ಈಗ ಇಸ್ರೋದಿಂದ ಸೂರ್ಯಶಿಕಾರಿ

ನವದೆಹಲಿ: ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಇತ್ತೀಚೆಗೆ ಸೂರ್ಯನ ಹೊರಮೈ ಅಧ್ಯಯನಕ್ಕೆ ಸೋಲಾರ್ ಪಾರ್ಕರ್ ಪ್ರೋಬ್ ನೌಕೆ ಉಡಾವಣೆ ಮಾಡಿರುವ ಬೆನ್ನಲ್ಲೇ ಭಾರತದ ಇಸ್ರೋ ಕೂಡ ‘ಸೂರ್ಯಶಿಕಾರಿ’ಗೆ ಸಜ್ಜಾಗುತ್ತಿದೆ.

ಮಹತ್ವಾಕಾಂಕ್ಷೆಯ ‘ಆದಿತ್ಯ – ಎಲ್1’ ಉಪಗ್ರಹವನ್ನು 2019-2020ರ ನಡುವೆ ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧತೆ ನಡೆಸಿದೆ.

ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ಹ್ಯಾಲೊ ಕಕ್ಷೆಗೆ ಉಪಗ್ರಹವನ್ನು ಸೇರಿಸಲು ಯೋಜನೆ ರೂಪಿಸಲಾಗಿದೆ. ಸೂರ್ಯನ ವಾತಾವರಣದಲ್ಲಿ ಗುರುತಿಸಲ್ಪಡುವ ಲ್ಯಾಗ್ರೇಂಗಿಯನ್ ಪಾಯಿಂಟ್ 1 (ಎಲ್1) ಸುತ್ತ ನೌಕೆ ಸುತ್ತಲಿದೆ. ಗ್ರಹಣ ಕಾಲದ ಅಡಚಣೆ ಅಥವಾ ಇನ್ಯಾವುದೇ ಸೂರ್ಯನ ಕಣಗಳು ಉಪಗ್ರಹಕ್ಕೆ ಅಪ್ಪಳಿಸುವ ಅಪಾಯ ಈ ಕಕ್ಷೆಯಲ್ಲಿ ತೀರಾ ಕಡಿಮೆ. 24 ತಾಸು ಸೂರ್ಯನ ಮೇಲೆ ನಿಗಾ ಇರಿಸಲು ಈ ಕಕ್ಷೆ ಸಹಕಾರಿ. ಹಾಗಾಗಿ ಇಲ್ಲಿ ಉಪಗ್ರಹ ಇರಿಸಿ, ಅಧ್ಯಯನ ನಡೆಸಲು ಇಸ್ರೋ ವಿಜ್ಞಾನಿಗಳ ತಂಡ ನಿರ್ಧರಿಸಿದೆ. ಶ್ರೀಹರಿಕೋಟಾದಿಂದ ಪಿಎಸ್​ಎಲ್​ವಿ-ಎಕ್ಸ್​ಎಲ್ ಮೂಲಕ ಉಪಗ್ರಹ ಉಡಾವಣೆಯಾಗಲಿದೆ.

ತಾಪಮಾನ ಏರುಪೇರು ಅಧ್ಯಯನ

ಸೂರ್ಯನ ಹೊರಮೈ ಪ್ರದೇಶ ‘ಕೊರೊನಾ’ ಅಧ್ಯಯನ ನಡೆಸಲು ಇಸ್ರೋ ನಿರ್ಧರಿಸಿದೆ. ಸೂರ್ಯನ ಕೇಂದ್ರ ಬಿಂದುವಿಗಿಂತ ಹೊರಮೈ ಶಾಖ ಹೆಚ್ಚು ತೀವ್ರ. ಕೇಂದ್ರ ಬಿಂದು ಸುಮಾರು 5726.85 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿದ್ದರೆ, ಕೊರೊನಾ ತಾಪಮಾನ ಅಂದಾಜು 10 ಲಕ್ಷ ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಈ ತಾಪಮಾನ ಏರುಪೇರು ಹೇಗೆ ಸಾಧ್ಯ? ಎಂಬುದೇ ಅಧ್ಯಯನದ ಪ್ರಮುಖ ವಿಷಯ.

ಸವಾಲಿನ ಯೋಜನೆ

ಸೂರ್ಯನ ದ್ಯುತಿಗೋಳ (ಎಕ್ಸ್ ಕಿರಣಗಳು), ವರ್ಣಗೋಳ (ಅಲ್ಟ್ರಾ ವೈಲೆಟ್ ಕಿರಣಗಳು), ಕೊರೊನಾಗಳ ಜಂಟಿ ಅಧ್ಯಯನವನ್ನು ಆದಿತ್ಯ ಎಲ್-1 ನಡೆಸಲಿದೆ. ಎಲ್-1 ಕಕ್ಷೆಗೆ ಬಂದು ಸೇರುವ ಸೂರ್ಯ ಹೊರಸೂಸುವ ವಿವಿಧ ಬಗೆಯ ಕಣಗಳನ್ನು ಪರಿಶೀಲಿಸಲಾಗುತ್ತದೆ. ಎಲ್-1 ಸುತ್ತಲಿನ ಹಾಲೊ ಕಕ್ಷೆಯ ಆಯಸ್ಕಾಂತೀಯ ಪ್ರದೇಶದ ಪ್ರಭಾವವನ್ನು ಉಪಗ್ರಹ ಸೂಕ್ಷ್ಮವಾಗಿ ಗಮನಿಸಲಿದೆ. ಸೂರ್ಯನ ಗುರುತ್ವಾಕರ್ಷಣ ಮತ್ತು ಆಯಸ್ಕಾಂತೀಯ ಪ್ರಭಾವಕ್ಕೆ ಒಳಗಾಗದೇ ಉಪಗ್ರಹವು ಅಧ್ಯಯನ ಕೈಗೊಳ್ಳಬೇಕಿರುವುದು ಸವಾಲಿನ ಸಂಗತಿಯಾಗಿದೆ.