ಅಮಾವಾಸ್ಯೆ ಪೂಜೆ ಸಲ್ಲಿಸಿದ ಕುಮಾರಸ್ವಾಮಿ

ನಾಗಮಂಗಲ: ಕಾಲಭೈರವೇಶ್ವರನ ಅಮಾವಾಸ್ಯೆ ಪೂಜೆ ಫಲಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ಆದಿಚುಂಚನಗಿರಿ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಬಂದು ವಿಶೇಷ ಅಮಾವಾಸ್ಯೆ ಪೂಜೆ ಸಲ್ಲಿಸಿದರು.

ಹಿಂದೆ 9 ಅಮಾವಾಸ್ಯೆ ಪೂಜೆ ಸಲ್ಲಿಸಿದ್ದ ದೇವೇಗೌಡರ ಕುಟುಂಬ, ಹೆಚ್ಡಿಡಿ, ಹೆಚ್ಡಿಕೆ, ರೇವಣ್ಣ ದಂಪತಿಯಿಂದ ತಲಾ 3 ಅಮಾವಾಸ್ಯೆಗಳಲ್ಲಿ ಪೂಜೆ ಸಲ್ಲಿಸಿದ್ದರು. ಸಿಎಂ ಆದ ಬಳಿಕ ಹರಕೆ ತೀರಿಸಲು ಬುಧವಾರ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಸ್ವತಃ ನಿರ್ಮಲಾನಂದನಾಥ ಶ್ರೀಗಳು ಅಮಾವಾಸ್ಯೆ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಕ್ಷೇತ್ರ ಪ್ರದಕ್ಷಿಣೆ, ಕ್ಷೇತ್ರಾಧಿ ದೇವತೆಗಳ ದರ್ಶನ, ವಿಶೇಷ ಪೂಜೆ ನೆರವೇರಿಸಿದರಲ್ಲದೆ, ಮುಖ್ಯಮಂತ್ರಿಗಳ ಪೂಜಾ ಕಾರ್ಯವನ್ನು ನೆರವೇರಿಸಿದರು.

ನಂತರ ಸಿಎಂಗೆ ಆಶೀರ್ವದಿಸಿದ ಶ್ರೀಗಳು, ಫಲ-ತಾಂಬೂಲ ನೀಡಿ ಗೌರವಿಸಿದರು. ಕುಮಾರಸ್ವಾಮಿ ಅವರ ಜತೆಗೆ ಪತ್ನಿ ಅನಿತಾ ಕುಮಾರಸ್ವಾಮಿ, ನಿಖಿಲ್ಕುಮಾರ್, ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಸುರೇಶ್‌ಗೌಡ, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಕೂಡ ಪೂಜೆಯಲ್ಲಿ ಭಾಗಿಯಾಗಿದ್ದರು.

ಗೌರವ ವಂದನೆ: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರಿಗೆ ಪೊಲೀಸರು ಗೌರವ ವಂದನೆ ಸಲ್ಲಿಸಿದರು. ನಂತರ ಶ್ರೀಮಠದಿಂದ ಮಂಗಳವಾದ್ಯ, ಪೂರ್ಣ ಕುಂಭದೊಂದಿಗೆ ಸ್ವಾಗತ ಕೋರಲಾಯಿತು.

ಕ್ಷೇತ್ರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ ಭದ್ರತೆಯ ನೇತೃತ್ವ ವಹಿಸಿದ್ದರು. ಶ್ವಾನ ದಳ, ಬಾಂಬ್ ಪತ್ತೆ ದಳದಿಂದ ತಪಾಸಣೆಯನ್ನು ಕೂಡ ಬೆಳಗ್ಗೆ ಮಾಡಲಾಗಿತ್ತು.

ಜಯನಗರದ ಫಲಿತಾಂಶ ನಿರೀಕ್ಷಿತ: ಶ್ರೀ ಕ್ಷೇತ್ರಕ್ಕೆ ಈ ಹಿಂದೆ ಬಂದ ಹಾಗೆ ಬಂದಿರುವೆ. ಅಮಾವಾಸ್ಯೆ ಪೂಜೆ ವಿಶೇಷ. ಶ್ರೀಗಳು ಮಾಡುವ ಪೂಜೆ ಬೇರೆ ಕ್ಷೇತ್ರದಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಅಮಾವಾಸ್ಯೆ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರ ಜತೆ ಮಾತನಾಡಿದ ಅವರು, ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿರುವೆ. ದೇವರ ಮೇಲಿನ ನಂಬಿಕೆ ಇದೆ. ನಮ್ಮ ಸಂಸ್ಕೃತಿಯಲ್ಲಿ ಕಾಣದ ಶಕ್ತಿ ಇದೆ. ಸಿಎಂ ಜವಾಬ್ದಾರಿ ನಿರ್ವಹಿಸಲು ಪ್ರಕೃತಿಯ ಕೃಪೆ ಬೇಕು. ದೇವರ ಅನುಗ್ರಹದಿಂದ ಪ್ರಮಾಣವಚನ ದಿನದಿಂದ ಮಳೆ ಆಗುತ್ತಿದೆ. ತೀವ್ರ ಮಳೆಯಿಂದ ನಷ್ಟದ ಬಗ್ಗೆ ಮಾಹಿತಿ ಇದೆ ಎಂದರು.

ಜಲಾಶಯಗಳು ತುಂಬುವ ವಿಶ್ವಾಸವಿದ್ದು, ಜಿಲ್ಲೆಯ ರೈತರಿಗೆ ಭತ್ತ ನಾಟಿ ಮಾಡುವ ಕಾಲ ಬರಲಿದೆ. ಭತ್ತದ ನಾಟಿ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತೇನೆ. ಸಿಎಂ ಆಗಲು ಕಾಲಭೈರವನ ಪ್ರಭಾವ ಕಾರಣ. ಜನರ ನೆಮ್ಮದಿಗಾಗಿ ಪೂಜೆ ಮಾಡುತ್ತಿದ್ದು, ಅಧಿಕಾರ ಶಾಶ್ವತ ಅಲ್ಲ ಎಂಬುದು ನನಗೆ ಗೊತ್ತು ಎಂದರು.

ಜಯನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿರೀಕ್ಷಿತ ಫಲಿತಾಂಶ. ಕಾಂಗ್ರೆಸ್ ಅಭ್ಯರ್ಥಿ ಜನರ ಜತೆಗಿನ ಒಡನಾಟ ಗೆಲುವಿಗೆ ಕಾರಣ ಎಂದ ಅವರು, ನನ್ನ ವೈಯಕ್ತಿಕ ಫಿಟ್‌ನೆಸ್‌ಗಿಂತ ರಾಜ್ಯದ ಅಭಿವೃದ್ಧಿ ಫಿಟ್‌ನೆಸ್ ಮುಖ್ಯ. ಪಿಎಂ ಮೊದಿಯಿಂದ ಯಾವುದೇ ಪತ್ರ ಬೇಕಾಗಿಲ್ಲ ಎಂದು ಪ್ರಧಾನಿ ಸವಾಲಿಗೆ ತಿರುಗೇಟು ನೀಡಿದರು.

ಇಸ್ರೆಲ್ ಮಾದರಿ ಕೃಷಿಯನ್ನು ಉತ್ತರ ಮತ್ತು ದಕ್ಷಿಣ ಕರ್ನಾಟಕದ ಎರಡು ಕಡೆ ಜಾರಿಗೆ ಚಿಂತನೆ ಮಾಡಿದ್ದು, ಸಾಲ ಮನ್ನಾ ವಿಚಾರದಲ್ಲಿ ಬೇರೆ ಪಕ್ಷದ ರೀತಿ ಪಲಾಯನ ಮಾಡಲ್ಲ. ನನ್ನ ಘೋಷಣೆ ಅನುಷ್ಠಾನ ಮಾಡುತ್ತೇನೆ ಎಂದರು.

ಕಳ್ಳರ ಕೈ ಚಳಕ: ಸಿಎಂ ಕುಮಾರಸ್ವಾಮಿ ಆಗಮನ ಮತ್ತು ಅಮಾವಾಸ್ಯೆ ಹಿನ್ನೆಲೆ ಕಾರ್ಯಕರ್ತರು ಹಾಗೂ ಭಕ್ತಾದಿಗಳ ಮಧ್ಯೆ ಇದ್ದ ಕಳ್ಳರು ಕೈಚಳಕ ತೋರಿ ಸಾವಿರಾರು ರೂ.ಗಳನ್ನು ದೋಚಿದರು.

ಜೆಡಿಎಸ್ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಪಾಳ್ಯ ರಘು ಅವರ ಜೇಬಿನಲ್ಲಿದ್ದ 40,000ರೂ. ಮತ್ತು ಬೆಳ್ಳೂರು ನಿವಾಸಿ ಫಣಿ ಎಂಬುವರ ಜೇಬಿನಲ್ಲಿ 16,000 ರೂ. ಎಗರಿಸಿಕೊಂಡು ಪರಾರಿಯಾಗಿದ್ದಾರೆ.

ಸಿಎಂ ನೋಡಲು ನೂಕು ನುಗ್ಗಲು ಉಂಟಾದ ಸಂದರ್ಭದಲ್ಲಿ ಕಳ್ಳರು ಕೈ ಚಳಕ ಪ್ರದರ್ಶಿಸಿದ್ದಾರೆ. ಕುಮಾರಸ್ವಾಮಿ ಅವರನ್ನು ನೋಡಲು ದೇವಾಲಯದ ಬಳಿ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅಭಿನಂದಿಸಲು ಮುಗಿಬಿದ್ದರು.

Leave a Reply

Your email address will not be published. Required fields are marked *