ಆದಿಉಡುಪಿ- ಕಡಿಯಾಳಿ ಭೂಸ್ವಾಧೀನ ರದ್ದು

ಉಡುಪಿ: ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ಅಗಲೀಕರಣ ಕಾಮಗಾರಿ ಯೋಜನೆಯ ಭೂಸ್ವಾಧೀನಕ್ಕೆ ಸಂಬಂಧಿಸಿ ಮಂಗಳವಾರ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಸಾರ್ವಜನಿಕರ ಆಕ್ಷೇಪಕ್ಕೆ ಮನ್ನಣೆ ನೀಡಿ ಆದಿಉಡುಪಿ- ಕಡಿಯಾಳಿ ಭೂಸ್ವಾಧೀನ ರದ್ದುಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು.

ಶಾಸಕ ಕೆ.ರಘುಪತಿ ಭಟ್, ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಅಧಿಕಾರಿಗಳು, ಇಂಜಿನಿಯರ್, ನಗರಸಭಾ ಅಧಿಕಾರಿಗಳು, ಸದಸ್ಯರೊಂದಿಗೆ ಆದಿ ಉಡುಪಿಯಿಂದ ಪರ್ಕಳದವರೆಗಿನ ರಸ್ತೆ ಅಗಲೀಕರಣದ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.

ಬೆಳಗ್ಗೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಹೆಚ್ಚಿನ ಭೂಮಿ ಕಳೆದುಕೊಳ್ಳುವವರು ಆಕ್ಷೇಪ ಸಲ್ಲಿಸಿದ್ದರು. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ಈಗಿನ ನಿರ್ಧಾರದಂತೆ ಆದಿ ಉಡುಪಿಯಿಂದ ಕಡಿಯಾಳಿಯವರೆಗೆ 30 ಮೀಟರ್ ಅಗಲ ಮಾಡುವ ನೋಟಿಫಿಕೇಶನ್ ರದ್ದುಪಡಿಸಿ, ಹಿಂದೆ ಇದ್ದಂತಹ ರಸ್ತೆಯನ್ನು 80 ಫೀಟ್‌ಗೆ ಕಾಯ್ದುಕೊಳ್ಳಲಾಗುವುದು. ನಗರದ ಬನ್ನಂಜೆ ನಾರಾಯಣ ಗುರು ಜಂಕ್ಷನ್, ಸಿಟಿ ಬಸ್ ನಿಲ್ದಾಣ ಮತ್ತು ಕಲ್ಸಂಕ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ಲಾನ್ ಪ್ರಕಾರ ಭೂಸ್ವಾಧೀನ ನಡೆಸಿ ಅಗಲೀಕರಣ ನಡೆಸುವಂತೆ ತೀರ್ಮಾನಿಸಲಾಯಿತು. ಜಂಕ್ಷನ್ ಅಭಿವೃದ್ಧಿ ಬಿಟ್ಟು ಆದಿಉಡುಪಿಯಿಂದ ಕಡಿಯಾಳಿವರೆಗಿನ ರಸ್ತೆಯನ್ನು 80 ಫೀಟ್‌ಗೆ ಭೂಸ್ವಾಧೀನ ಪ್ರಕ್ರಿಯೆ ಮಾಡುವುದೆಂದು, ಉಳಿದವುಗಳನ್ನು ಕೈಬಿಡುವ ಬಗ್ಗೆ ನಿರ್ಧರಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನ ಅಧಿಕಾರಿಗಳಾದ ಬಸವರಾಜು, ನಾಗರಾಜ್, ಇಂಜಿನಿಯರ್ ಮಂಜುನಾಥ್ ನಾಯಕ್, ನಗರಸಭೆ ಪೌರಾಯುಕ್ತ ಆನಂದ್ ಸಿ. ಕಲ್ಲೋಳಿಕರ್, ನಗರಸಭೆ ಇಂಜಿನಿಯರ್‌ಗಳು, ಸದಸ್ಯರು ಇದ್ದರು.

ಪರ್ಕಳದಲ್ಲಿ ಬದಲಾವಣೆ: ಪರ್ಕಳ ಹೈಸ್ಕೂಲ್‌ನಿಂದ ಪೇಟೆಯವರೆಗೆ 1.5 ಮೀ. ರಸ್ತೆಯ ಜಾಗ ಬದಲಾಯಿಸಲು ತೀರ್ಮಾನಿಸಲಾಗಿದೆ. ಖಾಸಗಿ ಜಾಗದ ಬದಲು ಸರ್ಕಾರಿ ಜಾಗದಲ್ಲೇ ಈ ರಸ್ತೆ ನಿರ್ಮಾಣವಾಗಲಿದ್ದು, ಭೂಸ್ವಾಧೀನ ಮಾಡುವುದನ್ನು ತಪ್ಪಿಸಬಹುದು ಎಂಬ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಪರ್ಕಳ ಪೇಟೆಯಲ್ಲಿ 30 ಮೀಟರ್ ಅಗಲದ ರಸ್ತೆ ನಿರ್ಮಾಣಗೊಳ್ಳಲಿದೆ.

Leave a Reply

Your email address will not be published. Required fields are marked *