More

    ಒಲಂಪಿಕ್ ಸ್ಪರ್ಧೆಯಲ್ಲಿ ಯೋಗವನ್ನು ಸೇರಿಸಿ

    ಮೈಸೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದುಕೊಂಡಿರುವ ಯೋಗವನ್ನು ಮುಂದಿನ ಒಲಂಪಿಕ್ ಸ್ಪರ್ಧೆಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಕೇಂದ್ರದ ಆಯುಷ್ ಇಲಾಖೆಯ ಯೋಗ ಪ್ರಮಾಣ ಪತ್ರ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ದೆಹಲಿ ಮುರಾರ್ಜಿ ದೇಸಾಯಿ ಯೋಗ ಸಂಸ್ಥೆ ನಿರ್ದೇಶಕ ಡಾ.ಈಶ್ವರ್ ವಿ.ಬಸವರಡ್ಡಿ ಆಗ್ರಹಿಸಿದರು.

    ಎಸ್‌ಜಿಎಸ್ ಅಂತಾರಾಷ್ಟ್ರೀಯ ಫೌಂಡೇಷನ್ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸೇರಿದಂತೆ ನಾನಾ ಸಂಸ್ಥೆಗಳ ಸಹಯೋಗದಲ್ಲಿ ನಗರದ ವಸ್ತು ಪ್ರದರ್ಶನ ಮೈದಾನದ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಯೋಗಾಸನ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ವಿಶ್ವವ್ಯಾಪಿಯಾಗಿ ಯೋಗವನ್ನು ಅಳವಡಿಸಿಕೊಂಡು ಯೋಗ ದಿನ ಆಚರಿಸಲಾಗುತ್ತಿದೆ. ಪ್ರಸ್ತುತ ಯೋಗ ವಿಶ್ವಮಟ್ಟದಲ್ಲಿ ತನ್ನದೆ ಆದ ಸ್ಥಾನ ಹೊಂದಿದ್ದು, ಯೋಗವನ್ನು ಕ್ರೀಡೆಯಾಗಿ ಘೋಷಣೆ ಮಾಡಬೇಕಿದೆ. ಈ ಮೂಲಕ ಮುಂದಿನ ಒಲಂಪಿಕ್‌ನಲ್ಲಿ ಯೋಗವು ಸೇರ್ಪಡೆಯಾಗಬೇಕಿದೆ ಎಂದು ಆಶಿಸಿದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ರಾಜರ ಆಳ್ವಿಕೆಯಿಂದಲೂ ಮೈಸೂರು, ಯೋಗದಲ್ಲಿ ತನ್ನದೇ ಅದ ಛಾಪು ಮೂಡಿಸಿಕೊಂಡಿದೆ. ಯೋಗವನ್ನು ಕಲಿಯಲೆಂದೇ ಇಂದು ವಿದೇಶಿಯರು ಮೈಸೂರಿಗೆ ಬರುತ್ತಿದ್ದಾರೆ. ಹೀಗಾಗಿ ಇದಕ್ಕೊಂದು ಘನತೆ ತಂದು ಕೊಡಲು, ಇನ್ನಷ್ಟು ಆಕರ್ಷಣೆ ಮಾಡಲು ಪ್ರಧಾನಿ ನರೇಂದ್ರಮೋದಿ ಅವರನ್ನು ಮೈಸೂರಿನಲ್ಲಿ ಆಚರಿಸುವ ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.

    ಈ ಹಿಂದೆ 55 ಸಾವಿರಕ್ಕೂ ಅಧಿಕ ಜನ ಒಂದೇ ಬಾರಿಗೆ ಯೋಗ ಪ್ರದರ್ಶಿಸಿ ಗಿನ್ನೆಸ್ ದಾಖಲೆ ಮಾಡಲಾಗಿತ್ತು. ಬಳಿಕ ಅದು ರಾಜಸ್ತಾನದ ಪಾಲಾಯಿತು. ಈ ಬಾರಿ ಮೋದಿ ಭಾಗವಹಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಹೆಚ್ಚು ಜನರನ್ನು ಸೇರಿಸಿ ಮತ್ತೆ ಗಿನ್ನೆಸ್ ದಾಖಲೆ ಮಾಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

    ಯೋಗನರಸಿಂಹಸ್ವಾಮಿ ದೇವಸ್ಥಾನದ ಭಾಷ್ಯಂಸ್ವಾಮಿ, ಸಂಸ್ಥಾಪಕ ಅಧ್ಯಕ್ಷ ಡಾ.ಎಂ. ನಿರಂಜನಮೂರ್ತಿ, ಮುಖ್ಯಮಂತ್ರಿಗಳ ವಿಶೇಷ ಸಲಹೆಗಾರ ಎಂ.ಲಕ್ಷ್ಮೀನಾರಾಯಣ ರಾಷ್ಟ್ರೀಯ ಯೋಗಾಸನ ಕ್ರೀಡಾ ಪಂದ್ಯಾವಳಿಗೆ ಚಾಲನೆ ನೀಡಿದರು. ಕೇಂದ್ರ ಸರ್ಕಾರದ ಇಂಡಿಯನ್ ಯೋಗ ಆಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ಡಾ.ಜೈ ದೀಪ್ ಆರ್ಯ ಇತರರು ಇದ್ದರು.
    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಷ್ಟ್ರೀಯ ಯೋಗ ಪತಂಜಲಿ ಹಾಗೂ ರಾಷ್ಟ್ರೀಯ ಬೆಸ್ಟ್ ಯೋಗ ಮಾಸ್ಟರ್ ಮತ್ತು ರಾಷ್ಟ್ರೀಯ ಯೋಗ ಜೂರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಯೋಗದ ಮಹತ್ವ ಸಾರುವ ಈ ಕಾರ್ಯಕ್ರಮದಲ್ಲಿ ನಾನಾ ರಾಜ್ಯದ ವಿವಿಧ ವಯೋಮಾನದ ಸುಮಾರು 1400ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ವಿವಿಧ ಭಂಗಿಯ ಯೋಗ ಪ್ರದರ್ಶಿಸಿದರು. 8-10 ವರ್ಷದ ಬಾಲಕ, ಬಾಲಕಿ, 10ರಿಂದ 12 ವರ್ಷದ ಬಾಲಕ, ಬಾಲಕಿ, 12-15 ವರ್ಷದ ಬಾಲಕ, ಬಾಲಕಿ, 15-20 ವರ್ಷದ ಯುವಕ-ಯುವತಿ, 20-30 ವರ್ಷದ ಮಹಿಳೆ ಮತ್ತು ಪುರುಷ, 30-40, 40-50, 50-60 ಹಾಗೂ 60 ವರ್ಷಕ್ಕೂ ಮೇಲ್ಪಟವರಿಗೆ ಮಹಿಳೆ ಮತ್ತು ಪುರುಷರ ವಿಭಾಗದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಅಥ್ಲೆಟಿಕ್ ಯೋಗಾಸನ, ಆರ್ಟ್‌ಸ್ಟಿಕ್ ಸೋಲೊ ಯೋಗಾಸನ, ಸಮೂಹ ಆರ್ಟ್‌ಸ್ಟಿಕ್ ಯೋಗಾಸನ, ರಿದಮ್ಟಿಕ್ ಯೋಗಾಸನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts