ಮಾಹಿತಿ ಮೂಲದಲ್ಲಿ ಕನ್ನಡ ಸೇರಿಸಿ

ಧಾರವಾಡ (ಅಂಬಿಕಾತನಯದತ್ತ ವೇದಿಕೆ): ಕನ್ನಡವು ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಇಂಗ್ಲಿಷ್​ನ ವಿಧಾನಗಳನ್ನು ಅನುಸರಿಸಬೇಕು. ಅಂದರೆ ಡಿಜಿಲೀಕರಣದಂಥ ಪ್ರಕ್ರಿಯೆ ಅಗತ್ಯ. ಗೂಗಲ್ ಸೇರಿ ಎಲ್ಲ ಮಾಹಿತಿ ಮೂಲಗಳಲ್ಲಿ ಇಂಗ್ಲಿಷ್ ಹೇಗೆ ಲಭ್ಯವೋ ಕನ್ನಡವೂ ಹಾಗೆ ಮಾಹಿತಿ ಮೂಲಗಳಲ್ಲಿ ಸೇರ್ಪಡೆಯಾಗಬೇಕು ಎಂದು 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಹೇಳಿದರು.

ಕೃಷಿ ವಿವಿ ಆವರಣದ ಅಂಬಿಕಾತನಯದತ್ತ ವೇದಿಕೆಯಲ್ಲಿ ಭಾನುವಾರ ಸಂಜೆ ನಡೆದ ಸರ್ವಾಧ್ಯಕ್ಷರೊಂದಿಗೆ ಸಂವಾದ ಗೋಷ್ಠಿಯಲ್ಲಿ ಸವಿತಾ ಶ್ರೀನಿವಾಸ ಅವರ ಓದುಗರನ್ನು ತಲುಪಲು ಡಿಜಿಲೀಕರಣ ಮಾರ್ಗವೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚೀನಾ, ಜಪಾನ್​ದಂಥ ದೇಶಗಳು ತಮ್ಮ ಭಾಷೆ, ಸಾಹಿತ್ಯವನ್ನು ತಂತ್ರಜ್ಞಾನಕ್ಕೆ ಅಳವಡಿಸಿಕೊಳ್ಳಲು ಕನ್ನಡಿಗ ತಂತ್ರಜ್ಞರನ್ನೇ ಕರೆಸಿಕೊಳ್ಳುತ್ತಿವೆ. ಆದರೆ, ಬೆಂಗಳೂರು ತಂತ್ರಜ್ಞಾನದ ರಾಜಧಾನಿಯಾದರೂ ಈ ವಿಷಯದಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ನಮ್ಮ ಸರ್ಕಾರಗಳಿಗೆ ಕಣ್ಣುಗಳೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೂರ್ಣಚಂದ್ರ ತೇಜಸ್ವಿ ಮತ್ತು ತಾವು ಅನೇಕ ಸಚಿವರನ್ನು ಭೇಟಿಯಾಗಿದ್ದೆವು. ಒಬ್ಬ ಯಡಿಯೂರಪ್ಪ ಮಾತ್ರ ನೆರವಾದರು ಬಿಟ್ಟರೆ ಇನ್ಯಾರೂ ಅರ್ಥ ಮಾಡಿಕೊಳ್ಳಲಿಲ್ಲ ಎಂದು ಖೇದ ವ್ಯಕ್ತಪಡಿಸಿದ ಅವರು, ಸರ್ಕಾರ ಈ ನಿಟ್ಟಿನಲ್ಲಿ ಈಗಲಾದರೂ ಒಂದು ಸಮಿತಿ ರಚಿಸಬೇಕು ಎಂದು ಸಲಹೆ ನೀಡಿದರು.

ಅಕ್ಷರದಿಂದ ಮೌಖಿಕ ದೂರ

ಅಕ್ಷರ ಜ್ಞಾನ ಬಂದಾಗ ಮೌಖಿಕ ಸಾಹಿತ್ಯ ದೂರಾಗುತ್ತದೆ. ಜಾನಪದಕ್ಕೆ ಕುತ್ತು ಬಂದಿರುವುದು ಹೀಗೆ. ಬ್ರಿಟಿಷರು ಬಂದು ಎಲ್ಲರಿಗೂ ಶಿಕ್ಷಣ ಎಂದರು. ಎಲ್ಲ ಮಾದರಿಯಲ್ಲೂ ಅವರನ್ನೇ ಅನುಸರಿಸಿದಾಗ ನಮ್ಮ ಅಸ್ಮಿತೆ ಮರೆಯಾಗಿತ್ತು. ಇದಕ್ಕೆ ಪ್ರತಿಭಟನಾರ್ಥವಾಗಿ ತಾವು ಹೇಳತೇನ ಕೇಳ ಬರೆದಿದ್ದು; ಹೇಳತೇನ ಓದು ಎಂದು ಬರೆದಿಲ್ಲ. ಹಾಗೆಯೇ, ಜಾನಪದ ದಾಖಲೀಕರಣವಾಗುವ ಅಗತ್ಯವಿದೆ ಎಂದು ಡಾ. ಎಂ.ಜಿ. ಈಶ್ವರಪ್ಪ ಪ್ರಶ್ನೆಗೆ ಉತ್ತರಿಸಿದರು.

ಮನೋಜ ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿ, ಇತಿಹಾಸ ಪುನರಾವೃತ್ತಿಯಾಗುವುದಿಲ್ಲ. ಅದು ಘಟನೆಯ ದಾಖಲೀಕರಣ. ಅದು ಸೃಜನಶೀಲತೆಗೆ ದಾರಿಯಾಗದು. ನಗರ ಪ್ರದೇಶದಲ್ಲಿ ಘಟನೆಗಳಿಗೆ ಮಹತ್ವ ಕೊಡುತ್ತಾರೆ. ಹೀಗಾಗಿ ಅಲ್ಲಿ ಜಾನಪದ ಕಡಿಮೆ; ಹಳ್ಳಿಯಲ್ಲಿ ನಿಜವಾದ ಜಾನಪದ ಇದೆ ಎಂದರು.

ದೇವರ ಗಣತಿ ನಡೆದಿಲ್ಲ

7-8 ಸಾವಿರ ಇದ್ದ ಮಹಾಭಾರತದ ಶ್ಲೋಕ ಇಂದು 1.49 ಲಕ್ಷಕ್ಕೆ ತಲುಪಿದೆ. ರಾಮ ಅಯೋಧ್ಯೆಯಲ್ಲೂ ಇದ್ದಾನೆ. ಇಲ್ಲಿಯೂ ಇದ್ದಾನೆ. ತಿರುಪತಿ ತಿಮ್ಮಪ್ಪ ಮದುವೆಗೆ ಮಾಡಿದ ಸಾಲವನ್ನು ಈಗಲೂ ತೀರಿಸುತ್ತಿದ್ದೇವೆ. ಸಾಯಿಬಾಬಾ ದೇವರಾಗಿದ್ದಾನೆ. ಒಂದೆರಡಲ್ಲ 12 ಸಾಯಿಬಾಬಾ ಇದ್ದಾರೆ. ದೇವರು ಹೆಚ್ಚುತ್ತಿದ್ದಾರೆ. ದೇಶದಲ್ಲಿ ಇನ್ನೂ ದೇವರ ಗಣತಿ ನಡೆದಿಲ್ಲ ಎಂದು ಡಾ. ಕಂಬಾರ ಅವರು ಹೇಳುವುದರೊಂದಿಗೆ, ಭಾರತದಂಥ ಸಾಮರಸ್ಯದ ದೇಶ ಇನ್ನೊಂದಿಲ್ಲ ಎಂಬ ತಮ್ಮ ಅಭಿಪ್ರಾಯವನ್ನು ಸ್ಥಿರೀಕರಿಸಿದರು.

ಡಾ. ಪದ್ಮಿನಿ ನಾಗರಾಜ ಅವರ ಸಾಮರಸ್ಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 10 ಸಾವಿರ ವರ್ಷದಿಂದ ಕೂಡಿ ಇದ್ದೇವೆ. 64 ಸಾವಿರ ಜಾತಿಗಳು ಒಂದೇ ದೇಶದಲ್ಲಿ ಒಟ್ಟಾಗಿ ಇರುವುದೇ ದೇಶದ ಶಕ್ತಿ. ಸಾಮರಸ್ಯದ ಪ್ರತೀಕ. ಇದು ಹೀಗೆಯೇ ಮುಂದುವರಿಯುತ್ತದೆ ಎಂದರು.

ಭಾಷೆ ಬೆಳೆಸಲು ಮೂರು ಸಲಹೆ

ಜಗತ್ತಿನ ಎಲ್ಲಿಯೇ ಆಗಲಿ; ಇಬರು ಕನ್ನಡಿಗರು ಸೇರಿದರೆ ಕನ್ನಡದಲ್ಲೇ ಮಾತನಾಡಿ. ವಿದೇಶಿಯರು, ಅನ್ಯಭಾಷೆಯವರೊಂದಿಗೆ ನೀವಾಗಿ ಅವರ ಭಾಷೆಯಲ್ಲಿ ಮಾತಾಡಬೇಡಿ; ಅವರಿಗೆ ಕನ್ನಡ ಗೊತ್ತಿದ್ದರೆ ಮಾತಾಡಲಿ. ಇಲ್ಲವಾದಲ್ಲಿ ಮಾತ್ರ ಅವರ ಭಾಷೆಯಲ್ಲಿ ಮಾತಾಡಿ; ಸ್ನೇಹಿತರಾದರೆ ಅವರಿಗೆ ಕನ್ನಡ ಕಲಿಸಿ. ಬೇರೆ ಭಾಷೆ ಕಲಿತವರೂ ಕನ್ನಡದಲ್ಲೇ ಯೋಚಿಸಿ.

ಡಾ. ಚಂದ್ರಶೇಖರ ವಿಶಾಲ ಅವರ ಪ್ರಶ್ನೆಗೆ ಉತ್ತರಿಸುತ್ತ ಡಾ. ಕಂಬಾರರು ಕನ್ನಡ ಬೆಳೆಸಲು ಮೂರು ಸಲಹೆಯನ್ನು ಯುವಜನರು ಪಾಲಿಸಲಿ ಎಂದು ಹೇಳಿದರು.

ಅಧ್ಯಕ್ಷರತ್ತ ತಿರುಗಿಸಿದ ಸರ್ವಾಧ್ಯಕ್ಷರು

ಸಮ್ಮೇಳನದಲ್ಲಿ ಸುಮಂಗಲಿಯರಿಂದ ಪೂರ್ಣಕುಂಭ ಮೆರವಣಿಗೆ ಏರ್ಪಡಿಸಿದ ಕುರಿತ ಪ್ರಶ್ನೆಗೆ ಸರ್ವಾಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರು, ಕಸಾಪ ಅಧ್ಯಕ್ಷರತ್ತ ತೋರಿಸಿದ ಪ್ರಸಂಗ ನಡೆಯಿತು.

ಭಾರತಿ ಹೆಗಡೆ ಅವರ ಪ್ರಶ್ನೆಗೆ ಉತ್ತರಿಸುವಾಗ, ಪೂರ್ಣಕುಂಭ ಮೆರವಣಿಗೆ ನಿರ್ಣಯವನ್ನು ಕಸಾಪ ಅಧ್ಯಕ್ಷರು ತೆಗೆದುಕೊಂಡಿದ್ದಾರೆ. ನಾನು ಬಾಯಿ ಹಾಕುವುದು ಸಲ್ಲದು. ಆದರೆ, ಮಹಿಳೆಯರಿಗೆ ಅನ್ಯಾಯವಾದರೆ ನನಗೆ ನೋವಾಗುತ್ತದೆ ಎಂದು ಹೇಳಿದರು.

ಸಿಂಗಾರೆವ್ವ…ದಲ್ಲಿ ಮಹಿಳೆ ಮತ್ತು ಲೈಂಗಿಕತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸರ್ವಾಧ್ಯಕ್ಷರು, ಸ್ತ್ರೀ ಬದುಕು ಕಟ್ಟುವ ಶಕ್ತಿ, ಸೃಷ್ಟಿಶೀಲೆ. ಅದಕ್ಕಾಗಿ ಆಕೆಗೆ ತೃಪ್ತಿಯಿದೆ. ಆದರೆ, ಪುರುಷ ಅಹಂಕಾರಿ, ಆತನಿಗೆ ತೃಪ್ತಿ ಇಲ್ಲ. ಈ ನಿಟ್ಟಿನಲ್ಲಿ ಮಹಿಳಾ ಪರ ನಿಲುವುಗಳಿವೆ ಎಂದು ವಿವರಿಸಿದರು.