ಅನೈತಿಕ ಸಂಬಂಧ ಅಪರಾಧವಲ್ಲವೇ?!

ಅಕ್ರಮ ಸಂಬಂಧವನ್ನು ಕ್ರಿಮಿನಲ್ ಅಪರಾಧವೆಂದು ಸಾಬೀತುಪಡಿಸಿ, ಶಿಕ್ಷೆ ನೀಡಲು ಇದುವರೆಗೂ ಸಾಧ್ಯವಾಗಿರಲಿಲ್ಲ. ಹೀಗಾಗಿ, ಅದನ್ನು ಆ ವ್ಯಾಪ್ತಿಯಿಂದ ಸುಪ್ರೀಂಕೋರ್ಟ್ ತೆಗೆದುಹಾಕಿದೆ. ಆದರೆ, ಅಕ್ರಮ ಸಂಬಂಧ ಎನ್ನುವುದು ನಾಗರಿಕ ಅಪರಾಧ ಹೌದು. ಪತಿಯಾದರೂ, ಪತ್ನಿಯೇ ಆದರೂ ಇಂಥದ್ದೊಂದು ಸಂಬಂಧ ಇರಿಸಿಕೊಂಡರೆ ಅದು ಕುಟುಂಬದ ಆರೋಗ್ಯಕ್ಕೆ ಹಾನಿಯಾಗುವುದಂತೂ ಸತ್ಯ. ಈ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಇರುವ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಇದು.

| ಸುಮನಾ ಲಕ್ಷ್ಮೀಶ

‘ಅನೈತಿಕ ಸಂಬಂಧ ಅಪರಾಧವಲ್ಲ…’ ಎನ್ನುವ ಮಾತು ದೇಶದ ಅತ್ಯುನ್ನತ ನ್ಯಾಯದಾನ ಸಂಸ್ಥೆಯಾಗಿರುವ ಸುಪ್ರೀಂಕೋರ್ಟ್​ನಿಂದ ಇತ್ತೀಚೆಗೆ ಬಂದಾಗ ಎಲ್ಲರೂ ಒಮ್ಮೆ ಅವಾಕ್ಕಾಗಿದ್ದು ನಿಜ. ‘ತೀರ್ಪ ಸರಿಯಿಲ್ಲ, ಮಹಿಳೆಯರಿಗೆ ಹಾನಿಯಾಗುವುದು ಖಂಡಿತ’ ಎನ್ನುವ ಅಭಿಪ್ರಾಯಗಳು ಎಲ್ಲೆಡೆ ಕೇಳಿಬಂದವು. ‘158 ವರ್ಷಗಳ ಹಳೆಯ ಅಕ್ರಮ ಸಂಬಂಧದ (ಅಡಲ್ಟರಿ) ಕುರಿತಾದ ಕಾನೂನಿನಲ್ಲಿರುವ 497ನೇ ಪ್ರಾವಿಷನ್ ಪ್ರಕಾರ ಇದ್ದ ‘ಮಹಿಳೆ ಪುರುಷನ ಸ್ವತ್ತು, ಆಕೆ ಆತನ ಅಧೀನಳು’ ಎನ್ನುವ ಅಂಶವನ್ನು ತೆಗೆದುಹಾಕಿದ್ದೇವೆ. ಇದರಿಂದ ಲಿಂಗ ತಾರತಮ್ಯ ಕೊನೆಯಾದಂತಾಗಿದೆ’ ಎಂದು ಸುಪ್ರೀಂಕೋರ್ಟ್ ಹೇಳಿದಾಗಲಂತೂ ಇನ್ನಷ್ಟು ಗೊಂದಲಗಳು ಮೂಡಿದ್ದವು. ಅಕ್ರಮ ಸಂಬಂಧ ಅಪರಾಧವಲ್ಲ ಎನ್ನುವಲ್ಲಿ ಮಹಿಳೆಯರ ಘನತೆಯನ್ನು ಎತ್ತಿ ಹಿಡಿದಿದ್ದು ಹೇಗೆ ಎನ್ನುವ ಪ್ರಶ್ನೆಯೂ ಮೂಡಿತ್ತು. ಅನೈತಿಕತೆ ಕ್ರಿಮಿನಲ್ ಅಪರಾಧವಾಗದಿರಬಹುದು, ಆದರೆ, ಅದು ಸಿವಿಲ್ ವ್ಯಾಪ್ತಿಯಲ್ಲಿ ಅಪರಾಧವೇ ಆಗಿರುತ್ತದೆ ಎನ್ನುವ ಅಂಶವನ್ನು ಎಲ್ಲರೂ ಮರೆತರು. ಇದೀಗ, ಸುಪ್ರೀಂಕೋರ್ಟ್​ನ ಉದ್ದೇಶ ನಿಧಾನವಾಗಿ ಮನವರಿಕೆಯಾಗುತ್ತಿದೆ. ತೀರ್ಪನ್ನು ಅಧ್ಯಯನ ಮಾಡಿರುವ ಕಾನೂನು ತಜ್ಞರು ‘ಇದು ನಿಜಕ್ಕೂ ಮಹಿಳೆಯರಿಗೆ ಘಾಸಿಯಾಗುವಂಥದ್ದೇನೂ ಒಳಗೊಂಡಿಲ್ಲ, ಬದಲಾಗಿ, ಮಹಿಳೆ ಪುರುಷನ ಲೈಂಗಿಕ ಸ್ವತ್ತು ಎನ್ನುವ ಅಂಶವನ್ನು ತೆಗೆದುಹಾಕಿದೆ. ಇದರ ಜತೆಗೆ, ಇದುವರೆಗೆ ಅನೈತಿಕ ಸಂಬಂಧದ ಆಧಾರದ ಮೇಲೆ ಯಾರಿಗೂ ಕ್ರಿಮಿನಲ್ ಶಿಕ್ಷೆಯೇ ಆಗಿರದ, ಬಹುತೇಕ ಸತ್ತಂತೆ ಇದ್ದ ಅಂಶಕ್ಕೂ ತೆರೆ ಎಳೆದಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿವಾದಕ್ಕೆಡೆ ಮಾಡಿದ್ದ ‘ಅನುಮತಿ’: ಅಡಲ್ಟರಿ ಕಾನೂನಿನ 497ರ ಪ್ರಾವಿಷನ್​ನಲ್ಲಿದ್ದ ಕೆಲವು ಅಂಶಗಳ ಬಗ್ಗೆ 1954ರಿಂದಲೂ ಚರ್ಚೆ ನಡೆದಿತ್ತು ಎನ್ನುವುದು ಗಮನಾರ್ಹ. ಇದರ ಪ್ರಕಾರ, ಅನೈತಿಕ ಸಂಬಂಧ ಇರಿಸಿಕೊಂಡ ಪತಿಯ ಮೇಲೆ ಪ್ರಕರಣ ದಾಖಲಿಸಲು ಪತ್ನಿಗೆ ಅವಕಾಶವಿರಲಿಲ್ಲ. ಆಕೆ ಸಿವಿಲ್ ಗ್ರೌಂಡ್ ಮೇಲೆ ಮಾತ್ರ ಕೇಸು ಹಾಕಬಹುದಿತ್ತು. ಅಲ್ಲದೆ, ಪತಿ ಅನುಮತಿಯಿಲ್ಲದೆ ಇನ್ನೊಬ್ಬ ಪುರುಷ ಆತನ ಪತ್ನಿಯ ಜತೆಗೆ ಸಂಬಂಧ ಇರಿಸಿಕೊಂಡರೆ ಅದು ತಪ್ಪು, ಅನುಮತಿ ಇದ್ದರೆ ಅಪರಾಧವಲ್ಲ ಎನ್ನುವ ಅಂಶಗಳಿದ್ದವು. ಇಲ್ಲಿ ‘ಅನುಮತಿ’ ಎನ್ನುವ ಶಬ್ದವೇ ಮಹಿಳೆಯನ್ನು ಸ್ವತ್ತು ಎನ್ನುವಂತೆ ಬಿಂಬಿಸಿತ್ತು. ಇದು ಸಂವಿಧಾನದ ಸಮಾನತೆಯ ಆಶಯಕ್ಕೆ ವಿರುದ್ಧವಾಗಿತ್ತು. ಹೀಗಾಗಿ, ಇದರ ಬಗ್ಗೆ ಸಾಕಷ್ಟು ಚರ್ಚೆ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. 1985ರಲ್ಲಿಯೇ ಸೌಮಿತ್ರಿ ವಿಷ್ಣು ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಇದರ ಪ್ರಸ್ತುತತೆಯ ಕುರಿತು ಚರ್ಚೆಯಾಗಿತ್ತು.

ಚಿತ್ರವಿಚಿತ್ರ ತೀರ್ಪುಗಳು!: ಅಕ್ರಮ ಸಂಬಂಧದ ಕುರಿತು ವಿಚಿತ್ರ ಎನಿಸುವಂಥ ತೀರ್ಪಗಳೂ ಬಂದಿವೆ. 1988ರಲ್ಲಿ ಜಿ. ಕೊಂಡಯ್ಯ ವರ್ಸಸ್ ಗಾಳಿ ಅಂಕಮ್ಮ ಪ್ರಕರಣದಲ್ಲಿ ‘ಅಕ್ರಮ ಸಂಬಂಧದಿಂದ ಒಮ್ಮೆ ಮಾತ್ರ ಲೈಂಗಿಕ ಕ್ರಿಯೆ ನಡೆದರೂ ಅದು ಅಪರಾಧ’ ಎನ್ನುವ ತೀರ್ಪು ಬಂದಿತ್ತು. 1991ರ ಸಂಜುಕ್ತಾ ಪ್ರಧಾನ್ ವರ್ಸಸ್ ಲಕ್ಷ್ಮೀನಾರಾಯಣ ಪ್ರಧಾನ್ ಪ್ರಕರಣದಲ್ಲಿ ನಿರಂತರ ಅಕ್ರಮ ಲೈಂಗಿಕ ಕ್ರಿಯೆ ಮಾತ್ರ ಅಪರಾಧ ಎಂದು ಹೇಳಲಾಗಿತ್ತು! ಅಲ್ಲದೆ, ಪತಿಯ ಅಕ್ರಮ ಸಂಬಂಧದ ಕಾರಣದಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡರೆ ಎಲ್ಲ ಸಂದರ್ಭದಲ್ಲೂ ಅದನ್ನು ಕ್ರೌರ್ಯ ಎನ್ನಲು ಸಾಧ್ಯವಿಲ್ಲ ಎಂದು ಸಹ ಸುಪ್ರೀಂ 2015ರಲ್ಲಿ ಹೇಳಿತ್ತು! ಆದರೆ, 2018ರಲ್ಲಿ ಜಸ್ಟೀಸ್ ಭಾನುಮತಿ ಮತ್ತು ವಿನೀತ್ ಸರಣ್ ಅವರ ಪೀಠ, ಪತಿಯ ಅಕ್ರಮ ಸಂಬಂಧದಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡರೆ ಅದು ಕ್ರೌರ್ಯ ಎಂದೇ ಪರಿಗಣಿತವಾಗುತ್ತದೆ ಎಂದಿತ್ತು. ಹೀಗೆ ಕಾಲದಿಂದ ಕಾಲಕ್ಕೆ ಅನೇಕ ತಿದ್ದುಪಡಿ, ತೀರ್ಪಗಳು ಈ ಕುರಿತಾಗಿ ಬರುತ್ತಲೇ ಇವೆ.

ಯಾರಿಗೂ ಶಿಕ್ಷೆ ಆಗಿಲ್ಲ

ಅಡಲ್ಟರಿ ಕೇಸಿನಲ್ಲಿ ಇದುವರೆಗೆ ಯಾರಿಗೂ ಶಿಕ್ಷೆ ಕೂಡ ಆಗಿಲ್ಲ. ಇದನ್ನು ಪ್ರೂವ್ ಮಾಡೋದು ಕಷ್ಟ. ಡಿವೋರ್ಸ್​ಗೆ ಕಾರಣವಾಗಬಹುದು. ಅನೈತಿಕ ಸಂಬಂಧ ಇದೆಯೆಂಬ ಕಾರಣಕ್ಕೆ ಜೈಲಿಗೆ ಕಳಿಸುವಂತಿಲ್ಲ ಎನ್ನುವ ತೀರ್ಪು ಬಂದಿದೆ. ನೂರಾರು ವರ್ಷಗಳ ಹಿಂದಿನ ಕಾಯ್ದೆಯ ಅಡಿಯಲ್ಲಿ ಯಾರಿಗೆ ಶಿಕ್ಷೆಯಾಗಿದೆ ಎನ್ನುವ ಮಾಹಿತಿ ಯಾರಿಗೂ ಇಲ್ಲ. ಹೀಗಾಗಿ, ಇದನ್ನು ಕ್ರಿಮಿನಲ್ ಅಪರಾಧಕ್ಕೆ ಸೇರಿಸಿ ಪ್ರಯೋಜನವಿಲ್ಲ ಎಂದು ಈ ಭಾಗವನ್ನು ತೆಗೆದುಹಾಕಲಾಗಿದೆ.

| ಜಸ್ಟೀಸ್ ಸಂತೋಷ್ ಹೆಗ್ಡೆ (ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ)

 

ನಾಗರಿಕ ಅಪರಾಧ

ಅಕ್ರಮ ಸಂಬಂಧ ಕ್ರಿಮಿನಲ್ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದ ಮಾತ್ರಕ್ಕೆ ಅನೈತಿಕ ಸಂಬಂಧ ಬೆಳೆಸಿಕೊಳ್ಳಲು ಲೈಸೆನ್ಸ್ ದೊರೆಯಿತು ಎಂದು ಯಾರಾದರೂ ಅಂದುಕೊಂಡರೆ ಅದು ತಪ್ಪು. ಸಿವಿಲ್ ಗ್ರೌಂಡ್​ನಲ್ಲಿ ಅದು ಅಪರಾಧವೇ ಆಗಿದೆ. ಲಿಂಗ ಅಸಮಾನತೆ ಹೊಂದಿದ್ದ ಅಂಶವನ್ನಷ್ಟೇ ತೆಗೆದುಹಾಕಿ, ಮಹಿಳೆ ಪುರುಷ ಇಬ್ಬರನ್ನೂ ಸುಪ್ರೀಂ ಸಮಾನವಾಗಿ ಪರಿಗಣಿಸಿದೆ. ಪತಿ ಅಕ್ರಮ ಸಂಬಂಧ ಹೊಂದಿದ್ದರೆ ಪತ್ನಿಗೆ ಕ್ರಿಮಿನಲ್ ಕೇಸು ದಾಖಲಿಸಲು ಅವಕಾಶವೇ ಇರಲಿಲ್ಲ. ಸಿವಿಲ್ ಕೇಸ್ ಮಾತ್ರ ಹಾಕಬಹುದಿತ್ತು. ಅಲ್ಲದೆ, ಅಕ್ರಮದಲ್ಲಿ ಭಾಗಿಯಾಗಿರುವ ಇನ್ನೊಂದು ಮಹಿಳೆಯ ಮೇಲೆ ಕೇಸು ದಾಖಲಿಸಲು ಸಹ ಸಾಧ್ಯವಿರಲಿಲ್ಲ. 497ರ ಪ್ರಾವಿಷನ್ ಸಂಪೂರ್ಣ ಜೆಂಡರ್ ಬಯಾಸ್ಡ್ ಆಗಿತ್ತು. ಈಗ ಜೆಂಡರ್ ನ್ಯೂಟ್ರಾಲಿಟಿ ಕಾಯ್ದುಕೊಳ್ಳಲಾಗಿದೆ. ಅಲ್ಲದೆ, ಇಂಥ ಪ್ರಕರಣಗಳಿಗೆ ಸಂಬಂಧಿಸಿ ಇನ್ನಷ್ಟು ಸೂಕ್ತ ತಿದ್ದುಪಡಿಯೋ, ಕಾಯ್ದೆಯೋ ಬಂದೇ ಬರುತ್ತದೆ. ಸಮಾಜದ ಸ್ವಸ್ಥ ಬೆಳವಣಿಗೆಗಾಗಿ ಇದರ ಅಗತ್ಯವೂ ಇದೆ.

| ಟಿ. ಎಸ್. ರಾಜರಾಜೇಶ್ವರಿ ಹಿರಿಯ ನ್ಯಾಯವಾದಿ

 

ಲೈಂಗಿಕ ತಾಟಸ್ಥ್ಯ ಅಗತ್ಯವಾಗಿತ್ತು

ಅಡಲ್ಟರಿ ಎನ್ನುವುದು ಬ್ರಿಟಿಷ್ ಪಾಯಿಂಟ್ ಆಫ್ ವ್ಯೂ. ಹಿಂದು ಕಾನೂನು ತಗೊಂಡ್ರೆ ಈ ಕಾನ್ಸೆಪ್ಟೇ ಇಲ್ಲ. ನೂರು ವರ್ಷಗಳ ಹಿಂದೆ ಪಾಶ್ಚಾತ್ಯ ದೇಶಗಳಲ್ಲಿ ಈ ದೃಷ್ಟಿಕೋನ ಇತ್ತು. ಹೀಗಾಗಿ, ಅದನ್ನು ಜಾರಿಗೆ ತಂದರು. ಆದರೆ, ನನ್ನ 35 ವರ್ಷಗಳ ವೃತ್ತಿ ಅನುಭವದಲ್ಲಿ ಇದುವರೆಗೆ ಯಾರಿಗೂ ಶಿಕ್ಷೆ ಆದದ್ದನ್ನು ಕಾಣೆ. ಏಕೆಂದರೆ, ಇದು ಕೋರ್ಟ್ ವ್ಯಾಪ್ತಿಗೆ ಒಳಪಟ್ಟ ಅಪರಾಧವಲ್ಲ, ಪೊಲೀಸರು ರಿಜಿಸ್ಟರ್ ಮಾಡೋ ಕೇಸೂ ಅಲ್ಲ. ಪ್ರೖೆವೇಟ್ ಕೇಸ್ ಹಾಕಬೇಕು. ಮೊದಲು ಕೋರ್ಟು ಅಡ್ಮಿಷನ್ ಥರ ಇರುತ್ತೆ, ಅವರಿಗೆ ಕನ್ವಿನ್ಸ್ ಆದರೆ ಮಾತ್ರ ಕೇಸ್ ತಗೋತಾರೆ. ಗಂಡ-ಹೆಂಡತಿ ಚೆನ್ನಾಗಿಲ್ಲದೆ ಇದ್ದಾಗ ಈ ಅಂಶ ಬಂದೇ ಬರುತ್ತೆ. ಬಹಳಷ್ಟು ಕೇಸುಗಳಲ್ಲಿ ಇದು ನಿಜವೂ ಇರುತ್ತದೆ, ಸುಳ್ಳಂತಲ್ಲ. ಆದರೆ, ನಿಜ ಇದ್ರೂ ಇದನ್ನು ಶಿಕ್ಷೆ ನೀಡುವಂಥ ಕ್ರಿಮಿನಲ್ ಅಪರಾಧ ಎನ್ನಲು ಸಾಧ್ಯವಿಲ್ಲ. ಇದುವರೆಗೂ ಹೀಗಿತ್ತು, ಈಗ ತೆಗೆದುಹಾಕಿದಾರೆ.

ಅಡಲ್ಟರಿಯನ್ನು ಪ್ರೂವ್ ಮಾಡೋದು ಕಷ್ಟ. ಲೈಂಗಿಕ ಸಂಬಂಧಕ್ಕೆ ಪ್ರೂಫ್ ಹೇಗೆ ಕೊಡೋದು? ಯಾರು ಫೋಟೊ ತಗೊಂಡಿರ್ತಾರೆ? ಡಿಎನ್​ಎ ಟೆಸ್ಟ್ ಮಾಡಿಸಬೇಕು ಯಾರು ಅದನ್ನೆಲ್ಲ ಮಾಡಿಸ್ತಾರೆ? ಅಲ್ಲದೆ, ಇಬ್ಬರೂ ಇನ್ವಾಲ್ವ್ ಆಗಿರೋದ್ರಿಂದ ‘ತಮ್ಮ ಸಂಬಂಧ ಸುಳ್ಳು’ ಅಂತಾನೆ ವಾದಿಸ್ತಾ ಇರ್ತಾರೆ, ಆಗ ಹೇಗೆ ಪ್ರೂವ್ ಮಾಡೋದು? ಈಗ ಅಂಥ ಸಂಬಂಧವುಳ್ಳ ಮಹಿಳೆ ಅಥವಾ ಪುರುಷನ ಪತಿ ಅಥವಾ ಪತ್ನಿ ಈ ಕೇಸು ಹಾಕಬೇಕು. ಅವರು ಅಫೆಕ್ಟೆಡ್ ಪಾರ್ಟಿ. ಆದರೆ, ಇದುವರೆಗೆ ಯಾವುದೇ ಪ್ರಕರಣದಲ್ಲಿ ಶಿಕ್ಷೆ ಆಗಿಲ್ಲ. ಇದ್ದೂ ಪ್ರಯೋಜನಕ್ಕಿಲ್ಲದಂತಾಗಿತ್ತು, ಆಲ್​ವೋಸ್ಟ್ ಡಿಫಂಕ್ಟ್ ಪ್ರಾವಿಷನ್ ಥರ ಆಗಿತ್ತು. ಇದು ಡಿವೋರ್ಸ್​ಗೆ ಗಟ್ಟಿಯಾದ ಕಾರಣವಾಗಬಹುದು, ಆದರೆ, ಅದು ಕ್ರಿಮಿನಲ್ ಕೇಸ್ ಅಡಿಯಲ್ಲಿ ಬುಕ್ ಮಾಡೋಕೆ ಬರೋದಿಲ್ಲ. ಇದರಿಂದ ಅವರು ಯೂಸ್​ಲೆಸ್ ಪ್ರಾವಿಷನ್​ನನ್ನು ತೆಗೆದು ಹಾಕಿದ್ದಾರೆ.

ಇದರಿಂದ ಏನಾದರೂ ಪರಿಣಾಮ ಆಗಬಹುದು ಎನಿಸಲ್ಲ. ಸೋಷಿಯಲ್ ಸ್ಟಿಗ್ಮಾವೇ ಇಲ್ಲಿ ಹೆಚ್ಚು. ಅಕ್ಕಪಕ್ಕದವರಿಗೆ ತಿಳಿದರೆ, ನೆಂಟರಿಗೆ, ಹೆಂಡತಿ-ಗಂಡನಿಗೆ ಗೊತ್ತಾದರೆ ಎನ್ನುವ ಭಯವೇ ಇಲ್ಲಿ ಹೆಚ್ಚಿರುತ್ತದೆ. ಆದರೆ, ಶಿಕ್ಷೆಯಾಗುತ್ತೆ ಎನ್ನುವ ಭಯ ಇದುವರೆಗೂ ಯಾರಿಗೂ ಇದ್ದಂತಿಲ್ಲ. ಅಕ್ರಮ ಸಂಬಂಧದ ಮೇಲೆ ಕೇಸ್ ಹಾಕೋಕೆ ಬಂದರೆ ನಾವೂ ಹೆಚ್ಚು ಎನ್​ಕರೇಜ್ ಮಾಡೋದಿಲ್ಲ. ಏಕೆಂದರೆ, ಅದು ಯಶಸ್ವಿಯಾಗೋದಿಲ್ಲ. ಏನೂ ಪ್ರಯೋಜನವೇ ಆಗ್ತಿದ್ದಿಲ್ಲ. ರಿಜಿಸ್ಟರ್ ಆಗ್ತಾ ಇದ್ದಿದ್ದೇ ಕಷ್ಟ. ಪಾಶ್ಚಾತ್ಯ ದೇಶಗಳಲ್ಲಿ ಇದು ಕ್ರಿಮಿನಲ್ ಅಪರಾಧವಲ್ಲ, ಮುಸ್ಲಿಂ ದೇಶಗಳಲ್ಲಿ ಇದು ಅಪರಾಧ. ಆದರೆ, ಔಟ್​ಡೇಟೆಡ್ ಕಾನೂನು ಅಂತಾನೇ ಹೇಳಬಹುದು. ಅನೈತಿಕತೆ ಕುಟುಂಬದ ಆರೋಗ್ಯಕ್ಕೆ ಒಳ್ಳೇದಲ್ಲ. ಪತಿ ಮಾಡಿದರೂ, ಪತ್ನಿ ಮಾಡಿದರೂ ತಪ್ಪೇ. ಇದುವರೆಗೆ ಪತ್ನಿಯೇ ಈ ಬಗ್ಗೆ ಸಿವಿಲ್ ಕೇಸ್ ಹಾಕಿದ್ದು ಹೆಚ್ಚು.

