ಎಫ್​ಐಆರ್​ ರದ್ದು ಕೋರಿ ಹೈಕೋರ್ಟ್​ ಮೆಟ್ಟಿಲೇರಿದ ಶ್ರುತಿ ಹರಿಹರನ್​

ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ ಪ್ರಕರಣದಲ್ಲಿ ತಮ್ಮ ವಿರುದ್ಧ ಸೈಬರ್ ಕ್ರೈಂ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಕೋರಿ ನಟಿ ಶ್ರುತಿ ಹರಿಹರನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅರ್ಜುನ್ ಸರ್ಜಾ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಮತ್ತು ವಂಚನೆ ಮಾಡಿದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಸರ್ಜಾ ಮತ್ತು ತನ್ನ ನಡುವೆ ಯಾವುದೇ ವ್ಯವಹಾರ ನಡೆದಿಲ್ಲ. ಹೀಗಿರುವಾಗ ವಂಚನೆ ಮಾಡಲು ಸಾಧ್ಯವಿಲ್ಲ. ತಮ್ಮ ವಿರುದ್ಧ ದುರುದ್ದೇಶಪೂರಿತವಾಗಿ ಪ್ರಕರಣ ದಾಖಲಿಸಲಾಗಿದ್ದು, ಅದನ್ನು ರದ್ದುಪಡಿಸಬೇಕೆಂದು ಶ್ರುತಿ ಮನವಿ ಮಾಡಿದ್ದಾರೆ.

ಅರ್ಜಿಯಲ್ಲಿ ಸೈಬರ್ ಕ್ರೈಂ ಪೊಲೀಸರು ಹಾಗೂ ದೂರುದಾರ ಶಿವಾ ಅರ್ಜುನ್ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದ್ದು, ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಿದೆ.

ಪ್ರಕರಣವೇನು?

ಸಾಮಾಜಿಕ ಜಾಲತಾಣಗಳಲ್ಲಿ ಅರ್ಜುನ್ ಸರ್ಜಾ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ಪ್ರಕಟಿಸಿರುವ ಶ್ರುತಿ ಹರಿಹರನ್, ಸರ್ಜಾ ಘನತೆಗೆ ಧಕ್ಕೆ ಮಾಡಿದ್ದಾರೆಂದು ಆರೋಪಿಸಿ ಅರ್ಜುನ್ ಸರ್ಜಾ ಮ್ಯಾನೇಜರ್ ಶಿವಾ ಅರ್ಜುನ್ ದೂರು ನೀಡಿದ್ದರು. ದೂರನ್ನಾಧರಿಸಿ ಸೈಬರ್ ಕ್ರೈಂ ಪೊಲೀಸ್‌ರು ಶ್ರುತಿ ಹರಿಹರನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.