ಶಾಂತಿ ಹಿಂದು ಧರ್ಮದ ತಿರುಳು

ನಾಗಮಂಗಲ: ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ ಸರ್ವಜನಾಂಗದ ಶಾಂತಿಯ ತೋಟವೇ ಹಿಂದು ಧರ್ಮದ ತಿರುಳಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಣ್ಣಿಸಿದರು.

ತಾಲೂಕಿನ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ-ಜಾತಿಗಳ ನಡುವೆ ವೈಷಮ್ಯಗಳನ್ನು ಸಾಧಿಸದೆ ಎಲ್ಲ ಧರ್ಮದ ಸಾರ ಒಂದೇ ಎಂಬಂತೆ ಪ್ರತಿಯೊಬ್ಬರೂ ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವುದು ಸಮ್ಮೇಳನಗಳ ಧ್ಯೇಯವಾಗಬೇಕು ಎಂದು ತಿಳಿಸಿದರು.

‘ಹಿಂದು ಧರ್ಮ’ ಕುರಿತು ಉಪನ್ಯಾಸ ನೀಡಿದ ನಾಗನೂರು ರುದ್ರಾಕ್ಷಿ ಮಠದ ಪೀಠಾಧ್ಯಕ್ಷ ತೋಂಟದ ಸಿದ್ಧರಾಮ ಸ್ವಾಮೀಜಿ, ಹಿಂದು ಧರ್ಮವೆಂದರೆ ಅದೊಂದು ಜೀವನ ಮಾರ್ಗ. ಮನುಷ್ಯ ಧರ್ಮ ಮಾರ್ಗದಲ್ಲಿ ನಡೆಯಬೇಕು. ಧರ್ಮ ಮಾರ್ಗದಲ್ಲಿ ಜ್ಞಾನ ಪಡೆಯಬೇಕು. ಧರ್ಮ ಮಾರ್ಗದಲ್ಲಿಯೇ ಅರ್ಥ ಹಾಗೂ ಕಾಮವನ್ನು ಗಳಿಸಬೇಕು. ತನ್ಮೂಲಕ ಮೋಕ್ಷವನ್ನು ಪಡೆಯಬೇಕು ಎಂಬುದು ಹಿಂದು ಧರ್ಮದ ತಿರುಳಾಗಿದೆ. ಎಲ್ಲ ಧರ್ಮಗಳನ್ನು ಅಪ್ಪಿಕೊಂಡಿರುವ ಧರ್ಮವೆಂದರೆ ಅದು ಹಿಂದು ಧರ್ಮ ಎಂದು ಪ್ರತಿಪಾದಿಸಿದರು.


ಕ್ರೈಸ್ತ ಧರ್ಮದ ಬಗ್ಗೆ ಉಪನ್ಯಾಸ ನೀಡಿದ ಎಡ್ವರ್ಡ್ ಥಾಮಸ್ ಅವರು, ಯಾವ ಧರ್ಮವೂ ಕೆಟ್ಟ ಮಾರ್ಗದಲ್ಲಿ ನಡೆಯಿರಿ ಎಂದು ಹೇಳುವುದಿಲ್ಲ. ಜನರು ತಪ್ಪು ಮಾರ್ಗದಲ್ಲಿ ನಡೆಯುವುದನ್ನು ಬಿಡಬೇಕು. ಧರ್ಮಗುರುಗಳು ತಿಳಿಸುವ ಧರ್ಮ ಮಾರ್ಗದಲ್ಲಿ ನಡೆಯಬೇಕು. ತನ್ಮೂಲಕ ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇಸ್ಲಾಂ ಧರ್ಮದ ಬಗ್ಗೆ ಉಪನ್ಯಾಸ ನೀಡಿದ ಅನೀಸ್ ಕೌಸರಿ ಅವರು, ಧರ್ಮ ಯಾವುದಾದರೂ ಇರಲಿ ಮಾನವೀಯ ಸೇವೆಯೇ ಮುಖ್ಯ. ಹಸಿದವರಿಗೆ ಅನ್ನ ನೀಡುವುದೇ ಧರ್ಮ. ದುಡಿದುದ್ದನ್ನು ಹಂಚಿ ಉಣ್ಣುವುದೇ ಧರ್ಮ. ಒಬ್ಬನನ್ನು ನೀನು ಕೊಂದರೆ ಇಡೀ ಮನುಕುಲವನ್ನು ಕೊಂದ ಶಿಕ್ಷೆ ನಿನಗೆ ನೀಡಲ್ಪಡುತ್ತದೆ ಎಂದು ಇಸ್ಲಾಂ ಧರ್ಮ ಹೇಳುತ್ತದೆ. ಧರ್ಮ ಇರುವುದೇ ಒಳ್ಳೆಯದನ್ನು ಬೋಧಿಸಲು, ಒಳ್ಳೆಯದನ್ನು ಮಾಡಲು ಎಂಬುದನ್ನು ಎಲ್ಲರೂ ಅರಿತು ನಡೆಯಬೇಕು ಎಂದು ತಿಳಿಸಿದರು.

ಬೌದ್ಧ ಧರ್ಮದ ಬಗ್ಗೆ ಗೆಸೆ ತಶಿ ಸೆರಿಂಗ್ ಉಪನ್ಯಾಸ ನೀಡಿದರು. ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶಾಸಕ ಸುರೇಶ್‌ಗೌಡ ಮತ್ತಿತರರು ಹಾಜರಿದ್ದರು.

ಸಮ್ಮೇಳನಕ್ಕೂ ಮುನ್ನ ಶ್ರೀ ಕ್ಷೇತ್ರದ ಅಧಿದೇವತೆ ಶ್ರೀ ಕಾಲಭೈರವೇಶ್ವರಸ್ವಾಮಿ, ಮಾಳಮ್ಮದೇವಿ ಮತ್ತು ಸ್ಥಂಭಾಬಿಕೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಅನೇಕರು ಪೂಜೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

ತೆಪ್ಪೋತ್ಸವ: ಸರ್ವಧರ್ಮ ಸಮ್ಮೇಳನದ ನಂತರ ಶ್ರೀ ಕಾಲಭೈರವೇಶ್ವರ ಪುಷ್ಕರಣಿಯಲ್ಲಿ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಅಲಂಕೃತಗೊಂಡ ತೆಪ್ಪದಲ್ಲಿ ಕುಳಿತ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭಕ್ತರನ್ನು ಆಶೀರ್ವದಿಸಿದರು. ಸಾವಿರಾರು ಭಕ್ತರು ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು. ಉತ್ಸವ ಆರಂಭಗೊಳ್ಳುತ್ತಿದ್ದಂತೆ ಬಣ್ಣ ಬಣ್ಣದ ಪಟಾಕಿಗಳು ಸಿಡಿದು ಬಾನಂಗಳದಲ್ಲಿ ಚಿತ್ತಾರ ಬಿಡಿಸಿದವು. ಸಂಗೀತ ನೃತ್ಯ ಕಾರಂಜಿ ಎಲ್ಲರ ಗಮನ ಸೆಳೆಯಿತು. ಜಾತ್ರೋತ್ಸವ ಪ್ರಯುಕ್ತ ಆದಿಚುಂಚನಗಿರಿ ಮಠ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು.