ಅರಮನೆಗೂ, ಅಷ್ಟಮಠಕ್ಕೂ ಶತಮಾನದ ನಂಟು

ಉಡುಪಿ: ದೇಶದಲ್ಲಿ ರಾಜಪರಂಪರೆ ಮತ್ತು ಗುರು ಪರಂಪರೆ ಜತೆಗೇ ಬೆಳೆದಿವೆ. ಮೈಸೂರು ಅರಮನೆಗೂ, ಅಷ್ಟಮಠಕ್ಕೂ ಶತಮಾನಗಳ ನಂಟಿದೆ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಭಾವೀ ಪರ್ಯಾಯ ಅದಮಾರು ಮಠದಲ್ಲಿ ಬುಧವಾರ ಆಯೋಜಿಸಲಾದ ಅಕ್ಕಿ ಮುಹೂರ್ತ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕರ್ನಾಟಕ ಸಾಂಸ್ಕೃತಿಕ ವೈಭವ ತಿಳಿದುಕೊಳ್ಳಲು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇನೆ. ಪೇಜಾವರ ಶ್ರೀಗಳ 5ನೇ ಪರ್ಯಾಯ ಕಾಲದಲ್ಲಿ ಅದಮಾರು ಮಠದ ಗೆಸ್ಟ್‌ಹೌಸ್ ಮಹಡಿ ಉದ್ಘಾಟನೆ ಮಾಡವ ಅವಕಾಶ ಲಭಿಸಿತ್ತು ಎಂದರು.
ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ಅದಮಾರು ಮಠದ ಪರ್ಯಾಯ ವಿಶೇಷವಾಗಿದೆ. ಇಲ್ಲಿ ಈಶಪ್ರಿಯರೂ, ವಿಶ್ವಪ್ರಿಯರೂ ಇದ್ದಾರೆ. ಪಟ್ಟದ ದೇವರು ಕಾಳೀಯಮರ್ಧನ ಕೃಷ್ಣ ಮತ್ತು ಕೃಷ್ಣ ಮಠದ ಬಾಲಕೃಷ್ಣ ರೂಪಗಳು ಅನಿಷ್ಟವನ್ನು ನಿವಾರಿಸಿ, ಜ್ಞಾನದ ಬೆಳಕನ್ನು ನೀಡಲಿ ಎಂದು ಆಶಿಸಿದರು.

ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ಪರ್ಯಾಯ ಸಮೀಪಿಸಿದೆ ಎಂಬುದರ ಜ್ಞಾಪನಾರ್ಥವಾಗಿ ಮುಹೂರ್ತಗಳು ನೆರವೇರುತ್ತವೆ. ತಂಡುಲ ಮುಹೂರ್ತದಲ್ಲಿ ಲಕ್ಷ್ಮೀಯ ಸನ್ನಿಧಾನವಿದೆ ಎಂದರು.
ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಮಾತನಾಡಿ, ಲಿಖಿತ ಸಂವಿಧಾನ, ನಿಯಮಗಳಿಲ್ಲದಿದ್ದರೂ 8 ಶತಮಾನದಿಂದ ಆಚಾರ್ಯ ಮಧ್ವರ ಹಾಗೂ ವಾದಿರಾಜ ಸ್ವಾಮಿಗಳ ಸಂಕಲ್ಪ ನಿರಂತರವಾಗಿ ಪಾಲಿಸುತ್ತಿರುವುದು ಸೋಜಿಗದ ಸಂಗತಿ ಎಂದರು.
ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ, ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ಸಾವಯವ ಅನ್ನ ದಾಸೋಹ ಸಂಕಲ್ಪ: ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಮುಂದಿನ 2 ವರ್ಷ ಕೃಷ್ಣ ಮಠದಲ್ಲಿ ಅನ್ನಪ್ರಸಾದಕ್ಕೆ 16 ದೇಸಿ ತಳಿಯ ಅಕ್ಕಿಯನ್ನು ಅಯ್ಕೆ ಮಾಡಲಾಗಿದೆ. ಈ ಅಕ್ಕಿಯನ್ನು ಸಾವಯವ ರೀತಿಯಲ್ಲಿ ಬೆಳೆಸುವ ರೈತರಿಂದ ನೇರವಾಗಿ ಖರೀದಿಸಲಾಗುತ್ತದೆ. ಇದರಿಂದ ಮಧ್ಯವರ್ತಿಗಳಿಲ್ಲದೇ ರೈತರಿಗೆ ಲಾಭವಾಗಲಿದೆ. ವಿನಾಶದ ಅಂಚಿನಲ್ಲಿರುವ ಅಕ್ಕಿ ತಳಿಗಳನ್ನು ಉಳಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾವಯವ ಅನ್ನದಾಸೋಹದ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.

ತಂಡುಲ ಮುಹೂರ್ತ: ಪರ್ಯಾಯಕ್ಕೆ ಪೂರ್ವಭಾವಿಯಾಗಿ ನಡೆಯುವ 4 ಮುಹೂರ್ತಗಳಲ್ಲಿ ಅಕ್ಕಿ ಮುಹೂರ್ತ ಪ್ರಧಾನವಾದದ್ದು. ಇದರ ಅಂಗವಾಗಿ ಬೆಳಗ್ಗೆ 7.30ರಿಂದ ಧಾರ್ಮಿಕ ವಿಧಿ ವಿಧಾನ ನಡೆಯಿತು. ಮಠದಲ್ಲಿ ನವಗ್ರಹ ಪೂಜೆ ಬಳಿಕ ಅನಂತೇಶ್ವರ, ಚಂದ್ರೇಶ್ವರ, ಕೃಷ್ಣ ಮಠದಲ್ಲಿ ಪ್ರಾರ್ಥನೆ ಸಲ್ಲಿಸಿ, ಸಕಲ ಮಂಗಳವಾದ್ಯ, ವೇದಘೋಷಗಳೊಂದಿಗೆ ರಥಬೀದಿಯಲ್ಲಿ 18 ಅಕ್ಕಿ ಮೂಟೆಗಳ ಮೆರವಣಿಗೆ ನಡೆಸಲಾಯಿತು. 9.55ರ ಮುಹೂರ್ತದಲ್ಲಿ ಅದಮಾರು ಮಠದ ಪಟ್ಟದ ದೇವರ ಗುಡಿ ಮುಂಭಾಗದಲ್ಲಿ ಅಕ್ಕಿ ಮೂಟೆಗಳನ್ನಿಟ್ಟು ಪೂಜೆ ನೆರವೇರಿಸಲಾಯಿತು. ಅದಮಾರು ಮಠದ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತಾಯ ಅವರು 6 ಮಠದ 8 ಮಂದಿ ಶ್ರೀಪಾದರಿಗೆ ಮಾಲಿಕೆ ಮಂಗಳಾರತಿ ಮಾಡಿ ಗೌರವ ಸಲ್ಲಿಸಿದರು. ಶಿಬರೂರು ವಾಸುದೇವ ಆಚಾರ್ಯ ಧಾರ್ಮಿಕ ವಿಧಿಗಳ ನೇತೃತ್ವ ವಹಿಸಿದ್ದರು.

ದೇಶೀ ಅಕ್ಕಿ ತಳಿಗಳು: ಮುಳ್ಳರೆ, ರಾಜಕಮಲ, ಮಟ್ಟಳಗ, ಪದ್ಮರೇಖಾ, ಗೌರಿ, ಕೆಂಪಕ್ಕಿ ಸಾವಯವ, ಮಂಜುಗುಣಿ ಸಣ್ಣಕ್ಕಿ, ಒಂದ್ಕಡ್ಡಿ, ಹೊನ್ನೆಕಟ್ಟು, ಸಿಂಧು, ಆಲೂರು ಸಣ್ಣ, ತನು, ಹೇಮಾವತಿ, ಸೋನ, ಮದ್ರಾಸ್ ಸಣ್ಣಕ್ಕಿ, ಪದ್ಮ, 1001 ಬ್ರಾಂಡ್, 1010 ಬ್ರಾಂಡ್ ಸಹಿತ 16 ತಳಿಗಳ ಅಕ್ಕಿಯನ್ನು ಮೈಸೂರು, ಮಡಿಕೇರಿ, ಕಾರ್ಕಳ ಮೊದಲಾದ ಭಾಗಗಳಿಂದ ತರಿಸಿಕೊಂಡು ಸಂಗ್ರಹಿಸಲಾಗಿದೆ.

ಮುಹೂರ್ತವೆಂಬ ನೋಟಿಸ್!: 2 ವರ್ಷ ಪರ್ಯಾಯ ಪೀಠದಲ್ಲಿರುವ ಸ್ವಾಮಿಗಳಿಗೆ ಕೃಷ್ಣ ಪೂಜೆ ಬಿಟ್ಟು ಬರಲು ಮನಸ್ಸು ಒಪ್ಪುವುದಿಲ್ಲ. ಪದೇ ಪದೇ ಎಚ್ಚರಿಸಬೇಕಾಗುತ್ತದೆ. ನೋಟಿಸ್ ಕೊಟ್ಟು ಹೊರ ಹೋಗಲು ಹೇಳಬೇಕಾಗುತ್ತದೆ. ಅದಕ್ಕಾಗಿಯೇ ಬಾಳೆಮುಹೂರ್ತ, ತಂಡುಲ ಮುಹೂರ್ತ, ಕಟ್ಟಿಗೆ ಮುಹೂರ್ತ, ಭತ್ತ ಮುಹೂರ್ತ ಎಂಬ 4 ನೋಟಿಸ್‌ಗಳನ್ನು ಕೊಡಲಾಗುತ್ತದೆ ಎಂದು ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದಾಗ ಇಡೀ ಸಭೆ ನಗೆಕಡಲಲ್ಲಿ ತೇಲಿತು.