ಹಣಕ್ಕಾಗಿ ಅಡಕೆ ಉದ್ಯಮಿಗೆ ಭೂಗತ ಪಾತಕಿ ಬೆದರಿಕೆ

ಶಿವಮೊಗ್ಗ: ಅಡಕೆ ವರ್ತಕ, ತೀರ್ಥಹಳ್ಳಿ ಎಪಿಎಂಸಿ ಸದಸ್ಯ ಕೋಣಂದೂರಿನ ಪ್ರಕಾಶ್ ಅವರಿಗೆ ಭೂಗತ ಪಾತಕಿ ಹೆಸರಿನಲ್ಲಿ ಬೆದರಿಕೆ ಕರೆ ಬಂದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಜೂನ್ 19ರಂದು ಭೂಗತ ಪಾತಕಿ ಹೆಸರಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದರಿಂದ ಆತಂಕಗೊಂಡ ಪ್ರಕಾಶ್ ಅದೇ ದಿನ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿಯೊಬ್ಬ ತಾವು ಭೂಗತ ಪಾತಕಿ ಕಡೆಯವರು. ನಮಗೆ ಮಾಮೂಲಿ(ಹಣ) ಕೊಡಬೇಕು. ಇಲ್ಲವಾದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಅದಾದ ನಂತರ 2-3 ಬಾರಿ ಅದೇ ನಂಬರ್​ನಿಂದ ಕರೆಗಳು ಬಂದಿದ್ದು, ಪ್ರಕಾಶ್ ಅವರು ಸ್ವೀಕರಿಸದ ಪೊಲೀಸರಿಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ‘ವಿಜಯವಾಣಿ’ ಜತೆ ದೂರವಾಣಿಯಲ್ಲಿ ಮಾತನಾಡಿದ ಪ್ರಕಾಶ್, ಜೂನ್ ತಿಂಗಳಲ್ಲಿ ಭೂಗತ ಪಾತಕಿ ಹೆಸರಲ್ಲಿ ಬೆದರಿಕೆ ಬಂದಿತ್ತು. ಆ ಬಗ್ಗೆ ತೀರ್ಥಹಳ್ಳಿ ಠಾಣೆಗೆ ದೂರು ನೀಡಿದ್ದೇನೆ. ಹಿಂದಿಯಲ್ಲಿ ಮಾತನಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಅವರು ಮಾತನಾಡುತ್ತಿದ್ದಂತೆ ನಾನು ಕರೆ ಕಟ್ ಮಾಡಿದ್ದೆ. ಆನಂತರವೂ ಪುನಃ ಅದೇ ನಂಬರ್​ನಿಂದ ಮೂರು ಬಾರಿ ಕರೆ ಮಾಡಿದ್ದರು. ಆದರೆ ಸ್ವೀಕರಿಸಿಲ್ಲ ಎಂದು ಹೇಳಿದರು. ಈ ಬಗ್ಗೆ ಡಿವೈಎಸ್​ಪಿ ಗಣೇಶ್ ಹೆಗಡೆ ಮಾರ್ಗದರ್ಶನದಲ್ಲಿ ಪಿಎಸ್​ಐ ಭರತ್ ಕುಮಾರ್ ತನಿಖೆ ಮುಂದುವರಿಸಿದ್ದಾರೆ.