ತೇರದಾಳ: ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ಕರೆದಿದ್ದ ವಿಪತ್ತು ನಿರ್ವಹಣೆ ಸಭೆಗೆ ಸಂಬಂಧಿಸಿದ ಅಧಿಕಾರಿಗಳು ಬಾರದ ಕಾರಣ ಅಸಮಧಾನಗೊಂಡು ಪುರಸಭೆ ಸದಸ್ಯರು ಹಾಗೂ ಮುಖಂಡರು ಸಭೆಯಿಂದ ನಿರ್ಗಮಿಸಿದರು.
ತೇರದಾಳ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಸಭೆ ಕರೆಯಲಾಗಿತ್ತು. ಆದರೆ, ಮಧ್ಯಾಹ್ನ 1 ಗಂಟೆಯಾದರೂ ತಹಸೀಲ್ದಾರ್ ಹಾಗೂ ಪೂರ್ಣ ಪ್ರಮಾಣದ ಅಧಿಕಾರಿಗಳು ಬಂದಿರಲಿಲ್ಲ. ಇದನ್ನು ಪ್ರಶ್ನಿಸಿದ ಸದಸ್ಯ ಸಂತೋಷ ಜಮಖಂಡಿ, ಪುರಸಭೆಗೆ ಆಡಳಿತಾಧಿಕಾರಿ ನೇಮಕಗೊಂಡು ವರ್ಷಕ್ಕೂ ಅಧಿಕವಾಯಿತು. ಇದುವರೆಗೆ ಒಂದೇ ಒಂದು ಸಭೆ ನಡೆಸಿಲ್ಲ. ಬರ ಸಂದರ್ಭದಲ್ಲೂ ಭೇಟಿ ನೀಡಲಿಲ್ಲ. ಈಗ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ಕರೆದಿದ್ದೀರಿ. ತಹಸೀಲ್ದಾರರೇ ಬಂದಿಲ್ಲ. ತೇರದಾಳ ಬಗ್ಗೆ ಇಷ್ಟೋಂದು ನಿರ್ಲಕ್ಷೃ ಏಕೆ. ಇಂತಹ ಕಾಟಾಚಾರಕ್ಕೆ ಸಭೆ ನಡೆಸುವ ಅಗತ್ಯತೆ ಏನಿದೆ ಎಂದು ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
ಮುಖಂಡರಾದ ಶಂಕರ ಕುಂಬಾರ, ಕೇದಾರಿ ಪಾಟೀಲ, ಸದಾಶಿವ ಹೊಸಮನಿ ಮಾತನಾಡಿ, ಪ್ರವಾಹ ಎದುರಾದರೆ ಕೆಲಸ ಮಾಡಬೇಕಾದ ಇಲಾಖೆ ಅಧಿಕಾರಿಗಳೇ ಬಂದಿಲ್ಲ. ಏತಕ್ಕೆ ಸಭೆ ನಡೆಸುತ್ತೀರಿ ಎಂದು ಹೊರ ನಡೆದರು.
ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಚರಂಡಿಗಳ ಸ್ವಚ್ಛತೆ, ಫಾಗಿಂಗ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಬಿಸಿ ನೀರು ನೀಡಲಾಗುತ್ತಿದೆ. ಶೆಡ್ ಹಾಗೂ ಬಾಡಿಗೆ ಕಟ್ಟಡದಲ್ಲಿನ ಮೂರು ಅಂಗನವಾಡಿ ಕೇಂದ್ರಗಳನ್ನು ಸರ್ಕಾರಿ ಶಾಲೆಗಳಲ್ಲಿ ಸ್ಥಳಾಂತರಿಸ ಲಾಗಿದೆ ಎಂದು ಮೇಲ್ವಿಚಾರಕಿ ಕೆ.ಐ. ಕುರ್ಣಿ ತಿಳಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಮಾತ್ರೆಗಳು ಲಭ್ಯವಿದ್ದು, ಡೆಂೆ ಕುರಿತು ಆಶಾ ಕಾರ್ಯಕರ್ತೆಯರು ಜಾಗೃತಿ ಮೂಡಿಸುತ್ತಿದ್ದಾರೆ. ಇದೂವರೆಗೂ ಅಂತಹ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ ಎಂದು ವೈದ್ಯಾಧಿಕಾರಿ ಡಾ. ಸುದರ್ಶನ ನಿಡೋಣಿ ಹೇಳಿದರು.
ಪಟ್ಟಣದಲ್ಲಿ ನಾಯಿಗಳ ಹಾವಳಿ ಕುರಿತು ಬಹಳಷ್ಟು ದೂರುಗಳು ಬರುತ್ತಿವೆ ಎಂದು ಉಪತಹಸೀಲ್ದಾರ ಶ್ರೀಕಾಂತ ಮಾಯನ್ನವರ ಮುಖ್ಯಾಧಿಕಾರಿ ಗಮನಕ್ಕೆ ತಂದರು.
ನಾಯಿಗಳ ಹಾವಳಿಗೆ ಏನು ಮಾಡಲು ಸಾಧ್ಯವಿಲ್ಲ. ಕತ್ತೆಗಳ ಹಾವಳಿಗೆ ಅವುಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.
ಪುರಸಭೆ ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರ ಪಾಟೀಲ, ಪ್ರತಾಪ ಕೊಡುಗೆ, ಬರಮು ದನಗರ, ಇರ್ಪಾನ್ ಝಾರೆ, ಗ್ರಾಮಲೆಕ್ಕಾಧಿಕಾರಿ ರೇವಣಸಿದ್ದಯ್ಯ ಕಾಮತೆ, ಮಹಾದೇವ ಯಲ್ಲಟ್ಟಿ ಇದ್ದರು.