ಬೆಟ್ಟದಪುರ: ಮೈಸೂರು ಜಿಲ್ಲಾ ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಪಾವತಿ ಮಾಡಲು ಯಾವುದೇ ಸಮಸ್ಯೆಯಾಗದಂತೆ ಮುಂಗಡ ಪಾವತಿಯನ್ನು ಸಂಘಗಳ ಬೇಡಿಕೆಯಂತೆ ಹಾಕಿಸಿಕೊಡಲಾಗುತ್ತಿದೆ ಎಂದು ಮೈಮುಲ್ ನಿರ್ದೇಶಕ ಬಿ.ಎ.ಪ್ರಕಾಶ್ ಹೇಳಿದರು.
ಬೆಟ್ಟದಪುರ ಸಮೀಪದ ಚಿಕ್ಕನೇರಳೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮಂಗಳವಾರ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಹಾಲು ಒಕ್ಕೂಟ ಆರ್ಥಿಕ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಹಾಲಿನ ಉತ್ಪಾದನೆಗಳನ್ನು ಸರಿಯಾದ ಕ್ರಮದಲ್ಲಿ ಮಾರಾಟ ಮಾಡಲು ಸರ್ಕಾರದ ನೆರವಿನ ಮೂಲಕ ಹೆಚ್ಚು ಒತ್ತು ನೀಡಲಾಗಿದೆ. ಉತ್ಪಾದಕರಿಗೆ ಯಾವುದೇ ಸಮಸ್ಯೆಯಾಗದಂತೆ ಒಕ್ಕೂಟದಿಂದ ನೋಡಿಕೊಳ್ಳಲಾಗುತ್ತಿದೆ. ಮೈಮುಲ್‌ನಿಂದ ಸಿಗುವ ವಿಮೆ ಹಾಗೂ ಯಂತ್ರೋಪಕರಣಗಳ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಉತ್ಪಾದಕರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಸಿ.ವಿ.ವೆಂಕಟೇಶ್, ಉಪಾಧ್ಯಕ್ಷ ಸಿ.ರಾಜಶೇಖರ್, ನಿರ್ದೇಶಕ ಹನುಮೇಗೌಡ, ಸಿ.ಜೆ.ಸುಬ್ಬಣ್ಣ, ಸಿದ್ದೇಗೌಡ, ಮಂಜುನಾಥ್, ಸೈಯ್ಯದ್ ಅಬ್ದುಲ್ ಹಮೀದ್, ನಾಗನಾಯ್ಕ, ರೇವಣ್ಣ, ಅನಿತಾ, ಕಮಲಮ್ಮ, ರುಕ್ಮಿಣಿ, ಕಾರ್ಯದರ್ಶಿ ಸಿ.ಟಿ.ಮಾದು, ಸಿಬ್ಬಂದಿ ರಮೇಶ್ ಸೇರಿದಂತೆ ಸದಸ್ಯರು ಇದ್ದರು.