| ಶೀಲಾ ಅನೀಶ್ ಅಂತಾರಾಷ್ಟ್ರೀಯ ಮಹಿಳಾ ವಕೀಲರ ಒಕ್ಕೂಟದ ಮಾಜಿ ಅಧ್ಯಕ್ಷೆ, ಹಾಲಿ ಡೈರೆಕ್ಟರ್

 

ಅಗಾಧ ಪ್ರಪಂಚ!

2017ರಲ್ಲಿ ನಡೆದ ಒಂದು ಖಾಸಗಿ ಸಮೀಕ್ಷೆಯಂತೆ ಅನೈತಿಕ ಸಂಬಂಧಗಳು ದೇಶದಲ್ಲಿ ಹೆಚ್ಚುತ್ತಿವೆ. ಅದರ ಪ್ರಕಾರ, ಮದುವೆಯಾಗಿರುವ 10 ಪುರುಷರಲ್ಲಿ 6 ಮಂದಿ ಪುರುಷರು ಅನೈತಿಕ ಸಂಬಂಧ ಇರಿಸಿಕೊಂಡಿರುತ್ತಾರೆ. ಈ ಸಮೀಕ್ಷೆಯಿಂದ ಹೊರಬಂದ ಇನ್ನೊಂದು ಅಂಶವೆಂದರೆ, ಶೇ.76ರಷ್ಟು ಮಹಿಳೆಯರು ‘ಇಂಥ ಸಂಬಂಧ ಅಪರಾಧವಲ್ಲ’ ಎಂದು ಅನಿಸಿಕೆ ವ್ಯಕ್ತಪಡಿಸಿದ್ದರೆ, ಶೇ.61ರಷ್ಟು ಪುರುಷರು ‘ಅನೈತಿಕವಲ್ಲ’ ಎಂದು ಅಭಿಪ್ರಾಯಪಟ್ಟಿದ್ದರು. ಇನ್ನೊಂದು ಸಮೀಕ್ಷೆಯಂತೆ, ಶೇ.40ರಷ್ಟು ಮುಂಬೈ ಪುರುಷರು ಅನೈತಿಕ ಸಂಬಂಧಗಳ ಸುಳಿಯಲ್ಲಿದ್ದಾರಂತೆ! ಇಷ್ಟೆಲ್ಲ ಇದ್ದರೂ, ಇದನ್ನು ಕ್ರಿಮಿನಲ್ ಅಪರಾಧ ಎಂದು ಯಾವೊಂದು ಪ್ರಕರಣದಲ್ಲೂ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಇದರ ಆಧಾರದ ಮೇಲೆ ವಿಚ್ಛೇದನಗಳು ಮಾತ್ರ ನಡೆದಿವೆ. ಎಷ್ಟೋ ಪ್ರಕರಣಗಳಲ್ಲಿ, ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದರ ಆಧಾರದ ಮೇಲೆ ಸಂಬಂಧಪಟ್ಟವರಿಗೆ ಶಿಕ್ಷೆಯಾಗಿದೆ.

ಪರಿಣಾಮವೇನಾಗಬಹುದು?

ಈಗ ಮಾಡಿರುವ ಬದಲಾವಣೆಯಿಂದ ಏನೂ ಬದಲಾಗುವುದಿಲ್ಲ ಎನ್ನುತ್ತಾರೆ ಕ್ರಿಮಿನಲ್ ನ್ಯಾಯವಾದಿ ಟಿ. ಎಸ್. ರಾಜರಾಜೇಶ್ವರಿ. ಇಲ್ಲಿ ಮಹಿಳೆಯರಿಗೆ ಅನ್ಯಾಯವಾಗುವುದೂ ಇಲ್ಲ. ಕ್ರಿಮಿನಲ್ ಅಪರಾಧದಡಿ ಅಕ್ರಮ ಸಂಬಂಧದ ಕಾರಣಕ್ಕೆ ಶಿಕ್ಷೆಗೆ ಗುರಿಯಾದವರು ಇದುವರೆಗೂ ಯಾರೂ ಇಲ್ಲ. ಏಕೆಂದರೆ, ಇದನ್ನು ಸಾಬೀತುಪಡಿಸುವುದು ಕಷ್ಟ. ಹೀಗಾಗಿಯೇ, ಅಕ್ರಮ ಸಂಬಂಧ ಡಿವೋರ್ಸ್​ಗೆ ಕಾರಣವಾಗಬಲ್ಲದೇ ಹೊರತು ಕ್ರಿಮಿನಲ್ ಅಪರಾಧವೆನ್ನಲು ಸಾಧ್ಯವಿಲ್ಲ ಎಂದು ಸುಪ್ರೀಂ ಹೇಳಿರುವುದು ಎನ್ನುತ್ತಾರೆ ಅವರು.

ಹೇಗೆ ಸಮಾನತೆ ಬಂತು ಇದರಲ್ಲಿ?

ಇಷ್ಟು ದಿನ 497 ಸೆಕ್ಷನ್ ಪತ್ನಿ ಪುರುಷನ ಆಸ್ತಿ ಎಂಬ ಅರ್ಥವನ್ನು ಒಳಗೊಂಡಿತ್ತು.ಈಗ ಅದನ್ನು ತೆಗೆದಿದ್ದಾರೆ. ಇಲ್ಲೊಂದು ಪಾಯಿಂಟ್ ಇದೆ. ಅಕ್ರಮ ಸಂಬಂಧದಲ್ಲಿರೋ ಪುರುಷನ ಹೆಂಡತಿಗೆ ಕೇಸು ಹಾಕಲು ಅವಕಾಶ ಇರಲಿಲ್ಲ. ಇನ್ನೋರ್ವ ಮಹಿಳೆಯ ಗಂಡ ಮಾತ್ರ ಕೇಸ್ ಹಾಕಬಹುದಿತ್ತು. ಆದರೆ, ಹೆಂಡತಿಗೂ ಆ ಪವರ್ ಇರಬೇಕಿತ್ತು. ಏಕೆಂದರೆ, ಅವಳೇನೂ ಅನುಮತಿ ನೀಡಿರಲಿಲ್ಲವಲ್ಲ? ಹೀಗಾಗಿ, ಅದು ಜೆಂಡರ್ ನ್ಯೂಟ್ರಲ್ ಇರಲಿಲ್ಲ. ನಮ್ಮ ಸೊಸೈಟಿ ಬದಲಾವಣೆ ಆಗುತ್ತಿದೆ. ಈಗ ಲಿವ್​ಇನ್ ರಿಲೇಷನ್​ಷಿಪ್ ಬಂದಿದೆ. ಮದುವೆಯೇ ಬೇಡ ಅನ್ನುವ ಸ್ಟೇಜ್​ಗೆ ಹುಡುಗಿಯರು ಬಂದಿದ್ದಾರೆ. ಇಂಥ ಸೊಸೈಟಿಯಲ್ಲಿ ಇದು ಔಟ್​ಡೇಟೆಡ್ ಅನಿಸುತ್ತದೆ.