ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಶ್ರೀ ಸಂತ ಸೇವಾಲಾಲ್ ರವರ ಜಯಂತಿ ಉತ್ಸವ ನಡೆಯಿತು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಸದಸ್ಯೆ ಡಾ. ಸುರೇಖಾ ರಾಠೋಡ ಅವರು, “ಸಂತ ಸೇವಾಲಾಲ್ ರವರು ಬಂಜಾರಾ ಸಮುದಾಯದ ಶ್ರೇಷ್ಠ ತಪಸ್ವಿಗಳಾಗಿದ್ದರು. ಇವರು ದುರ್ಗಾದೇವಿಯ ಆರಾಧಕರಾಗಿದ್ದುಕೊಂಡು ತಮ್ಮ ಜೀವಿತ ಅವಧಿಯಲ್ಲಿ ಬಹಳಷ್ಟು ಪವಾಡಗಳನ್ನು ಮಾಡಿದ್ದಾರೆ. ಶ್ರೀ ಸಂತ ಸೇವಾಲಾಲರು ಮಾನವತಾವಾದಿ ಸಂತರಾಗಿದ್ದರು. ಜನರಿಗೆ ಒಳ್ಳೆಯ ಉಪದೇಶಗಳನ್ನು ಕೊಡುತ್ತಿದ್ದರು” ಎಂದರು.
ಸಂತ ಸೇವಾಲಾಲ ಅವರು ದುಶ್ಚಟಗಳಾದ ಧೂಮಪಾನ, ಮಧ್ಯಪಾನ ಮತ್ತ ಕಳ್ಳತನಗಳನ್ನು ಮಾಡಬಾರದು ಎಂದು ಹೇಳಿದ್ದಾರೆ. ನಾವು ಅವರು ಕೊಟ್ಟಂತಹ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.
ಸಂತ ಸೇವಾಲಾಲ ಅವರು ಆವಾಗಲೇ ನೀರಿನ ಕೊರತೆಯ ಬಗ್ಗೆ ಹೇಳಿದ್ದರು. ಮುಂದಿನ ದಿನಮಾನಗಳಲ್ಲಿ ನೀರನ್ನು ಖರೀದಿಸಿ ಕುಡಿಯಬೇಕಾಗುತ್ತದೆ ಎಂದು ಹೇಳಿದ್ದರು. ಅದು ಈಗ ಸತ್ಯವಾಗಿದೆ. ಸಮಾಜದ ಜನರು ಒಳ್ಳೆಯ ರೀತಿಯಲ್ಲಿ ಬದುಕಬೇಕು ಎಂದು ಉಪದೇಶಗಳನ್ನು ಕೊಟ್ಟ ಮಹಾನ್ ಸಂತ ಸೇವಾಲಾಲ ಅವರು ಆಗಿದ್ದಾರೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮಹಾನಗರ ಪಾಲಿಕೆಯ ಸದಸ್ಯೆ ಲಕ್ಷ್ಮೀ ರಾಠೋಡ, ಎಮ್.ಟಿ. ರಾಠೋಡ, ಆರ್.ಟಿ. ರಾಠೋಡ, ನಾರಾಯಣ ರಾಠೋಡ, ಮೋಹನಕುಮಾರ ಲಮಾಣಿ, ಯಮನಪ್ಪ ರಾಠೋಡ, ಅಶೋಕ ಪೂಜಾರಿ, ಪ್ರಭು ರಾಠೋಡ, ಪಾಂಡು ರಾಠೋಡ ಹಾಗೂ ಸಮಾಜದ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಭಾವಚಿತ್ರದ ಭವ್ಯ ಮೆರವಣಿಗೆ:
ಶ್ರೀ ಸಂತ ಸೇವಾಲಾಲ್ ಅವರ ಜಯಂತಿಯ ನಿಮಿತ್ತವಾಗಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಸಂತ ಸೇವಾಲಾಲ್ ಅವರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಶಾಸಕರಾದ ಆಸೀಫ್ ಸೇಠ್ ರವರು ಉದ್ಘಾಟಿಸಿದರು.
ನಗರದ ಅಶೋಕ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಆರ್.ಟಿ.ಓ ವೃತ್ತದ ಮೂಲಕ ಕುಮಾರ ಗಂಧರ್ವ ಕಲಾ ರಂಗಮಂದಿರದವರೆಗೆ ನಡೆಯಿತು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿವಿಧ ಕಲಾ ತಂಡಗಳು ಜನರನ್ನು ಆಕರ್ಷಿಸಿದವು.
ಮಹಾನಗರ ಪಾಲಿಕೆಯ ಮಹಾಪೌರ ಸವಿತಾ ಕಾಂಬಳೆ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ಸಮಾಜದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
