More

    ತೀರ್ಥಹಳ್ಳಿ ತಾಲೂಕಿನ ಬೆಳೆಗಾರರಿಗೆ ಹೊಸ ಸಂಕಷ್ಟ

    ತೀರ್ಥಹಳ್ಳಿ: ಕೊಳೆ ರೋಗದಿಂದ ತತ್ತರಿಸಿದ್ದ ತಾಲೂಕಿನ ಅಡಕೆ ಬೆಳೆಗಾರರಿಗೆ ಹೊಸ ಸಮಸ್ಯೆಯೊಂದು ಎದುರಾಗಿದ್ದು ಹಿಂಗಾರದ ಎಸಳು ತಿನ್ನುವ ಹುಳುವಿನ ಬಾಧೆಯಿಂದ ತಾಲೂಕಿನ ಕೆಲವೆಡೆ ಅಡಕೆ ಮರದಲ್ಲಿ ಹಿಂಗಾರಗಳು ಸಂಪೂರ್ಣ ಒಣಗಿ ಉದುರುವುದಕ್ಕೆ ಪ್ರಾರಂಭವಾಗಿದೆ.

    ಕಳೆದ ಎರಡು ಮೂರು ವಾರಗಳಿಂದ ಹಿಂಗಾರ ಒಣಗುವ ರೋಗ ಗಣನೀಯವಾಗಿ ತಾಲೂಕಿನ ಬಸವಾನಿ, ದೇವಂಗಿ, ಗಬಡಿ ಹಾಗೂ ಹೆಗ್ಗೋಡು ಭಾಗಗಳಲ್ಲಿ ಕಾಣಿಸಿಕೊಂಡಿದೆ. ಈ ಭಾಗದ ಕೆಲವೆಡೆ ಅಡಕೆ ಮರಗಳಲ್ಲಿ ಹೊರ ಬಂದಿರುವ ಹಿಂಗಾರ ಸಂಪೂರ್ಣ ಒಣಗಿ ಕರಕಲಾಗಿ ಕಂಡು ಬರುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಈ ರೋಗಕ್ಕೆ ಹಿಂಗಾರವನ್ನು ತಿನ್ನುವ ಹುಳುವಿನ ಬಾಧೆ ಕಾರಣವಾಗಿದೆ.

    ಚಳಿಗಾಲದಲ್ಲಿ ಹೆಚ್ಚು ಥಂಡಿ ಇರುವ ತೋಟಗಳಲ್ಲಿ ಅಲ್ಲಲ್ಲಿ ಹಿಂಗಾರ ಒಣಗುವುದು ಸಾಮಾನ್ಯ ಎಂಬ ಅಭಿಪ್ರಾಯ ರೈತರಲ್ಲೂ ಇದೆ. ಆದರೆ ಈ ಪ್ರದೇಶದಲ್ಲಿ ಹುಳು ಬಾಧೆಯಿಂದ 3-4 ಹಿಂಗಾರ ಪೂರ್ಣವಾಗಿ ಒಣಗಿ ನಿಂತಿದೆ.

    ಈ ಹುಳುವಿನ ಬಾಧೆ ಮೊದಲಿಗೆ ಕಂಡು ಬಂದಿರುವುದು ಬಸವಾನಿ ಸಮೀಪದ ಹೊಳೆಕೊಪ್ಪ ಭಾಗದಲ್ಲಿ. ಈ ರೋಗ ಗುರುತಿಸಿದ ಅಲ್ಲಿನ ರೈತ ಪ್ರಶಾಂತ್ ಸೀಬಿನಕೆರೆಯಲ್ಲಿರುವ ಅಡಕೆ ಸಂಶೋಧನಾ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ಈ ಕೀಟದ ಹತೋಟಿಯ ಸಲುವಾಗಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ಇದರ ಹತೋಟಿ ಸಲುವಾಗಿ ರೈತರಿಗೆ ಸಲಹೆಯನ್ನೂ ನೀಡಿದ್ದಾರೆ.

    ರೋಗದ ಲಕ್ಷಣ, ಹತೋಟಿ: ಅಡಕೆ ಹಿಂಗಾರವನ್ನು ಕೆರೆದು ತಿನ್ನುವ ಈ ಹುಳುಗಳು ಅಲ್ಲಿಯೇ ಗೂಡು ಕಟ್ಟಿಕೊಂಡು ಜೀವಿಸುತ್ತವೆ. ಈ ಗೂಡಿನಲ್ಲಿ ಹುಳುವಿನ ಹಿಕ್ಕೆ ಹಾಗೂ ಹಿಂಗಾರದಿಂದ ಕೆರೆದು ಉಳಿದಿರುವ ಭಾಗಗಳು ಅಲ್ಲಿಯೇ ಶೇಖರಣೆಯೂ ಆಗುತ್ತವೆ. ಇದರಿಂದ ಹಿಂಗಾರದ ಎಸಳುಗಳು ಒಣಗಲು ಆರಂಭವಾಗಿ ಹಿಂಗಾರ ಕಂದು ಬಣ್ಣಕ್ಕೆ ತಿರುಗಿ ಅದರ ಮೊಗ್ಗುಗಳು ಉದುರಲು ಆರಂಭವಾಗುವುದು ಈ ರೋಗದ ಲಕ್ಷಣ. ಹಾನಿಗೊಳಗಾದ ಹಿಂಗಾರವನ್ನು ತೆಗೆದು ಸುಡಬೇಕು. ಕೀಟನಾಶಕಗಳಾದ ಕ್ಲೋರೋಪೈರಿಫಾಸ್ 20 ಇಸಿ 2.5 ಮಿಲಿ ಪ್ರತಿ ಲೀಟರ್ ನೀರಿಗೆ ಅಥವಾ ಕ್ವಿನಾಲ್ಪಾಸ್ 25 ಇಸಿ 1.0 ಮಿಲೀ ಪ್ರತಿ ಲೀಟರ್ ನೀರಿಗೆ ಸೇರಿಸಿ ಹಿಂಗಾರಗಳಿಗೆ ಸಿಂಪಡಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts