ದೇವದುರ್ಗ: ಅರಕೇರಾ ತಾಲೂಕಿಗೆ ಸೇರ್ಪಡೆ ಮಾಡಿರುವ ಕೊತ್ತದೊಡ್ಡಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳನ್ನು ಮರಳಿ ದೇವದುರ್ಗ ತಾಲೂಕಿಗೆ ಸೇರಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡಗೆ ವಿವಿಧ ಹಳ್ಳಿಗಳ ಜನರು ಶನಿವಾರ ಮನವಿ ಸಲ್ಲಿಸಿದರು.
ಹೊಸ ತಾಲೂಕು ಅಗತ್ಯವಿರಲಿಲ್ಲ. ಆದರೆ, ಹಿಂದಿನ ಸರ್ಕಾರ ಜನರ ಅಭಿಪ್ರಾಯ ಪಡೆಯದೆ ಅವೈಜ್ಞಾನಿಕವಾಗಿ ಅರಕೇರಾ ತಾಲೂಕು ಘೋಷಣೆ ಮಾಡಿತು. ಆದರೆ, ಅರಕೇರಾಗೆ ಬೇಕಾದ ಸೌಲಭ್ಯ ಕಲ್ಪಿಸದೆ 17 ಗ್ರಾಪಂಗಳನ್ನು ಸೇರಿಸಿ ಜನರಿಗೆ ಸಮಸ್ಯೆ ತಂದೊಡ್ಡಿತು. ಕೊತ್ತದೊಡ್ಡಿ ಗ್ರಾಪಂ ವ್ಯಾಪ್ತಿಯ ಕಾಚಾಪುರ, ಯಲ್ಲದೊಡ್ಡಿ, ಯಮನೂರು, ಹೊನ್ನಕಾಟಮಳ್ಳಿ, ಚಿಕ್ಕಲದೊಡ್ಡಿ, ಕರಡೋಣ, ಮಲ್ಕಂದಿನ್ನಿ, ಮಲ್ಲಿನಾಯಕನ ದೊಡ್ಡಿ ಗ್ರಾಮ ಸೇರಿಸಲಾಗಿದೆ. ಇದರಿಂದ ಜನರು ಕಂದಾಯ ಸೇರಿ ವಿವಿಧ ಕೆಲಸಕ್ಕೆ ಸಮಸ್ಯೆ ಎದುರಿಸುವಂತಾಗಿದೆ ಎಂದು ದೂರಿದರು.
ಕೂಡಲೇ ಅರಕೇರಾ ತಾಲೂಕು ರದ್ದುಮಾಡಿ ಕೊತ್ತದೊಡ್ಡಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳನ್ನು ದೇವದುರ್ಗದಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ತಾಪಂ ಮಾಜಿ ಸದಸ್ಯ ಗೋವಿಂದರಾಜ ನಾಯಕ, ಮುದಕಪ್ಪ ನಾಯಕ, ಬಸವರಾಜ ನಾಯಕ, ಮಂಜುನಾಥ ಮಲ್ಕಂದಿನ್ನಿ, ಪರಮಾತ್ಮ, ದೇವೇಂದ್ರಪ್ಪ, ಭೀಮಣ್ಣ ಭೋವಿ, ನಾಗಪ್ಪ ಬಾವಿಮನಿ, ಸಾಬಣ್ಣ, ಹನುಮಂತ್ರಾಯ, ಸಾಬಣ್ಣ ದೊಂಡಂಬಳಿ ಇದ್ದರು.