More

    PHOTOS| ಕೃಷ್ಣ ಮಠದಲ್ಲಿ ಅದಮಾರು ಪರ್ಯಾಯ ಪರ್ವ ಪ್ರಾರಂಭ ಈಶಪ್ರಿಯ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ

    ಉಡುಪಿ: ಉಡುಪಿ ಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ಪರ್ವ ಶನಿವಾರ ಪ್ರಾತಃ 5.57ರ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣದ ಮೂಲಕ ಪ್ರಾರಂಭವಾಗಿದೆ.
    ಜೋಡುಕಟ್ಟೆಯಿಂದ ಪಟ್ಟದ ದೇವರ ಜತೆಗೆ ಮೇನೆಯಲ್ಲಿ ಕುಳಿತು ಮೆರವಣಿಗೆಯಲ್ಲಿ ರಥಬೀದಿಗೆ ಆಗಮಿಸಿದ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ 4.50ಕ್ಕೆ ಕನಕ ಕಿಂಡಿಯಲ್ಲಿ ಕೃಷ್ಣ ದರ್ಶನ ಪಡೆದರು. ಈ ಸಂದರ್ಭ ವಿಪ್ರರಿಗೆ ನವಗ್ರಹ ದಾನ, ಫಲದಾನ ನೀಡಲಾಯಿತು. ಬಳಿಕ ಅನಂತೇಶ್ವರ, ಚಂದ್ರಮೌಳೀಶ್ವರ ದರ್ಶನ ಪಡೆದು 5.30ಕ್ಕೆ ಕೃಷ್ಣ ಮಠ ಪ್ರವೇಶಿಸಿದರು. ನಿರ್ಗಮನ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅದಮಾರು ಶ್ರೀಗಳನ್ನು ಸ್ವಾಗತಿಸಿ, ಕೃಷ್ಣ ದೇವರ ಮುಂಭಾಗ ಗಂಧಾದಿ ಉಪಚಾರ ಸಲ್ಲಿಸಿದರು. ಬಳಿಕ ಪಲಿಮಾರು ಶ್ರೀಗಳು ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರಿಗೆ ಮಧ್ವಾಚಾರ್ಯರ ಸನ್ನಿಧಿಯಲ್ಲಿ ಅಕ್ಷಯಪಾತ್ರೆ, ಸಟ್ಟುಗವನ್ನು ಹಸ್ತಾಂತರಿಸಿದರು.


    ಗುರುಗಳ ಅನುಸರಿಸಿದ ಶಿಷ್ಯ: ಪಲಿಮಾರು ಶ್ರೀಗಳು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಗಳನ್ನು  ಸರ್ವಜ್ಞಪೀಠದಲ್ಲಿ ಕುಳ್ಳಿರಿಸಿ, ಅಧಿಕೃತವಾಗಿ 2 ವರ್ಷ ಪರ್ಯಾಯದ ಜವಾಬ್ದಾರಿ ಹಸ್ತಾಂತರಿಸಿದರು. 1988ರಲ್ಲಿ ತಮ್ಮ ಗುರು ಶ್ರೀ ವಿಬುಧೇಶ ತೀರ್ಥ ಸ್ವಾಮೀಜಿ ಮೊದಲಿಗೆ ಸರ್ವಜ್ಞ ಪೀಠದಲ್ಲಿ ಕುಳಿತು ತಕ್ಷಣವೇ ತನಗೆ ಪೀಠವನ್ನು ಬಿಟ್ಟು ಕೊಟ್ಟ ಮಾದರಿಯಲ್ಲಿ ವಿಶ್ವಪ್ರಿಯ ತೀರ್ಥರು ತಮ್ಮ ಉತ್ತರಾಧಿಕಾರಿ ಶ್ರೀ ಈಶಪ್ರಿಯ ತೀರ್ಥ ಶ್ರೀಗಳನ್ನು ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸಿದರು.

    ಮಾಲಿಕಾ ಮಂಗಳಾರತಿ: ಬಡಗುಮಾಳಿಗೆಯಲ್ಲಿ ಅರಳುಗದ್ದುಗೆಯಲ್ಲಿ ಪರ್ಯಾಯ ಅದಮಾರು ಮಠದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ವಾಮೀಜಿಯವರನ್ನು ಮಾಲಿಕಾ ಮಂಗಳಾರತಿ ಮೂಲಕ ಗೌರವಿಸಲಾಯಿತು. ಆಶ್ರಮ ಜ್ಯೇಷ್ಠತೆಯ ಆಧಾರದಲ್ಲಿ ಗಂಧಾದ್ಯುಪಚಾರ, ರೇಷ್ಮೆ ಶಾಲು, ಒಣಹಣ್ಣುಗಳಿಂದ ತಯಾರಿಸಿದ ವಿಶಿಷ್ಟ ಹಾರವನ್ನು ಹಾಕಿ, ಮೈಸೂರು ಪೇಟ ತೊಡಿಸಿ ಮಠಾಧೀಶರನ್ನು ಸತ್ಕರಿಸಲಾಯಿತು. ಪರ್ಯಾಯ ಮಠದ ದಿವಾನ ಎಂ. ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ ವಿವಿಧ ಮಠಾಧೀಶರಿಗೆ ಆರತಿ ಬೆಳಗಿದರು. ಈ ಸಂದರ್ಭ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಉಪಸ್ಥಿರಿದ್ದರು. ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts