ಷರೀಫ್, ಅಂಬರೀಷ್ ನಿಧನ ರಾಜ್ಯಕ್ಕೆ ನಷ್ಟ

ಶಿವಮೊಗ್ಗ: ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನಟ ಅಂಬರೀಷ್ ಕೊಡುಗೆ ಅಪಾರ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.

ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಅಂಬರೀಷ್ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಜನರ ಪ್ರೀತಿಗೆ ಪಾತ್ರರಾಗಿದ್ದರು ಎಂದು ತಿಳಿಸಿದರು.

ರಾಜ್ಯದಲ್ಲಿ ಮಹತ್ತರ ರೈಲ್ವೇ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದವರು ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್. ರಾಜ್ಯ, ರಾಷ್ಟ್ರ ಅಭಿವೃದ್ಧಿಯಲ್ಲಿ ಪಾತ್ರ ವಹಿಸಿದ್ದ ಇಬ್ಬರು ಮಾಜಿ ಕೇಂದ್ರ ಸಚಿವರ ನಿಧನದಿಂದ ರಾಜ್ಯಕ್ಕೆ ತುಂಬಾ ನಷ್ಟವಾಗಿದೆ ಎಂದರು.

ಕನಕದಾಸರು ನಾಡು ಕಂಡ ಶೇಷ್ಠ ಮಾರ್ಗದರ್ಶಕರು. ಕನಕದಾಸರ ಜೀವನದ ಕುರಿತು ಯುವ ಸಮುದಾಯಕ್ಕೆ ಪಾಲಕರು ಹಾಗೂ ಶಿಕ್ಷಕರು ಮನವರಿಕೆ ಮಾಡಬೇಕು. ಕನಕದಾಸರ ಚಿಂತನೆಗಳ ಅಧ್ಯಯನದಲ್ಲಿ ಆಸಕ್ತಿ ಬೆಳೆಸಬೇಕು. ದಾಸ ಶ್ರೇಷ್ಠ ಪರಂಪರೆಯ ಚಿಂತನೆಗಳ ಕಲಿಕೆಯಿಂದ ಜೀವನದಲ್ಲಿ ಸನ್ಮಾರ್ಗದಲ್ಲಿ ಸಾಗಬಹುದು ಎಂದು ಹೇಳಿದರು.

ವಾಲಿಬಾಲ್ ಕ್ಷೇತ್ರದಲ್ಲಿ ಭಾರತ ದೇಶ ವಿಶ್ವದಲ್ಲೇ ಅತ್ಯುನ್ನತ ಸ್ಥಾನ ತಲುಪುವಂತೆ ಕ್ರೀಡಾಪಟುಗಳು ಗುರಿ ಹೊಂದಬೇಕು. ವಾಲಿಬಾಲ್ ವಿಶ್ವಮಟ್ಟದ ಟೂರ್ನಿಗಳಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಬೇಕಾದರೆ ಯುವಪೀಳಿಗೆ ನಿರಂತರ ಪರಿಶ್ರಮ ವಹಿಸಿ ಶ್ರದ್ಧೆಯಿಂದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಎಂಎಲ್​ಸಿ ಆರ್.ಪ್ರಸನ್ನಕುಮಾರ್, ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಭಾಸ್ಕರ್ ಕಾಮತ್, ಕಾರ್ಯದರ್ಶಿ ಕೆ.ಎಸ್.ಶಶಿ, ವಾಲಿಬಾಲ್ ತರಬೇತುದಾರ ಉದಯ್ಕುಮಾರ್, ಪ್ರಾಚಾರ್ಯ ಎಸ್.ವಿ.ಗುರುರಾಜ್, ನಂದಾ, ಕುಮಾರಸ್ವಾಮಿ, ವಾಸಪ್ಪಗೌಡ, ರಮೇಶ್ ಉಪಸ್ಥಿತರಿದ್ದರು.

ಲೀಗ್ ಮಾದರಿ ಪಂದ್ಯಗಳು: ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ 4 ವಿಭಾಗಗಳಿಂದ 250ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. 4 ಅಂಕಣಗಳಲ್ಲಿ ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಹೊನಲು ಬೆಳಕಿನ ಪಂದ್ಯಗಳು ಸಹ ಇರಲಿವೆ. 20ಕ್ಕೂ ಹೆಚ್ಚು ರಾಜ್ಯ, ರಾಷ್ಟ್ರೀಯ ಮಟ್ಟದ ತೀರ್ಪಗಾರರು ಭಾಗವಹಿಸುವರು. ಆದಿಚುಂಚನಗಿರಿ ಸಂಸ್ಥೆಯಿಂದ ಕ್ರೀಡಾಪಟುಗಳಿಗೆ ಊಟ, ಸಾರಿಗೆ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.