ನಾನಾ ಪಾಟೇಕರ್​ಗೆ ಪೊಲೀಸ್​ ಕ್ಲೀನ್​ ಚಿಟ್​: ಮತ್ತೊಂದು ಸಮರಕ್ಕೆ ಮುಂದಾದ ತನುಶ್ರೀ ದತ್ತಾ…

ನವದೆಹಲಿ: ಹಿರಿಯ ನಟ, ನಿರ್ದೇಶಕ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಮಾಡಿದ್ದ ಲೈಂಗಿಕ ಕಿರುಕುಳ ಆರೋಪಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ನ್ಯಾಯಾಲಯಕ್ಕೆ ಬಿ ವರದಿ ನೀಡಿ ಪ್ರಕರಣಕ್ಕೆ ಅಂತ್ಯ ಹಾಡಿದ್ದ ಮುಂಬೈ ಪೊಲೀಸರ ಕ್ರಮವನ್ನು ತನುಶ್ರೀ ದತ್ತಾ ತೀವ್ರವಾಗಿ ಖಂಡಿಸಿ ವಾಗ್ದಾಳಿ ನಡೆಸಿದ್ದಾರೆ.

ಭ್ರಷ್ಟ ಪೋಲಿಸ್​ ಅಧಿಕಾರಿಗಳು ಅವರಂತೆಯೇ ಭ್ರಷ್ಟರಾಗಿರುವ ವ್ಯಕ್ತಿಗೆ ಕ್ಲೀನ್​ ಚಿಟ್​ ಕೊಟ್ಟಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.

ಶೂಟಿಂಗ್​ ವೇಳೆ ನಾನಾ ಪಾಟೇಕರ್​ ತಮ್ಮನ್ನು ಅನುಚಿತವಾಗಿ ಸ್ಪರ್ಶಿಸಿ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ತನುಶ್ರೀ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇಂದು ಸಾಕ್ಷಿಯಿಲ್ಲವೆಂದು ಹೇಳಿ ಪೊಲೀಸರು ಪ್ರಕರಣಕ್ಕೆ ಅಂತ್ಯಹಾಡಿದ್ದರು. ಅದರ ಬೆನ್ನಲ್ಲೇ ತನುಶ್ರೀ ದತ್ತಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಪೊಲೀಸರ ವಿರುದ್ಧವೇ ಹರಿಹಾಯ್ದಿದ್ದಾರೆ.

ಪೊಲೀಸರು ತನಿಖೆ ನಡೆಸಿದ ಕ್ರಮವನ್ನೇ ಅವರು ಪ್ರಶ್ನಿಸಿದ್ದಾರೆ. ನನ್ನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಾಕ್ಷಿಯಾದವರೂ ಸುಮ್ಮನಿದ್ದಾರೆ. ಅಲ್ಲದೆ ತಮ್ಮ ಕಾರಿನ ಮೇಲೆ ದಾಳಿ ನಡೆಸಲಾಗಿದ್ದ ವಿಡಿಯೋ ಕೂಡ ಇದೆ ಎಂದಿದ್ದಾರೆ. ತನುಶ್ರೀ ದತ್ತಾ ಅವರು ಹೇಳಿದಂತೆ ಸಿನಿಮಾ ಶೂಟಿಂಗ್​ ಸೆಟ್​ನಲ್ಲಿ ನಡೆದಿತ್ತು ಎಂದು ಇಬ್ಬರು ಮಹಿಳೆಯರು ಟ್ವಿಟರ್​ನಲ್ಲಿ ಹೇಳಿದ್ದಾರೆ. ಅವರಲ್ಲಿ ಓರ್ವ ಮಹಿಳೆ ಪತ್ರಕರ್ತೆಯಾದರೆ ಇನ್ನೊಬ್ಬರು ಸಹಾಯಕ ನಿರ್ದೇಶಕರು.

ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ಅಂತ್ಯಕಂಡಿದ್ದರೂ ಬಾಂಬೆ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವುದಾಗಿ ತನುಶ್ರೀ ದತ್ತಾ ಅವರ ಪರ ವಕೀಲರು ಹೇಳಿದ್ದಾರೆ. ಹಾಗೇ ತನುಶ್ರೀ ಕೂಡ ತಾವು ಹೋರಾಟ ಮುಂದುವರಿಸುತ್ತೇವೆ. ನನಗೆ ಆದ ಅನ್ಯಾಯ, ಹಿನ್ನೆಡೆ ಬೇರೆ ಸಂತ್ರಸ್ತೆಯರಿಗೆ ಆಗಬಾರದು. ಲೈಂಗಿಕ ದೌರ್ಜನ್ಯವನ್ನು ಪ್ರತಿಯೊಬ್ಬರೂ ಮೆಟ್ಟಿನಿಲ್ಲಬೇಕು ಎಂದು ಹೇಳಿದ್ದಾರೆ.

ಅಲ್ಲದೆ ತಮ್ಮ ದೂರನ್ನು ಸುಳ್ಳು ಮಾಡಲು ನಕಲಿ ಸಾಕ್ಷಿಗಳನ್ನೂ ಸೃಷ್ಟಿಸಲಾಗಿದೆ. ನಾನು ಒದಗಿಸಿದ ಪುರಾವೆಗಳು ಎಲ್ಲಿ ಹೋದವು. ಆದರೂ ಪೊಲೀಸರು ಈ ಕ್ಲೀನ್​ ಚಿಟ್​ ಕೊಟ್ಟಿದ್ದರ ಬಗ್ಗೆ ನನಗೆ ಶಾಕ್​ ಆಗಲೀ, ಆಶ್ಚರ್ಯವಾಗಲೀ ಆಗಲಿಲ್ಲ. ನನಗೆ ಗೊತ್ತಿತ್ತು ಎಂದು ತಿಳಿಸಿದ್ದಾರೆ. ಖಂಡಿತ ಈ ಪ್ರಕರಣದಲ್ಲಿ ನನಗೆ ಜಯ ಸಿಕ್ಕೇ ಸಿಗುತ್ತದೆ. ನಾನು ಹೋರಾಡುತ್ತೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *