More

    ಶಾಶ್ವತ ರೆಡ್​ಸಿಗ್ನಲ್ ಯಾವ ರಸ್ತೆಯಲ್ಲೂ ಇರಲ್ಲ…

    ಹಣೆಬರಹ ಎನ್ನುವುದು ಶಾಸನದಲ್ಲಿ ಕೆತ್ತಿರೋದಲ್ಲ. ನೀವು ಮನಸ್ಸು ಮಾಡಿದರೆ, ಸರಿಯಾದ ಆಯ್ಕೆ ಮಾಡಿದರೆ, ಆಶ್ಚರ್ಯಪಡುವ ರೀತಿಯಲ್ಲಿ ನಿಮ್ಮ ಜೀವನ ಬದಲಾಗುತ್ತದೆ. ಹಾಗಾಗಿ, ಬೇರೆಯವರಿಗೆ ಯಾವತ್ತೂ ಕಾಯಬೇಡಿ. ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಕಾರ್​ಗಳಿಗೆ ಸೆಲ್ಪ್ ಇಗ್ನಿಶನ್ ಸ್ಟಾರ್ಟ್ ಇರುವಂತೆ, ನಮ್ಮನ್ನು ನಾವೇ ಸ್ಟಾರ್ಟ್ ಮಾಡಿಕೊಳ್ಳಬೇಕು.

    ಹೆವಿ ಟ್ರಾಫಿಕ್ ಇರೋ ರಸ್ತೆಯಲ್ಲಿ ಗಾಡಿ ಓಡಿಸುವಾಗ ಏನೆಲ್ಲ ಮಾಡ್ತೀರಾ ಅಂತ ಗಮನವಿಟ್ಟು ನೋಡಿ. ನಮ್ಮ ಗಾಡಿ 20 ಅಡಿ ದಾಟುವಷ್ಟರಲ್ಲೇ ನೂರಾರು ವಿಷಯ ನಡೆದಿರುತ್ತವೆ. Rare View Mirrorನಲ್ಲಿ ಕಣ್ಣು ಹಾಯಿಸಿದ್ರೆ, ಹಿಂದೆ ಬಲಕ್ಕೆ ಬರ್ತಾ ಇರೋ ಕೈನೆಟಿಕ್ ಸುಂದರಿಗೋ, ಆಂಬುಲೆನ್ಸ್​ಗೋ ದಾರಿ ಮಾಡಿಕೊಟ್ಟು, ಗಾಡೀನಾ ಎಡಕ್ಕೆ ತಿರುಗಿಸ್ತೀವಿ. ಮುಂದೆ ಹೋಗ್ತಿರೋ ಆಟೋಗೆ ಎಲ್ಲಿ ಡಿಕ್ಕಿ ಹೊಡೆಯುತ್ತೀವೋ ಎಂಬ ಭಯದಲ್ಲಿ ತಕ್ಷಣ ಬ್ರೇಕ್ ಹಾಕ್ತೀವಿ. ನಮಗೇ ಅರಿವಿಲ್ಲದೆ ಕ್ಲಚ್ ಹಾಕಿ ಗೇರ್ ಬದಲಾಯಿಸುತ್ತೀವಿ. ರಸ್ತೆ ಸ್ವಲ್ಪ ಖಾಲಿ ಇದ್ದರೆ, ಆಕ್ಸಿಲೇಟರ್​ನ ಕಾಲು ತಾನಾಗಿ ಒತ್ತುತ್ತದೆ. ದೂರದಲ್ಲಿ ಒಂದು ಮಗು ರಸ್ತೆ ದಾಟುತ್ತಿದೆ ಎಂದು ಗೊತ್ತಾದಾಗ, ಆಟೊಮ್ಯಾಟಿಕ್ ಆಗಿ ಬ್ರೇಕ್ ಹಾಕ್ತೀವಿ…

    ಹೀಗೆ ನಾವು ರಸ್ತೆಯಲ್ಲಿ ಹೋಗುವಾಗ ಪ್ರತೀ ಕ್ಷಣ ಸುತ್ತಮುತ್ತ ನಡೆಯುವ ಹಲವು ವಿಷಯಗಳನ್ನು ಗ್ರಹಿಸಿಕೊಂಡು ಡ್ರೖೆವ್ ಮಾಡುತ್ತಿರುತ್ತೀವಿ. ಮನೆಯಿಂದ ಹೊರಟಾಗ, ಇಡೀ ಪ್ರಯಾಣ ಇದೇ ರೀತಿ ಇರುತ್ತದೆ ಎಂದು ನಿರ್ದಿಷ್ಟವಾಗಿ ಹೇಳೋಕೆ ಆಗೋಲ್ಲ. ಜೀವನ ಸಹ ಅಷ್ಟೇ. ಮನೆಯಲ್ಲಿ, ಕೆಲಸದ ಜಾಗದಲ್ಲಿ ನಮ್ಮ ಸುತ್ತಲೂ ನಡೆಯುತ್ತಿರುವ ವಿಷಯಗಳನ್ನು ಅರ್ಥಮಾಡಿಕೊಂಡು, ಅಡ್ಜಸ್ಟ್ ಮಾಡಿಕೊಂಡು, ಡ್ರೖೆವ್ ಮಾಡಿಕೊಂಡು ಹೋಗುತ್ತಿರಬೇಕು. ಇದನ್ನೇ ನಾವು Self Correction ಅಂತ ಹೇಳೋದು. ಗಾಡಿ ಓಡಿಸುವಾಗ ಪಕ್ಕದ ಗಾಡಿಯವನು, ಗೇರ್ ಬದಲಾಯ್ಸು ಅಂತ ನಮಗೆ ಹೇಳಿಕೊಡಲ್ಲ. ಅದನ್ನು ನಾವೇ ಮಾಡಬೇಕು. ಮಾಡದಿದ್ದರೆ ಆಕ್ಸಿಡೆಂಟ್ ಆಗುತ್ತೆ. ಅದರಿಂದ ನಮ್ಮ ಜೀವಕ್ಕೇ ಅಪಾಯ ಅಲ್ವಾ?

    ಅದೇ ತರಹ ಮನೆಯಿಂದ ಆಫೀಸ್​ಗೆ ಹೋಗುವವರೆಗೂ ಎಲ್ಲ ಗ್ರೀನ್ ಸಿಗ್ನಲ್ ಸಿಗುತ್ತದೆ ಅಂತ ಅಂದುಕೊಂಡರೆ, ಒಂದು ದಿನ ಸಹ ಸರಿಯಾಗಿ ಆಫೀಸ್​ಗೆ ಹೋಗೋದಕ್ಕೆ ಆಗಲ್ಲ. ಪ್ರಯಾಣ ಅಂದಮೇಲೆ ಕೆಲವೊಮ್ಮೆ ರೆಡ್ ಸಿಗ್ನಲ್ ಬರುತ್ತದೆ, ಕೆಲವೊಮ್ಮೆ ಗ್ರೀನ್ ಸಿಗ್ನಲ್ ಸಿಗುತ್ತದೆ. ಕೆಂಪು ಮುಗಿದ ಮೇಲೆ ಹಸಿರು ಸಿಗುತ್ತದೆ ಎಂಬ ನಂಬಿಕೆ ಇದೆಯಲ್ಲ, ಅದು ಜೀವನದಲ್ಲಿ ಬಹಳ ಮುಖ್ಯ. ಶಾಶ್ವತವಾದ ರೆಡ್ ಸಿಗ್ನಲ್ ಯಾವ ರಸ್ತೆಯಲ್ಲೂ ಇರಲ್ಲ. ನಿರಂತರ ತಿದ್ದುಪಡಿ ಯಾವ ರೆಡ್ ಸಿಗ್ನಲನ್ನೂ ಗ್ರೀನ್ ಸಿಗ್ನಲ್ ಆಗಿ ಮಾಡುತ್ತದೆ. ನೀವು ಪ್ರೀತಿಸಿ ಮದುವೆ ಆಗಿದ್ದೀರಾ ಅಂತಿಟ್ಟುಕೊಳ್ಳಿ. ಊರಲ್ಲಿರೋರೆಲ್ಲ Wish You Happy Married Life ಅಂತ ಹಾರೈಸುತ್ತಾರೆ. ಆದರೆ, ಒಂದು ಗಟ್ಟಿ ದಾಂಪತ್ಯಕ್ಕೆ ಹಿತೈಷಿಗಳ ಹಾರೈಕೆಯ ಮಾತುಗಳು ಮಾತ್ರ ಸಾಲಲ್ಲ. ಮದುವೆ ಆದ ನಂತರ ಪ್ರತಿದಿನ ಗಂಡ-ಹೆಂಡತಿ ಇಬ್ಬರೂ ದಾಂಪತ್ಯ ದೃಢಪಡಿಸೋಕೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಹೊಂದಾಣಿಕೆ ಮಾಡಿಕೊಂಡು, ಪರಸ್ಪರ ಸಹಕರಿಸುತ್ತ ಮುಂದುವರಿಯಬೇಕು. 30-40 ವರ್ಷ ಯಶಸ್ವಿ ದಾಂಪತ್ಯ ಮುಗಿಸಿರುವಂಥ ದಂಪತಿಗಳ ಗುಟ್ಟು ಇಷ್ಟೇ. ಅವರು ಪ್ರತಿದಿನ ಸಂಬಂಧದಲ್ಲಿ ಆಗುತ್ತಿರೋ ಏರುಪೇರುಗಳನ್ನು ಅರ್ಥ ಮಾಡಿಕೊಂಡು, ಒಬ್ಬರಿಗೊಬ್ಬರು ತ್ಯಾಗ ಮಾಡಿ, ಇನ್ನೊಬ್ಬರ ಬೇಕು-ಬೇಡಗಳನ್ನು ಅರಿತುಕೊಂಡು, ಅದನ್ನು ಪೂರೈಸಿ Happily Married ಆಗಿ ಉಳಿತಾರೆ.

    ನನಗೆ 1987ರಲ್ಲಿ ‘ಸುಂದರ ಸ್ವಪ್ನಗಳು’ ಚಿತ್ರ ಹಿಟ್ ಆಗಿದ್ದು, 1997ರಲ್ಲಿ ಸತತ ಒಂಬತ್ತು ಚಿತ್ರಗಳು 100 ದಿನ ಓಡಿದ್ದು… ಒಂದು ಒಳ್ಳೇ ಆರಂಭ ಅಷ್ಟೇ. ಅಷ್ಟಕ್ಕೆ ರಿಲ್ಯಾಕ್ಸ್ ಆಗೋಕೆ ಆಗಲ್ಲ. ಮಾಡುವ ಪ್ರತಿ ಚಿತ್ರದಲ್ಲೂ ನಿರ್ವಪಕರು, ನಿರ್ದೇಶಕರು ಮತ್ತು ಸಹಪಾಠಿಗಳ ಜತೆಗೆ ಹೊಂದಿಕೊಂಡು, ಬದಲಾಗುತ್ತಿರುವ ಅಭಿರುಚಿ ಮತ್ತು ತಂತ್ರಜ್ಞಾನಕ್ಕೆ ಒಗ್ಗಿಕೊಂಡು, ನನ್ನನ್ನು ನಾನು Correct ಮಾಡಿಕೊಂಡು ಹೋಗಬೇಕು. It’s a Constant Battle. ಅದೊಂದು ಶಾಶ್ವತವಾದ ಯುದ್ಧವಿದ್ದಂತೆ. ಒಂದೊಳ್ಳೆಯ ಆರಂಭ, ಗೆಲುವು… ಜೀವನಪೂರ್ತಿ ಜತೆ ಇರುವುದಿಲ್ಲ. ನಾವು ಪ್ರತಿನಿತ್ಯ ಶ್ರಮಪಡಲೇಬೇಕು, ಪಾಠ ಕಲಿಯುತ್ತಲೇ ಇರಬೇಕು ಮತ್ತು ನಮ್ಮನ್ನು ನಾವು ತಿದ್ದಿಕೊಳ್ಳುತ್ತಲೇ ಇರಬೇಕು. ಇದನ್ನು ಮಾಡದೇ ಇದ್ದಾಗ, ಲಯ ತಪ್ಪುತ್ತದೆ ಮತ್ತು ಇದಕ್ಕೆಲ್ಲ ನಮ್ಮ ಹಣೆಬರಹವೇ ಕಾರಣ ಎಂದು ಎಲ್ಲ ತಪ್ಪನ್ನೂ ಅದರ ಮೇಲೆ ಹಾಕುತ್ತೇವೆ.

    ಹಣೆಬರಹ ಎನ್ನುವುದು Permanent Inkನಲ್ಲಿ ಬರೆದಿರೋದಲ್ಲ. ಶಾಸನದಲ್ಲಿ ಕೆತ್ತಿರೋದಲ್ಲ. ನೀವು ಮನಸ್ಸು ಮಾಡಿದರೆ, ಸರಿಯಾದ ಆಯ್ಕೆ ಮಾಡಿದರೆ, ಸರಿಯಾದ ಜನರ ಜತೆಗೆ ಕೆಲಸ ಮಾಡಿದರೆ ಆಶ್ಚರ್ಯಪಡುವ ರೀತಿಯಲ್ಲಿ ನಿಮ್ಮ ಜೀವನ ಬದಲಾಗುತ್ತದೆ. ಹಾಗಾಗಿ, ಬೇರೆಯವರಿಗೆ ಯಾವತ್ತೂ ಕಾಯಬೇಡಿ. ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಈ ಕಾರ್​ಗಳಿಗೆ ಸೆಲ್ಪ್ ಇಗ್ನಿಶನ್ ಸ್ಟಾರ್ಟ್ ಇರುತ್ತದಲ್ಲ, ಹಾಗೆ. ಪ್ರತಿ ಬಾರಿಯೂ ಕಾರನ್ನು ತಳ್ಳಿ ಸ್ಟಾರ್ಟ್​ವಾಡಬೇಕಿಲ್ಲ. ಹಾಗೆಯೇ, ನಮ್ಮನ್ನು ನಾವೇ ಸ್ಟಾರ್ಟ್ ಮಾಡಿಕೊಳ್ಳಬೇಕು.

    ನಮಗೆ ಏನು ಒಳ್ಳೆಯದು, ಏನು ಕೆಟ್ಟದ್ದು ಅಂತ ಚೆನ್ನಾಗಿ ಗೊತ್ತಿರು ತ್ತದೆ. ಆದರೂ ಅದಕ್ಕೆ ವಿರುದ್ಧವಾಗಿ ನಾವು ಮಾಡುತ್ತಿರುತ್ತೇವೆ. ಸಿಗರೇಟ್ ಸೇದೋದು ಒಳ್ಳೆಯದಲ್ಲ ಅಂತ ಚೆನ್ನಾಗಿ ಗೊತ್ತು. ಆದರೂ ಅದನ್ನು ಚಟ ಮಾಡಿಕೊಂಡಿರುತ್ತೇವೆ ಮತ್ತು ಅದನ್ನು ಬಿಡೋದಕ್ಕೆ ಆಗದೆ ಒದ್ದಾಡುತ್ತಿರುತ್ತೇವೆ. ವ್ಯಾಯಾಮ ಮಾಡಬೇಕು ಅಂತ ಗೊತ್ತು. ಅದರೂ ಮಾಡುವುದಿಲ್ಲ. ಬೆಳಗ್ಗೆ ಆರು ಗಂಟೆಗೆ ಏಳಬೇಕು ಅಂತ ಅಲಾರಾಂ ಇಟ್ಟುಕೊಂಡಿರುತ್ತೇವೆ. ಆರಕ್ಕೆ ಅಲಾರಾಂ ಹೊಡೆದಾಗ, ಅದರ ಬಾಯಿ ಮುಚ್ಚಿಸಿ ಕಂಬಳಿ ಹೊದ್ದು ಮಲಗುತ್ತೀವಿ. ಇಟ್ಟಿದ್ದೂ ನಾವೇ, ಅದನ್ನು ಬಂದ್ ಮಾಡಿ ಮಲಗೋದೂ ನಾವೇ. ಕೆಲವು ಕೆಲಸಗಳನ್ನು ಪ್ರತಿದಿನ ಮಾಡಲೇಬೇಕು ಅಂತ ಗೊತ್ತಿದ್ದರೂ ಮಾಡುವುದಿಲ್ಲ. ಅಗತ್ಯವಾಗಿ ಮಾಡಲೇಬೇಕಾಗಿರುವ ಕೆಲವು ವಿಷಯಗಳನ್ನು ಬಿಟ್ಟು, ಅನಗತ್ಯವಾದ ಕೆಲಸಗಳನ್ನು ಮಾಡುತ್ತಿರುತ್ತೀವಿ. ಯಾವುದೋ ವಿಡಿಯೋ ನೋಡುತ್ತಲೋ ಅಥವಾ ಸೋಷಿಯಲ್ ಮೀಡಿಯಾದ

    ಪೋಸ್ಟ್​ಗೆ ಹೆಚ್ಚು ಗಮನ ಕೊಡುತ್ತಲೋ… ಮಾಡಬೇಕಾದ ಕೆಲಸಗಳನ್ನು ಬಿಟ್ಟುಬಿಡುತ್ತೇವೆ. ಒಂದು ಕೆಲಸ ಮಾಡೋಣ. ನಮ್ಮ ಸಂಪಾದನೆ ಹೆಚ್ಚು ಮಾಡುವುದಕ್ಕೆ ಮೂರು ಅಂಶಗಳು ಯಾವುವು? ನಮ್ಮ ಸಂಬಂಧಗಳನ್ನು ಶ್ರೀಮಂತಗೊಳಿಸುವ, ಬೆಳವಣಿಗೆಗೆ ಪೂರಕವಾಗುವ, ಏಳ್ಗೆಗೆ ಮಾಡಲೇಬೇಕಾಗಿರುವ ಮೂರು ಅಂಶಗಳನ್ನು ಗುರುತಿಸುವುದಕ್ಕೆ ಪ್ರಯತ್ನ ಮಾಡೋಣ. ಹಾಗೆ ಪ್ರಯತ್ನಿಸಿ, ಆ ಮೂರು ಅಂಶಗಳನ್ನು ನಿರ್ಣಯ ಮಾಡೋಣ. ಮುಂದಿನ ವಾರ ಈ ಅಂಕಣ ಬರುವ ಹೊತ್ತಿಗೆ ಆ ಅಗತ್ಯವಾದ ಅಂಶಗಳ ಕಡೆ ಮೊದಲ ಹೆಜ್ಜೆ ಇಡೋಣ. ಅಲ್ಲಿಂದ ಸುದೀರ್ಘವಾದ ಪ್ರಯಾಣ ಶುರುವಾಗುತ್ತದೆ. ಆಮೇಲೆ ಇದ್ದಿದ್ದೇ. ಕ್ಲಚ್, ಬ್ರೇಕ್, ಕೈನೆಟಿಕ್ ಸುಂದರಿ… Happy Driving…

    (ಲೇಖಕರು ನಟ, ನಿರ್ದೇಶಕ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts