ಚನ್ನಗಿರಿ: ತುಮ್‌ಕೋಸ್ ಸಂಸ್ಥೆಯ ಸ್ಥಿತಿ ಶೋಚನೀಯವಾಗಿದ್ದ ಸಮಯದಲ್ಲಿ ಸಂಘದೊಳಗಿನ ನ್ಯೂನತೆಗಳನ್ನು ಗುರುತಿಸಿ ಅದನ್ನು ಸದಸ್ಯರು ಮತ್ತು ಷೇರುದಾರರ ಸಮ್ಮುಖದಲ್ಲಿ ರ್ಚಚಿಸಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆಯುವಂತೆ ಮಾಡಲಾಗಿದೆ ಎಂದು ತುಮ್‌ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ತಿಳಿಸಿದರು.
ತಾಲೂಕಿನ ಚನ್ನಮ್ಮಾಜಿ ಸಮುದಾಯ ಭವನದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತುಮ್‌ಕೋಸ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆ ಪ್ರಾರಂಭದಲ್ಲಿ 300 ಜನ ಸದಸ್ಯರನ್ನು ಹೊಂದಿತ್ತು. ಪ್ರಸ್ತುತ 16 ಸಾವಿರ ಸದಸ್ಯರನ್ನು ಹೊಂದಿದ ದೊಡ್ಡ ಸಹಕಾರ ಸಂಘವಾಗಿ ಹೊರಹೊಮ್ಮಿದೆ. ತಾಲೂಕಿನ ಅಡಕೆ ಬೆಳೆಗಾರರ ಹಿತವನ್ನು ಕಾಪಾಡುವ ಸಲುವಾಗಿ ಎರಡು ಬಾರಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ ಸಮಯದಲ್ಲಿ ಸಂಸ್ಥೆ ಆಡಳಿತ ಮಂಡಳಿಯಿಂದ ಏಳು ಕಡೆಗಳಲ್ಲಿ ಶಾಖೆ ತೆರೆದ ಕಾರಣ ಆ ಭಾಗದ ರೈತರಿಗೆ ಅನುಕೂಲವಾಗಿದೆ ಮತ್ತು 900 ಕೋಟಿ ವಹಿವಾಟು ನಡೆಸುತ್ತಿದೆ ಎಂದರು.
ಸಂಸ್ಥೆ ವಾರ್ಷಿಕ 12 ಕೋಟಿ ಲಾಭ ಗಳಿಸುತ್ತಿದೆ. ಸದಸ್ಯರಿಗೆ ಅನುಕೂಲವಾಗುವಂತೆ ಉಚಿತ ಆರೋಗ್ಯ ತಪಾಸಣೆ, ಅಧ್ಯಯನ ಪ್ರವಾಸ, ಜನತಾ ಗುಂಪು ವಿಮೆ, ಅಡಕೆ ಬೆಳೆೆಗಾರರ ಸಮಾವೇಶಗಳನ್ನು ನಡೆಸಲಾಗಿದೆ. ಫೆ.9 ರಂದು ನಡೆಯುವ ಚುನಾವಣೆಯಲ್ಲಿ ಮತದಾರರು ನಮ್ಮ ತಂಡಕ್ಕೆ ಆಶೀರ್ವಾದ ಮಾಡಬೇಕು. ಸದಸ್ಯರು ಮಾತ್ರವಲ್ಲದೆ ತಾಲೂಕಿನ ಅಡಕೆ ಬೆಳೆಗಾರರ ದೃಷ್ಟಿಯಿಂದ ಮುಂದಿನ ದಿನದಲ್ಲಿ ಹೈಟೆಕ್ ಕಾಲೇಜು, ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಗುರಿ ಹೊಂದಿದೆ. ಈಗಿರುವ ಸಂಸ್ಥೆ ಸೂಪರ್ ಮಾರ್ಕೆಟ್ ಅನ್ನು ಹೈಟೆಕ್ ಮಾಡಲಾಗುತ್ತದೆ ಎಂದರು.
ಕಗತೂರು ಕೆ.ಟಿ. ಓಂಕಾರಮೂರ್ತಿ, ಎಂ.ಎನ್. ಗಂಗಾಧರಪ್ಪ, ಬಿ. ಚನ್ನಬಸಪ್ಪ, ಪಾಂಡೋಮಟ್ಟಿ ಕೆ.ಎನ್. ಪ್ರಭುಲಿಂಗಪ್ಪ, ಬಿ.ಎಸ್. ಬಸವರಾಜ್, ಎಚ್.ಎಸ್. ಮಂಜುನಾಥ್, ಎಂ. ಮಂಜುನಾಥ್, ಮೀನಾಕ್ಷಿ, ರಘು. ಎನ್. ನಾಯ್ಕ, ಟಿ.ವಿ. ರಾಜು, ಲೋಕೇಶ್ವರ ಮಾಡಾಳು, ಜಿ.ಬಿ. ವಿಜಯಕುಮಾರ್, ಜಿ.ಆರ್. ಶಿವಕುಮಾರ್, ಎಲ್.ವಿ. ಶೋಭಾ, ಎಚ್.ಎಸ್. ಮಲ್ಲಿಕಾರ್ಜುನ ಇದ್ದರು.