ಆಡಳಿತಾತ್ಮಕ ಭವನ ನಿರ್ಮಾಣ ಅಗತ್ಯ

ಬೆಂಗಳೂರು: ಬೆಳಗಾವಿಯಲ್ಲಿ ಆಯುಕ್ತರು ಮತ್ತು ಕಾರ್ಯದರ್ಶಿಗಳ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಲು ಆಡಳಿತಾತ್ಮಕ ಭವನ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ.

ವಿಧಾನಸೌಧದಲ್ಲಿ ತಮ್ಮ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವನ್ನು ಅಧಿವೇಶನ ನಡೆಸಲು ನಿರ್ಮಿಸಲಾಗಿದೆ. ಅದಕ್ಕೆ ತನ್ನದೇ ಆದ ಪಾವಿತ್ರ್ಯತೆಯೂ ಇದೆ. ಅದಕ್ಕಾಗಿ ಬೆಳಗಾವಿಗೆ ವಿವಿಧ ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರಿಸಬೇಕಾದರೆ, ಆಡಳಿತಾತ್ಮಕ ಭವನ(ವಿಕಾಸಸೌಧ ಮಾದರಿಯಲ್ಲಿ)ನಿರ್ಮಾಣ ಮಾಡುವುದು ಅಗತ್ಯವಾಗಿದೆ ಎಂದರು.

ಮುಖ್ಯ ಸಚೇತಕರಾಗಿ ಆಯ್ಕೆ ಮಾಡಿದ ಪಕ್ಷದ ಎಲ್ಲ ಹಿರಿಯ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಆಡಳಿತ ಪಕ್ಷ ಉತ್ತಮವಾಗಿ ಕೆಲಸ ಮಾಡಿದಾಗ ಸ್ಪಂದಿಸುವುದು ಮತ್ತು ದಾರಿ ತಪ್ಪಿ ನಡೆಯುವಾಗ, ವಿರೋಧ ಪಕ್ಷದಲ್ಲಿ ನಿಂತು ಚಾಟಿ ಬೀಸುವ ಕೆಲಸವನ್ನು ತಾವು ಮಾಡುವುದಾಗಿ ಹೇಳಿದರು. ಜತೆಗೆ ಸಹಕಾರ, ಗ್ರಾಮೀಣಾಭಿವೃದ್ಧಿ, ಮೂಲಭೂತ ಸೌಕರ್ಯ, ಕೃಷಿ, ಕಬ್ಬು ಬೆಳೆಗಾರರ ಸಮಸ್ಯೆ, ಜಿಲ್ಲಾ ಮಟ್ಟದಲ್ಲಿರುವ ಗ್ರಾಪಂ, ತಾಪಂ ಹಾಗೂ ಜಿಪಂ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿರುವ ಸಮಸ್ಯೆಗಳು ಮತ್ತು ಅವುಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದಾಗಿ ಕವಟಗಿಮಠ ಹೇಳಿದರು.

ಮೇಲ್ಮನೆ ವಿಪಕ್ಷದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಆನಂದ ಮಾಮನಿ, ಮಹಾಂತೇಶ ದೊಡ್ಡಗೌಡರ, ಅಭಯ ಪಾಟೀಲ, ಅನಿಲ ಬೆನಕೆ, ವೀರಣ್ಣ ಚರಂತಿಮಠ, ಎಸ್.ವಿ.ಸಂಕನೂರ, ಅರುಣ ಶಹಾಪುರ, ಪ್ರದೀಪ ಶೆಟ್ಟರ್, ಎ.ಸಿ.ದೇವೇಗೌಡ, ಸುನೀಲಕುಮಾರ, ಕೆ.ಪಿ.ನಂಜುಂಡಿ, ಸಹೋದರ ಜಗದೀಶ ಕವಟಗಿಮಠ ಹಾಗೂ ಇತರರು ಉಪಸ್ಥಿತರಿದ್ದರು.

ಸದಲಗಾದ ಕೆರೆ ರಕ್ಷಣೆಗೆ ಆಗ್ರಹ

ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆರೆಯೊಂದು ಸಂಪೂರ್ಣ ಮಾಯವಾಗಿದೆ. ಅಲ್ಲಿ ಸ್ಥಳೀಯರು, ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೂಡಲೇ ಅವುಗಳನ್ನು ತೆರವುಗೊಳಿಸಿ, ಕೆರೆಯನ್ನು ಸಂರಕ್ಷಿಸಬೇಕು ಎಂದು ಮೇಲ್ಮನೆಯ ವಿರೋಧ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಒತ್ತಾಯಿಸಿದರು.
ಮಂಗಳವಾರ ಮೇಲ್ಮನೆಯಲ್ಲಿ ನಿಯಮ 72ರಡಿಯಲ್ಲಿ ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ ಮಂಡಿಸಿದ ಗಮನ ಸೆಳೆಯುವ ಸೂಚನೆಯ ವೇಳೆಯಲ್ಲಿ ಕವಟಗಿಮಠ ಅವರು, ಈ ವಿಷಯ ಪ್ರಸ್ತಾಪಿಸಿದರು. ಮೊದಲು ಸದಲಗಾ ಗ್ರಾಮ ಪಂಚಾಯಿತಿ ಆಗಿತ್ತು. ಈಗ ಅದು ಪಟ್ಟಣ ಪಂಚಾಯಿತಿ ಆಗಿರುವುದರಿಂದ ಅಲ್ಲಿ ಭೂಮಿ ಬೆಲೆ ಜಾಸ್ತಿಯಾಗಿದೆ. ಅದಕ್ಕಾಗಿ ಕೆರೆ ಒತ್ತುವರಿ ಮಾಡಿ, ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಈ ವಿಷಯದ ಕುರಿತು ಸಂಬಂಧಪಟ್ಟ ಸಚಿವರಿಗೆ ಲಿಖಿತ ಪತ್ರವೊಂದನ್ನು ಕೊಡಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು.