ನಂಜನಗೂಡು: ನಂಜನಗೂಡು ಮತ್ತು ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೂರಾರು ಗ್ರಾಮಗಳ ಜನರು ಇಲ್ಲಿನ ಇಲ್ಲಿನ ತಾಲೂಕು ಕೇಂದ್ರದಲ್ಲಿರುವ ಸಾರ್ವಜನಿಕ ಆಸ್ಪತ್ರೆಯನ್ನು ಆಶ್ರಯಿಸಿದ್ದಾರೆ. ಎರಡೂ ಕ್ಷೇತ್ರಗಳ ಜನರು ಅನಾರೋಗ್ಯ ಎದುರಾದಾಗ ಇಲ್ಲಿಗೆ ಪ್ರಥಮ ಆದ್ಯತೆ ಮೇರೆಗೆ ಬರುತ್ತಾರೆ. ಆದರೆ ಇಲ್ಲಿ ಸರಿಯಾದ ಚಿಕಿತ್ಸೆ ದೊಕುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದು.
ಈ ಹಿಂದೆ ಕಡಿಮೆ ಪ್ರಮಾಣದಲ್ಲಿ ರೋಗಿಗಳು ಆಸ್ಪತ್ರೆಗೆ ಭೇಟಿ ಕೊಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನಿತ್ಯ ಸಾವಿರಾರು ರೋಗಿಗಳು ತಾಲೂಕು ಆಸ್ಪತ್ರೆಗೆ ಹೆಚ್ಚಾಗಿ ಭೇಟಿ ನೀಡುತ್ತಿರುವುದು ಕಂಡುಬಂದಿದೆ. ಆದರೆ ಇಲ್ಲಿರುವ ವೈದ್ಯರಿಗೆ ಒಟ್ಟಿಗೆ ಅಷ್ಟೂ ರೋಗಿಗಳಿಗೆ ಚಿಕಿತ್ಸೆ ಕೊಡಲು ಸಾಧ್ಯವಾಗದ ಪರಿಣಾಮ ರೋಗಿಗಳನ್ನು ಬಂದಷ್ಟೇ ವೇಗದಲ್ಲಿ ಹೊರ ಹಾಕುತ್ತಾರೆ ಎಂಬುದು ಜನರ ವಾದ.
ಪ್ರಾರಂಭದಿಂದಲೂ ಆಸ್ಪತ್ರೆ ಕಟ್ಟಡ ಇದ್ದ ಹಾಗೆ ಇದ್ದು, ಇತ್ತೀಚಿನ ವರ್ಷಗಳಲ್ಲಿ ನೂರು ಹಾಸಿಗೆ ಸಾಮರ್ಥ್ಯಕ್ಕೆ ಏರಿಸುವುದರೊಂದಿಗೆ ಮತ್ತಷ್ಟು ಸೌಲಭ್ಯ ಕಲ್ಪಿಸಲಾಗಿದೆಯಾದರೂ ಚಿಕಿತ್ಸೆಗಾಗಿ ಮೈಸೂರಿಗೆ ಶಿಫಾರಸು ಮಾಡುವುದು ತಪ್ಪಿಲ್ಲ. ರಾತ್ರಿ ವೇಳೆ ತಾಲೂಕು ಆಸ್ಪತ್ರೆಯಲ್ಲಿ ಒಬ್ಬರು ವೈದ್ಯರು ಮಾತ್ರ ಲಭ್ಯವಿದ್ದು, ಅದೂ ನೆಪಮಾತ್ರಕ್ಕೆ ಎನ್ನುವಂತಾಗಿದೆ. ತುರ್ತು ಸಂದರ್ಭದಲ್ಲಿ ಬರುವ ರೋಗಿಗಳಿಗೆ ರಾತ್ರಿ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ.
ಇನ್ನು ಆಸ್ಪತ್ರೆ ಪ್ರಾರಂಭವಾದಾಗಿನಿಂದ ಈವರೆಗೂ ಭದ್ರತಾ ವ್ಯವಸ್ಥೆ ಇಲ್ಲದಿರುವುದು ಕಳ್ಳರಿಗೆ ವರದಾನವಾಗಿದೆ. ರೋಗಿಗಳು ಆವರಣದಲ್ಲಿ ನಿಲ್ಲಿಸಿರುವ ಬೈಕ್‌ಗಳು ಸೇರಿದಂತೆ ಹಲವು ವಸ್ತುಗಳು ಕಳ್ಳರ ಪಾಲಾಗುತ್ತಿವೆ. ಇನ್ನು ಒಳ ರೋಗಿಗಳಿಗೆ ಕೊಡುವ ಊಟದಲ್ಲೂ ಮೋಸವಾಗುತ್ತಿದೆ ಎಂಬ ದೂರು ರೋಗಿಗಳಿಂದ ಕೇಳಿ ಬರುತ್ತಿದೆ. ಇನ್ನು ಜನರಿಕ್ ಔಷಧ ಮಳಿಗೆ ಇದ್ದರೂ ಬಾಗಿಲು ತೆಗೆಯುವುದಿಲ್ಲ. ಕ್ಯಾಂಟೀನ್ ವ್ಯವಸ್ಥೆ, ಪಾರ್ಕಿಂಗ್ ಸಮಸ್ಯೆ, ಕೋತಿಗಳ ಕಾಟ, ಆಸ್ಪತ್ರೆ ಮುಂಭಾಗದಲ್ಲಿ ಗುಂಡಿಗಳ ದರ್ಶನ…ಹೀಗೆ ಹತ್ತು ಹಲವು ಸಮಸ್ಯೆಗಳು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದು, ಈ ಬಗ್ಗೆ ತಾಲೂಕಿನ ಜನರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ
ವರುಣ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಸಾರ್ವಜನಿಕ ಆಸ್ಪತ್ರೆ ಇದಾಗಿದೆ. ಸಾಕಷ್ಟು ಜನರು ಇಲ್ಲಿಗೆ ಚಿಕಿತ್ಸೆಗೆ ಬರುವ ಕುರಿತು ನನ್ನ ಗಮನಕ್ಕೆ ಬಂದಿದೆ. ಹಾಗಾಗಿ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಸಂಬಂಧ ಅಧಿವೇಶನದಲ್ಲಿ ಚರ್ಚೆ ಮಾಡಲಾಗುವುದು.ಜತೆಗೆ ಆಸ್ಪತ್ರೆಗೆ ಭದ್ರತಾ ವ್ಯವಸ್ಥೆ ಕಲ್ಪಿಸುವ ಸಂಬಂಧ ಶೀಘ್ರ ಕ್ರಮ ವಹಿಸಲಾಗುವುದು.
ದರ್ಶನ್ ಧ್ರುವನಾರಾಯಣ ಶಾಸಕರು, ನಂಜನಗೂಡು
ರಕ್ಷಾ ಸಮಿತಿ ಸಭೆಯಲ್ಲಿ ಚರ್ಚೆ
ನಾನು ಅಧಿಕಾರ ವಹಿಸಿಕೊಂಡ ನಂತರ ಸಾರ್ವಜನಿಕ ಆಸ್ಪತ್ರೆಗೆ ಹಲವಾರು ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗಿದೆ. ಇಲ್ಲಿನ ಆವರಣದಲ್ಲಿ ಜನೌಷಧ ಮಳಿಗೆ ಇತ್ತು. ಆದರೆ ಇತ್ತೀಚೆಗೆ ಮುಚ್ಚಲಾಗಿದೆ. ಅಂತೆಯೇ ಭದ್ರತೆ, ಪಾರ್ಕಿಂಗ್ ವ್ಯವಸ್ಥೆ ಪ್ರಾರಂಭದಿಂದಲೂ ಇಲ್ಲ. ಈ ಬಗ್ಗೆ ರಕ್ಷಾ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಪ್ರತಿದಿನ ಸಾವಿರಾರು ರೋಗಿಗಳು ಆಸ್ಪತ್ರೆಗೆ ಬರುವುದರಿಂದ ವೈದ್ಯರಿಗೂ ಒತ್ತಡ ಹೆಚ್ಚಾಗುತ್ತಿದೆ.
ಡಾ.ಶಿವಪ್ರಸಾದ್ ಆಡಳಿತ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ
ಚಿಕಿತ್ಸೆ ನೀಡಲು ಸ್ವಲ್ಪ ವಿಳಂಬ
ತಾಲೂಕು ಕೇಂದ್ರದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ನಿತ್ಯ ಸಾವಿರಾರು ರೋಗಿಗಳು ಬರುತ್ತಿರುವುದರಿಂದ ಚಿಕಿತ್ಸೆ ನೀಡಲು ಸ್ವಲ್ಪ ವಿಳಂಬವಾಗುತ್ತಿದೆ. ವಾರದ ರಜಾ ದಿನ ಮತ್ತು ರಾತ್ರಿ ವೇಳೆ ವೈದ್ಯರ ಸಂಖ್ಯೆ ಕಡಿಮೆ ಇರುತ್ತದೆ. ಈ ಸಮಯದಲ್ಲಿ ಅನನುಕೂಲ ಹೆಚ್ಚು. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು ಗಮನ ಹರಿಸಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಿ.
ಶಿರಮಳ್ಳಿ ಸಿದ್ದಪ್ಪ ತಾಲೂಕು ಅಧ್ಯಕ್ಷ, ರೈತ ಸಂಘ
ಬೆಡ್‌ಗಳ ಸಂಖ್ಯೆ ಹೆಚ್ಚಾಗಲಿ
ಇತ್ತೀಚಿನ ವರ್ಷಗಳಲ್ಲಿ ಆಸ್ಪತ್ರೆಯನ್ನು ಸ್ವಲ್ಪ ಮಟ್ಟದಲ್ಲಿ ನವೀಕರಣಗೊಳಿಸಲಾಗಿದೆಯಾದರೂ ಅದು ಸಾಕಾಗುವುದಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಯ ಬೆಡ್‌ಗಳ ಸಂಖ್ಯೆಯನ್ನು ಮತ್ತಷ್ಟು ವಿಸ್ತರಿಸಬೇಕು. ಆ ಮೂಲಕ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು. ಹೆಚ್ಚೆಚ್ಚು ಜನರು ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ಗುಂಪು ಗುಂಪಾಗಿ ನಿಲ್ಲುತ್ತಿರುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ. ಈ ಬಗ್ಗೆ ಗಮನಹರಿಸಬೇಕು.
ಸುರೇಶ್ ನಂಜನಗೂಡು ನಿವಾಸಿ
ಚಾರ್ಟ್ ಬೋರ್ಡ್ ಹಾಕಲಿ
ಆಸ್ಪತ್ರೆಯ ಒಳ ರೋಗಿಗಳಿಗೆ ಸರಿಯಾದ ಊಟದ ವ್ಯವಸ್ಥೆ ಇಲ್ಲ. ಇದರಿಂದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ಹೊರಗಿನಿಂದ ರೋಗಿಗಳ ಸಂಬಂಧಿಕರು ಊಟ ತಂದುಕೊಡಬೇಕಾದ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆ ಆವರಣದಲ್ಲಿ ರೋಗಿಗಳಿಗೆ ಕೊಡುವ ಊಟದ ಚಾರ್ಟ್ ಅನ್ನು ಚಾರ್ಟ್‌ಬೋರ್ಡ್‌ನಲ್ಲಿ ಹಾಕಿದರೆ ಅನುಕೂಲ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಲಿ.
ಮಂಜು ಶಂಕರಪುರ, ನಂಜನಗೂಡು
ಆವರಣದಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ
ಆರೋಗ್ಯ ಸಮಸ್ಯೆ ಬಂದಾಗ ತಾಲೂಕು ಆಸ್ಪತ್ರೆಗೆ ತೆರಳುತ್ತೇವೆ. ಆದರೆ ಸೂಕ್ತ ಚಿಕಿತ್ಸೆ ದೊರಕಿದಿದ್ದಾಗ ಅಸಮಾಧಾನ ಹೆಚ್ಚಾಗುತ್ತದೆ. ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚಾಗಿ ಈ ಆಸ್ಪತ್ರೆಗೆ ಬರುತ್ತಾರೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ದೊರಕುವಂತಾಗಬೇಕು. ಈ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುವ ಕಾರಣ ಆವರಣದಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಇದರಿಂದ ತೊಂದರೆ ಅನುಭವಿಸುವಂತಾಗಿದೆ.
ದಿವ್ಯಾ ಚಿಕ್ಕ ಕವಲಂದೆ ನಿವಾಸಿ
ವೈದ್ಯರಿಗಿರುವ ಒತ್ತಡ ಕಡಿಮೆಯಾಗಲಿ
ದಿನ ನಿತ್ಯ ರೋಗಗಳು ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹಾಗಾಗಿ ಪ್ರಸ್ತುತ ಇರುವ 100 ಹಾಸಿಗೆ ಸಂಖ್ಯೆ ಸಾಕಾಗುವುದಿಲ್ಲ. ಇದನ್ನು ಹೆಚ್ಚಿಸುವುದರ ಜತೆಗೆ ವೈದ್ಯರ ಒತ್ತಡವನ್ನೂ ಕಡಿಮೆ ಮಾಡಬೇಕು. ಆ ಮೂಲಕ ರೋಗಿಗಳಿಗೆ ಸಾದ್ಯವಾದಷ್ಟು ಅನುಕೂಲ ಕಲ್ಪಿಸಬೇಕು. ಅಲ್ಲದೆ ಆಸ್ಪತ್ರೆಯಲ್ಲಿ ನೂನ್ಯತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸಬೇಕು.
ಭಾಗ್ಯಾ ಉದ್ಯಮಿ, ನಂಜನಗೂಡು
ಸಾರ್ವಜನಿಕ ಆಸ್ಪತ್ರೆ ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವ ಕಾರಣ ರೋಗಿಗಳ ಜತೆಗೆ ಬರುವ ಜನರಿಗೆ ಊಟ ಮತ್ತು ತಿಂಡಿಗೆ ಹೊರಗಡೆ ತೆರಳಬೇಕಿದೆ. ಇದರಿಂದ ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ. ಹಲವು ಬಾರಿ ರೋಗಿಗಳೊಂದಿಗೆ ಒಬ್ಬರು ಬರುವುದರಿಂದ ರೋಗಿ ಬಿಟ್ಟು ಹೋಗದ ಪರಿಸ್ಥಿತಿ ಎದುರಾಗುತ್ತದೆ. ಈ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿ ಕ್ರಮ ವಹಿಸುವ ಮೂಲಕ ಅನುಕೂಲ ಕಲ್ಪಿಸಿದರೆ ಒಳಿತು.
ಸಂಜು ದೇವರಸನಹಳ್ಳಿ ನಿವಾಸಿ
ಶೌಚಗೃಹ ವ್ಯವಸ್ಥೆ ಇಲ್ಲ
ದಿನ ನಿತ್ಯ ಸಾವಿರಾರು ರೋಗಿಗಳು ಆಗಮಿಸುವ ಆಸ್ಪತ್ರೆಯಲ್ಲಿ ಸರಿಯಾದ ಶೌಚಗೃಹ ಇಲ್ಲ. ಇದರಿಂದ ರೋಗಿಗಳು ಹಾಗೂ ಅವರೊಂದಿಗೆ ಬರುವವರು ಮೂತ್ರ ವಿಸರ್ಜಿಸಲು ಬಯಲು ಪ್ರದೇಶಕ್ಕೆ ತೆರಳಬೇಕು. ಇಲ್ಲವಾದಲ್ಲಿ ದುಡ್ಡು ಕೊಟ್ಟು ಉಪಯೋಗಿಸುವ ಶೌಚಗೃಹಕ್ಕೆ ಹೋಗಬೇಕು. ಆಸ್ಪತ್ರೆ ಮುಂಭಾಗ ಗುಂಡಿ ಬಿದ್ದಿರುವ ಕಾರಣ ನೀರು ತುಂಬಿದ್ದು, ಆಸ್ಪತ್ರೆಗೆ ಬರುವವರು ತೊಂದರೆ ಅನುಭವಿಸುವಂತಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಕ್ರಮ ವಹಿಸಿದರೆ ಒಳಿತು.
ಮಂಜುನಾಥ್ ಬಿ ಜೆಪಿ ಮುಖಂಡ, ಬದನವಾಳು