More

  ಹಳ್ಳಿಯತ್ತ ಆಡಳಿತ; ಡಿಸಿ, ಎಸಿ, ತಹಸೀಲ್ದಾರ್​ಗಳಿಗೆ ಹೊಣೆ, ಸಮಸ್ಯೆ ಇತ್ಯರ್ಥಕ್ಕೆ ಸರ್ಕಾರದ ಸಂಕಲ್ಪ 

  ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಕಸರತ್ತು, ಬಜೆಟ್​ಗೆ ಸಿದ್ಧತೆ ನಡುವೆಯೇ ಆಡಳಿತ ಯಂತ್ರಕ್ಕೆ ಚುರುಕು ನೀಡಲು ಮುಂದಾಗಿರುವ ಸರ್ಕಾರ, ಇದರ ಮೊದಲ ಯತ್ನವಾಗಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರರ್ ಮುಂತಾದ ಅಧಿಕಾರಿಗಳನ್ನು ಹಳ್ಳಿಗಳಿಗೆ ಕಳುಹಿಸಿ ಜನರ ಕುಂದು-ಕೊರತೆ ನಿವಾರಿಸಲು ಮುಂದಾಗಿದೆ.

  ರಾಜ್ಯದಲ್ಲಿ ಒಟ್ಟು 30,000 ಹಳ್ಳಿಗಳಿದ್ದು, ಈ ಕಾರ್ಯಕ್ರಮದ ಮೂಲಕ ಪ್ರತಿ ತಿಂಗಳು 1,000 ಹಳ್ಳಿಗಳನ್ನು ತಲುಪಬಹುದು. ಒಟ್ಟಾರೆ ಮುಂದಿನ 3 ವರ್ಷಗಳೊಳಗೆ ಎಲ್ಲ ಹಳ್ಳಿಗಳ ಕನಿಷ್ಠ ಅಗತ್ಯದ ಅರ್ಜಿಗಳು ವಿಲೇವಾರಿಯಾದಲ್ಲಿ ಜನಮಾನಸದಲ್ಲಿ ಆಡಳಿತ ಅಚ್ಚೊತ್ತಲಿದೆ ಎನ್ನುವುದು ಸರ್ಕಾರದ ಚಿಂತನೆಯಾಗಿದೆ.

  ಕಳೆದ ಹಲವು ವರ್ಷಗಳಿಂದ ಬಾಕಿಯಿರುವ ಪೌತಿ ಖಾತೆಯ 10 ಲಕ್ಷ ಅರ್ಜಿಗಳ ಇತ್ಯರ್ಥ, ಪಹಣಿ ಕಲಂನಲ್ಲಿ ವ್ಯತ್ಯಾಸ ನಿವಾರಣೆ, ಅಕ್ರಮ ಸಕ್ರಮ ಹಕ್ಕುಪತ್ರ ಹಂಚಿಕೆ, ಸ್ಮಶಾನ ಭೂಮಿ ಸಮಸ್ಯೆಗೆ ಪರಿಹಾರ ಜತೆಗೆ ಸಣ್ಣಪುಟ್ಟ ಅಹ ವಾಲುಗಳನ್ನು ಇತ್ಯರ್ಥ ಪಡಿಸಿ ‘ಜನಸ್ನೇಹಿ’ಯಾಗಲು ಸರ್ಕಾರ ಯೋಚಿಸಿದೆ.

  ವಿಧಾನಸೌಧದಲ್ಲಿ ಬುಧವಾರ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಿದ ಕಂದಾಯ ಸಚಿವ ಆರ್. ಅಶೋಕ್ ‘ಹಳ್ಳಿಗೆ ನಡೆಯಿರಿ’ ಕಾರ್ಯಕ್ರಮದ ಬಗ್ಗೆ ರ್ಚಚಿಸಿದರು. ಈ ಸಂದರ್ಭ ಕೆಲವು ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಹೂಡುವ ಉತ್ಸುಕತೆ ತೋರಿದಾಗ ಅದು ಆಯಾ ಡಿಸಿಗಳ ವಿವೇಚನೆಗೆ ಬಿಟ್ಟದ್ದೆಂದು ಸಚಿವರು ಹೇಳಿದರು.

  ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ ಕಾರ್ಯಕ್ರಮ’ದ ಚಿಂತನೆಯಿದೆ. ನಾನೂ ಒಂದು ಜಿಲ್ಲೆಯಲ್ಲಿ ಪಾಲ್ಗೊಳ್ಳುವೆ ಎಂದರು.

  ಮನೆ ನಿರ್ಮಾಣಕ್ಕೆ ಗಡುವು: ಪ್ರವಾಹದಲ್ಲಿ ಮನೆ ಕಳೆದುಕೊಂಡ ಬಡವರಿಗೆ ಮನೆ ನಿರ್ವಿುಸಿಕೊಡಲು ಜಿಲ್ಲಾಧಿಕಾರಿಗಳಿಗೆ ಮೂರು ತಿಂಗಳ ಗಡುವು ನೀಡಲಾಗಿದೆ. ಮನೆ ನಿರ್ಮಾಣಕ್ಕೆ ಹಣದ ಕೊರತೆಯಿಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಾಕಷ್ಟು ಹಣವಿದೆ. ಜಿಲ್ಲಾಧಿಕಾರಿಗಳು ಅನುಮೋದಿಸಿದ ಪ್ರಕಾರ ಒಟ್ಟು 9,009 ಮನೆಗಳನ್ನು ನಿರ್ವಿುಸಲಾಗುತ್ತಿದೆ. ಭಾಗಶಃ ಬಿದ್ದ ಮನೆಗಳ ರಿಪೇರಿಗೆ 3 ಲಕ್ಷ ರೂ ಅಥವಾ ಪೂರ್ತಿಯಾಗಿ ಮರುನಿರ್ವಿುಸಿಕೊಂಡರೆ 5 ಲಕ್ಷ ರೂ. ನೀಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

  ಅಮಾನತಿಗೆ ಸೂಚನೆ

  ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಲಾ 10 ರಿಂದ 20 ಮನೆಗಳ ನಿರ್ವಣದ ಮೇಲ್ವಿಚಾರಣೆಯ ಹೊಣೆ ವಹಿಸಲಾಗಿದೆ. ಪ್ರಗತಿ ವರದಿ ತರಿಸಿಕೊಂಡು, ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ತಕ್ಷಣ ಅಮಾನತು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವೆ. ಪ್ರವಾಹ ಪೀಡಿತ ಹಳ್ಳಿಗಳು ಹಾಗೂ ಕುಡಿಯುವ ನೀರಿನ ಘಟಕಗಳಿಗೂ ವಿದ್ಯುತ್ ಸಂಪರ್ಕ ನೀಡಲಾಗಿದೆ. ಶಾಲಾ ಕಟ್ಟಡಗಳ ದುರಸ್ತಿ ಶೇ.90 ರಷ್ಟು ಮುಗಿದಿದ್ದು, ಉಳಿದ ಶೇ.10ರಷ್ಟು ಕೆಲಸವನ್ನು 15 ದಿನದೊಳಗೆ ಪೂರ್ಣಗೊಳಿಸಲು ತಿಳಿಸಲಾಗಿದೆ ಎಂದರು. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.

  ಕಾಗದರಹಿತ ಜನಗಣತಿ

  ರಾಜ್ಯದಲ್ಲಿ ಏ.5 ರಿಂದ ಮೇ 29 ರವರೆಗೆ ಜನಗಣತಿ ಕಾರ್ಯ ನಡೆಯಲಿದೆ. ಸಂಪೂರ್ಣ ಕಾಗದರಹಿತ ಜನಗಣತಿಯಿದಾಗಿದ್ದು, ಮೊಬೈಲ್ ಆಪ್ ಮೂಲಕ ಮಾಹಿತಿ ಸಂಗ್ರಹಿಸಲಾಗುವುದು. ದೇಶದಲ್ಲಿ ನಡೆಯಲಿರುವ ಮೊದಲ ಡಿಜಿಟಲ್ ಗಣತಿ ಇದಾಗಿದೆ ಎಂದು ಕಂದಾಯ ಸಚಿವರು ಹೇಳಿದರು.

  ಮನೆಬಾಗಿಲಿಗೆ ವೃದ್ಧಾಪ್ಯ ವೇತನ

  ಆಧಾರ್ ಕಾರ್ಡ್ ಆಧರಿಸಿ ವೃದ್ಧಾಪ್ಯ ವೇತನವನ್ನು ಫಲಾನುಭವಿಗಳ ಮನೆಬಾಗಿಲಿಗೇ ತಲುಪಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು. ಯಾರೂ ಅರ್ಜಿ ಕೊಡಬೇಕಾದ ಅವಶ್ಯಕತೆಯಿಲ್ಲ. ಉಡುಪಿಯಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಜಾರಿಯಾಗಲಿದ್ದು ನಂತರ ರಾಜ್ಯಾದ್ಯಂತ ವಿಸ್ತರಿಸಲಾಗುವುದು. 3 ಸಾವಿರ ಫಲಾನುಭವಿಗಳ ಆದೇಶ ಪತ್ರವನ್ನು ನಾನೇ ಅಂಚೆಪೆಟ್ಟಿಗೆಗೆ ಹಾಕುವ ಕಾರ್ಯಕ್ರಮ ಉಡುಪಿಯಲ್ಲಿ ಇಷ್ಟರಲ್ಲೇ ನಡೆಯಲಿದೆ ಎಂದು ಆರ್. ಅಶೋಕ್ ತಿಳಿಸಿದರು.

  ತಿಂಗಳಲ್ಲಿ 1 ದಿನ…

  ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆ ವ್ಯಾಪ್ತಿಯ ಹಳ್ಳಿಯೊಂದಕ್ಕೆ ತಿಂಗಳಲ್ಲಿ ಒಂದು ಬಾರಿ ತೆರಳಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಪರಿಹರಿಸಲಿದ್ದಾರೆ. ಈ ಕಾರ್ಯಕ್ರಮವನ್ನು ತಿಂಗಳ ಮೂರನೇ ಶನಿವಾರ ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಡಿಸಿಗಳ ಜತೆ ಉಪ ವಿಭಾಗಾಧಿಕಾರಿ, ತಹಸೀಲ್ದಾರರು ತೆರಳಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಇರಲಿದ್ದಾರೆ.

  ನಂತರದ ಹಂತದಲ್ಲಿ ಉಪ ವಿಭಾಗಾಧಿಕಾರಿಗಳು ತಿಂಗಳಲ್ಲಿ 2 ದಿವಸ, ತಹಸೀಲ್ದಾರರು 4 ದಿವಸ ಹಳ್ಳಿಗಳತ್ತ ತೆರಳಬೇಕೆಂಬ ಬಗ್ಗೆಯೂ ಯೋಚಿಸಿದ್ದು, ಇನ್ನಷ್ಟೇ ನಿರ್ಧರಿಸಬೇಕಿದೆ. ಕಂದಾಯ ಇಲಾಖೆ ಶೇ.90 ಕೆಲಸಗಳನ್ನು ಮಾಡಬೇಕೆಂದಿದೆ. ಬಾಲ್ಯ ವಿವಾಹದ ಬಗ್ಗೆ ಅರಿವು, ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವುದು ಮತ್ತಿತರ ಕಾರ್ಯಗಳನ್ನು ಈ ಸಂದರ್ಭದಲ್ಲಿ ಕೈಗೊಳ್ಳಲಾಗುವುದು ಎಂದು ಆರ್.ಅಶೋಕ್ ಮಾಹಿತಿ ನೀಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts