ರಟ್ಟಿಹಳ್ಳಿ: ಪಟ್ಟಣದಲ್ಲಿ ಈಗಾಗಲೇ ಸರ್ಕಾರದಿಂದ ಪ್ರಜಾಸೌಧ ಕಟ್ಟಡ ನಿರ್ವಣಕ್ಕೆ ನೀಡಲಾಗಿದ್ದ ಗ್ರೀನ್ ಸಿಗ್ನಲ್ಗೆ ಅನುಗುಣವಾಗಿ ಕರ್ನಾಟಕ ಗೃಹ ಮಂಡಳಿಯಿಂದ ಅವಶ್ಯವಿರುವ ನಕ್ಷೆ ತಯಾರಿಸಿ ಮತ್ತು ಸವಿವರ ಅಂದಾಜು ಪಟ್ಟಿ ವರದಿ ಸಲ್ಲಿಸಿ ಸರ್ಕಾರದಿಂದ ಗುರುವಾರ ಆಡಳಿತಾತ್ಮಕವಾಗಿ ಅನುಮೋದನೆ ಪಡೆಯಲಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ಹೊಸದಾಗಿ ರಚನೆಯಾಗಿರುವ ರಟ್ಟಿಹಳ್ಳಿ ತಾಲೂಕು ಕೇಂದ್ರಕ್ಕೆ ತಾಲೂಕು ಆಡಳಿತ ಕೇಂದ್ರ ಕಟ್ಟಡ ಪ್ರಜಾಸೌಧ ನಿರ್ವಣಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಸರ್ಕಾರ ಕರ್ನಾಟಕ ಗೃಹ ಮಂಡಳಿ ಸಲ್ಲಿಸಿರುವ ಅಂದಾಜು ಮೊತ್ತ 8 ಕೋಟಿ 60 ಲಕ್ಷ ರೂ.ಗಳ ವೆಚ್ಚದಲ್ಲಿ ‘ಎ’ ಮಾದರಿಯಲ್ಲಿ ಕಟ್ಟಡ ನಿರ್ವಣಕ್ಕೆ ಆಡಳಿತಾತ್ಮಕವಾಗಿ ಅನುಮೋದನೆಯ ಆದೇಶ ನೀಡಿದೆ. ಒಂದು ವಾರದಲ್ಲಿ ಟೆಂಡರ್ ಕರೆದು ಶೀಘ್ರವೇ ಕಟ್ಟಡದ ಕಾಮಗಾರಿ ಆರಂಭಿಸಲಾಗುವುದು. ತಾಲೂಕು ಆಡಳಿತ ಕೇಂದ್ರದ ಕಟ್ಟಡದಲ್ಲಿ ವಿವಿಧ ಇಲಾಖೆಗಳ ಕಚೇರಿಗಳೂ ಆರಂಭವಾಗುವುದರಿಂದ ತಾಲೂಕಿನ ಜನತೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸ್ಥಳ ಪರಿಶೀಲಿಸಿ ವರದಿ ಸಲ್ಲಿಕೆ:
ಸರ್ಕಾರದ ಆದೇಶದಂತೆ ಪ್ರಜಾಸೌಧ ಕಟ್ಟಡ ನಿರ್ವಣಕ್ಕೆ ಅವಶ್ಯವಿರುವ ಜಾಗಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಸರ್ವೆ ನಂ. 87ರಲ್ಲಿ ಒಟ್ಟು 7 ಎಕರೆ ಜಾಗದಲ್ಲಿ 1 ಎಕರೆ 20 ಗುಂಟೆ ಜಾಗವನ್ನು ಪ್ರಜಾಸೌಧ ನಿರ್ವಣಕ್ಕೆ ಅಂತಿಮಗೊಳಿಸಲಾಗಿತ್ತು. ಇತ್ತೀಚೆಗೆ ಜಿಲ್ಲಾಧಿಕಾರಿಗಳು, ಕರ್ನಾಟಕ ಗೃಹ ಮಂಡಳಿಯ ಜಿಲ್ಲಾ ಮಟ್ಟದ ಅಧಿಕಾರಿಗಳು ಶಾಸಕ ಯು.ಬಿ. ಬಣಕಾರ ಭೇಟಿ ನೀಡಿ ಪರಿಶೀಲಿಸಿ ಈ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯಲಾಗಿದೆ.