‘ಆಧಾರ್’ ಸಮಸ್ಯೆಗಳಿಗೆ ಸ್ಪಂದಿಸದ ಆಡಳಿತ

ಹರೀಶ್ ಮೋಟುಕಾನ ಮಂಗಳೂರು

ಸರ್ಕಾರದ ಯಾವುದೇ ಸೌಲಭ್ಯ ಸೇರಿದಂತೆ ಸರ್ಕಾರೇತರ ಕೆಲಸಗಳಿಗೂ ಆಧಾರ್ ಕಡ್ಡಾಯ. ಆಧಾರ್ ನೋಂದಣಿ ಅಥವಾ ತಿದ್ದುಪಡಿಗೆ ಸಾಕಷ್ಟು ಕೇಂದ್ರಗಳು ಇಲ್ಲದೆ ಇರುವುದು ಮತ್ತು ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಕ್ಕಳಿಗೆ ಶಾಲೆಗಳ ದಾಖಲಾತಿ, ವಿದ್ಯಾರ್ಥಿ ವೇತನ ಪಡೆಯುವುದು, ರೇಷನ್ ಕಾರ್ಡ್‌ಗೆ ಸೇರ್ಪಡೆ ಸೇರಿದಂತೆ ಆಧಾರ್ ಅವಶ್ಯ. ಆದರೆ ತಾಲೂಕು ಕೇಂದ್ರಗಳಲ್ಲಿ ಬೆರಳೆಣಿಕೆಯ ಕೇಂದ್ರಗಳಿರುವುದರಿಂದ ಅಲ್ಲಿ ನೂಕುನುಗ್ಗಲಿನ ಪರಿಸ್ಥಿತಿ. ಬೆಳಗ್ಗೆ 5 ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಲ್ಲುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ.
ಅಂಚೆ ಕಚೇರಿ, ಕೆಲವು ಬ್ಯಾಂಕ್‌ನಲ್ಲಿ ಆಧಾರ್ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇಲ್ಲಿ ದಿನವೊಂದಕ್ಕೆ 8-10 ಮಂದಿಗಷ್ಟೇ ಅವಕಾಶ. ಟೋಕನ್ ವ್ಯವಸ್ಥೆ ಮಾಡಿರುವುದರಿಂದ ಬೆಳಗ್ಗೆ 5 ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಕೆಲವೊಮ್ಮೆ ಅಷ್ಟು ಬೇಗ ಬಂದರೂ ಟೋಕನ್ ಸಿಗದೆ ಮರುದಿನ ಬರಬೇಕಾಗುತ್ತದೆ. ಸರ್ವರ್ ಸಮಸ್ಯೆ ಇದ್ದರೆ ಟೋಕನ್ ಸಿಕ್ಕಿದರೂ ಕೆಲಸ ಆಗುವುದಿಲ್ಲ.

ಗ್ರಾ.ಪಂ.ನಲ್ಲಿ ಸ್ಥಗಿತ: ಸುಮಾರು 6 ತಿಂಗಳ ಹಿಂದೆ ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ನೋಂದಣಿ, ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು. ಲೋಕಸಭಾ ಚುನಾವಣೆ ಸಂದರ್ಭ ಸ್ಥಗಿತಗೊಳಿಸಲಾಗಿತ್ತು. ಚುನಾವಣೆ ಮುಗಿದ ಬಳಿಕ ವೆಬ್‌ಸೈಟ್ ತೆರೆದುಕೊಳ್ಳುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರು ತಾಲೂಕು ಕೇಂದ್ರಗಳಿಗೆ ಹೋಗಬೇಕಾಗಿದೆ. ತಾಲೂಕು ಕೇಂದ್ರಗಳಲ್ಲಿ ಇರುವ ಆಧಾರ್ ನೋಂದಣಿ ಕೇಂದ್ರಗಳಲ್ಲಿ ಒಬ್ಬರು ಅಥವಾ ಇಬ್ಬರು ಆಪರೇಟರ್ ಇದ್ದಾರೆ.

ಹಿಂದೆ ಸೈಬರ್ ಸೆಂಟರ್‌ಗಳಲ್ಲಿ ಆಧಾರ್ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರಸ್ತುತ ಅದನ್ನೂ ರದ್ದು ಮಾಡಲಾಗಿದೆ. ನಾಡ ಕಚೇರಿಗಳಲ್ಲಿ ಬೆಳಗ್ಗೆಯಿಂದಲೇ ಸರತಿ ಸಾಲು ಸಾಮಾನ್ಯವಾಗಿದೆ. ಇಲ್ಲಿ ಹೆಚ್ಚಿನ ಆಧಾರ್ ಕಿಟ್ ಹಾಗೂ ಸಿಬ್ಬಂದಿ ಕಲ್ಪಿಸಿದರೆ ಪ್ರಯೋಜನವಾಗಬಹುದು. ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವ್ಯವಸ್ಥೆ ಕಲ್ಪಿಸಿದರೆ ಆಧಾರ್ ನೋಂದಣಿ, ತಿದ್ದುಪಡಿ ಕೆಲಸಗಳು ಸುಗಮವಾಗಲಿದೆ.

ಆಂಗ್ಲ ಭಾಷೆ ಮಾತ್ರ ಇದ್ದರೆ ಸಮಸ್ಯೆ:  ಆಂಗ್ಲ ಭಾಷೆಯ ಜತೆಗೆ ಕನ್ನಡದಲ್ಲೂ ಆಧಾರ್ ಕಾರ್ಡ್ ಮುದ್ರಣಗೊಂಡಿರಬೇಕು. ತಾಂತ್ರಿಕ ದೋಷದಿಂದ ಕನ್ನಡ ಭಾಷೆ ಬಿಟ್ಟು ಹೋದರೆ ತಿದ್ದುಪಡಿಯಾಗಬೇಕು. ಪಡಿತರ ಚೀಟಿಗೆ ಹೆಸರು ಸೇರಿಸುವಾಗ ಕನ್ನಡದಲ್ಲಿ ಹೆಸರು ಕಡ್ಡಾಯವಾಗಿದೆ. ಆಂಗ್ಲ ಭಾಷೆ ಮಾತ್ರ ಇದ್ದರೆ ಪಡಿತರ ಚೀಟಿಯ ಆನ್‌ಲೈನ್ ವ್ಯವಸ್ಥೆ ಸ್ವೀಕರಿಸುವುದಿಲ್ಲ. ಜಿಲ್ಲೆಯಲ್ಲಿ ಬಾಲ ಆಧಾರ್‌ಗೆ ಸೇರ್ಪಡೆಗೊಂಡ ಸಾವಿರಾರು ಮಕ್ಕಳ ಆಧಾರ್ ಕಾರ್ಡ್ ಸಾಫ್ಟ್‌ವೇರ್‌ನ ತಾಂತ್ರಿಕ ದೋಷದಿಂದ ಆಂಗ್ಲ ಭಾಷೆಯಲ್ಲಿ ಮಾತ್ರ ಮುದ್ರಣವಾಗಿದೆ. ಇದರಿಂದ ರೇಶನ್ ಕಾರ್ಡ್‌ಗೆ ಸೇರ್ಪಡೆ ಸಾಧ್ಯವಾಗುತ್ತಿಲ್ಲ.

ಗ್ರಾಮೀಣ ಭಾಗದ ಜನರು ಆಧಾರ್ ನೋಂದಣಿಗೆ, ತಿದ್ದುಪಡಿಗೆ ತಾಲೂಕು ಕೇಂದ್ರಕ್ಕೆ ತೆರಳಬೇಕಾಗಿದೆ. ಎಷ್ಟು ಬೇಗ ಹೋದರೂ ಅಲ್ಲಿ ಸರತಿಯ ಸಾಲು ಕಂಡು ಬರುತ್ತಿದೆ. ಗ್ರಾಮ ಪಂಚಾಯಿತಿಯಲ್ಲಿ ವ್ಯವಸ್ಥೆ ಕಲ್ಪಿಸಿದರೆ ಈ ಎಲ್ಲ ಸಮಸ್ಯೆ ಬಗೆ ಹರಿಯಲಿದೆ. ಸಣ್ಣ ಮಕ್ಕಳಿದ್ದವರು, ಅನಾರೋಗ್ಯದಿಂದ ಬಳಲುತ್ತಿರುವವರು ಸರತಿ ಸಾಲಿನಲ್ಲಿ ನಿಲ್ಲಲು ಸಾಧ್ಯವಿಲ್ಲದಂತಾಗಿದೆ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
– ನಾರಾಯಣ ಗೌಡ, ಕೃಷಿಕ, ಸುಳ್ಯ

ದಕ್ಷಿಣ ಕನ್ನಡ ಜಿಲ್ಲೆಯ 17 ನಾಡ ಕಚೇರಿ, 90 ಅಂಚೆ ಕಚೇರಿ ಹಾಗೂ ಬ್ಯಾಂಕುಗಳಲ್ಲಿ, ಜಿಲ್ಲಾಧಿಕಾರಿ ಕಚೇರಿ, ಪುತ್ತೂರು ಸಹಾಯಕ ಆಯುಕ್ತರ ಕಚೇರಿ, ಸುಳ್ಯ ನಗರ ಪಂಚಾಯಿತಿಗಳಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಮಾಡಲಾಗುತ್ತಿದೆ. ಇದಕ್ಕಾಗಿ ಗ್ರಾಮೀಣ ಭಾಗದ ಜನರು ಪಟ್ಟಣಗಳಿಗೆ ಬರಬೇಕಾಗಿದೆ. ಕೆಲವೊಮ್ಮೆ ಸರ್ವರ್ ಸಮಸ್ಯೆಯಿಂದ ತೊಂದರೆಗಳಾಗುತ್ತಿರುವುದು ನಿಜ. ಗ್ರಾಮ ಪಂಚಾಯಿತಿಗಳಲ್ಲಿ ಮತ್ತೆ ವ್ಯವಸ್ಥೆ ಕಲ್ಪಿಸಲು ಸಾಧ್ಯವಿದೆಯೇ ಎನ್ನುವ ಬಗ್ಗೆ ಪರಿಶೀಲಿಸಲಾಗುವುದು.
ಶಶಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ ದಕ್ಷಿಣ ಕನ್ನಡ

Leave a Reply

Your email address will not be published. Required fields are marked *