನು ಬ್ಯಾಂಕ್​ನಲ್ಲಿ ಅಡವಿಡಲಾಗಿದೆ. ನೀವು 30 ಸಾವಿರ ರೂ. ತೆಗೆದುಕೊಂಡು ಬರುವುದಾದರೆ ನಾನಿಟ್ಟಿರುವ ಚಿನ್ನವನ್ನು ಬ್ಯಾಂಕ್​ನಿಂದ ಬಿಡಿಸಿ ನಿಮ್ಮ ಕಂಪನಿಗೆ ಕೊಡುವುದಾಗಿ ನಂಬಿಸಿದ್ದಾರೆನ್ನಲಾಗಿದೆ. ಆರೋಪಿ ಮಣಿಕಂಠನ ಮಾತಿಗೆ ಮರುಳಾದ ಉದ್ಯೋಗಿ ಸತೀಶ್ ಆ.13ರಂದು ಆರೋಪಿ ಸೂಚಿಸಿದ ರಂಗೇನಹಳ್ಳಿ ಗ್ರಾಮಕ್ಕೆ ಬೆಂಗಳೂರಿನಿಂದ ಬಂದು ಭೇಟಿಯಾಗಿದ್ದಾನೆ.

ಸತೀಶ್ ಭೇಟಿಯಾದ ಕೂಡಲೆ ಆತನನ್ನು ಮಣಿಕಂಠ ಮತ್ತವನ ಸ್ನೇಹಿತ ಪಂಪಾಪತಿ ಆಟೋದಲ್ಲಿ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸತೀಶ್ ಹತ್ತಿರವಿದ್ದ 30 ಸಾವಿರ ರೂ. ದೋಚಿ ಪರಾರಿಯಾಗಿದ್ದಾರೆ. ಸತೀಶ್ ಸಂಜೆ 6.30ಕ್ಕೆ ಲಕ್ಕವಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದರು. ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಹಾಗೂ ಪಿಎಸ್​ಐ ಸಿ.ಎಲ್.ಚಂದ್ರಶೇಖರ್ ನೇತೃತ್ವದ ತಂಡ ಮಂಗಳವಾರ ಬೆಳಗ್ಗೆ 7 ಗಂಟೆಗೆ ಆರೋಪಿಗಳನ್ನು ತರೀಕೆರೆ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆಯಿತು.

ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಪ್ರಕಾಶ್, ಭೈರೇಶ್, ಧನಪಾಲ್​ನಾಯ್ಕ, ಶಂಕರಪ್ಪ, ಮಂಜುನಾಥ, ರಾಜಕುಮಾರ್, ಹರೀಶ್ ಇದ್ದರು.