ವಿಜಯವಾಣಿ ಸುದ್ದಿಜಾಲ ಬೆಂಗಳೂರು
“ಕೃಷ್ಣಂ ಪ್ರಣಯ ಸಖಿ’ ಚಿತ್ರದ ಯಶಸ್ಸಿನ ಬಳಿಕ ನಟಿ ಶರಣ್ಯಾ ಶೆಟ್ಟಿಗೆ ಉತ್ತಮ ಅವಕಾಶಗಳು ಅರಸಿ ಬರುತ್ತಿವೆಯಂತೆ. ಹೀಗಾಗಿ ಅವರು ಸಹ ಕಥೆ ಮತ್ತು ಪಾತ್ರದ ಬಗ್ಗೆ ಈಗೀಗ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ ಶರಣ್ಯಾ, “ಜನರಿಗೆ ಕಥೆ ಮತ್ತು ಮನರಂಜನೆ ಎರಡೂ ಮುಖ್ಯ ಎಂಬುದು ನನಗೆ ಅರ್ಥವಾಗಿದೆ. ಅದರ ಜತೆಗೆ ಒಂದೇ ರೀತಿಯ ಪಾತ್ರಗಳಲ್ಲಿ ನಟಿಸದೇ, ಭಿನ್ನ-ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ನನ್ನ ಆಸೆ ಕೂಡ. “ಕೃಷ್ಣಂ ಪ್ರಣಯ ಸಖಿ’ಯಲ್ಲಿ ಬೋಲ್ಡ್ ಹುಡುಗಿಯಾಗಿದ್ದೆ. ಇದೀಗ ನೆನಪಿರಲಿ ಪ್ರೇಮ್ ಸರ್ ಜತೆ ಇನ್ನೂ ಹೆಸರಿಡದ ಒಂದು ಸಿನಿಮಾದಲ್ಲಿ ಬೆಂಗಾಲಿ ಮುಸ್ಲಿಂ ಪಾತ್ರದಲ್ಲಿ ನಟಿಸಿದ್ದೇನೆ. ಅದಕ್ಕಾಗಿ ಬೆಂಗಾಲಿ ಭಾಷೆ ಕಲಿತೆ. ಅದರ ಬೆನ್ನಲ್ಲೇ “ಕೌಂತೇಯ’ ಚಿತ್ರ ಒಪ್ಪಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ.
ಕ್ರೈಮ್ ರಿಪೋರ್ಟರ್ ಶೆಟ್ಟಿ
“ಕುಂಭರಾಶಿ’ ಖ್ಯಾತಿಯ ಚಂದ್ರಹಾಸ ಆ್ಯಕ್ಷನ್-ಕಟ್ ಹೇಳುತ್ತಿರುವ “ಕೌಂತೇಯ’ ಚಿತ್ರದಲ್ಲಿ ಶರಣ್ಯಾ, ಅಚ್ಯುತ್ ಕುಮಾರ್ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಅಪ್ಪ ಪೊಲೀಸ್ ಅಧಿಕಾರಿಯಾಗಿದ್ದರೆ, ಮಗಳು ಕ್ರೈಮ್ ರಿಪೋರ್ಟರ್. ಇಬ್ಬರ ನಡುವೆ ಜುಗಲ್ಬಂದಿ ಇರುತ್ತದೆ. ಎರಡೂವರೆ ಮೂರು ಪುಟಗಳ ಡೈಲಾಗ್ಗಳಿವೆ. ಜತೆಗೆ ಕ್ರೈಮ್ ವರದಿಗಾರರು ಹೇಗೆ ಸುದ್ದಿ ನೀಡುತ್ತಾರೆ ಎಂಬುದನ್ನು ಈಗೀಗ ಹೆಚ್ಚು ವೀಸುತ್ತಿದ್ದೇನೆ. ನಟನೆಗೆ ಸ್ಕೋಪ್ ಇರುವ ಸವಾಲಿನ ಪಾತ್ರ’ ಎನ್ನುತ್ತಾರೆ.
ಪರಭಾಷೆಗಳಲ್ಲೂ ಆಫರ್ಸ್
ನಟ ಪ್ರೇಮ್ ಜತೆಗೆ ಒಂದು ಸಿನಿಮಾ ಹಾಗೂ “ಕೌಂತೇಯ’ ಹೊರತುಪಡಿಸಿ ಕನ್ನಡದಲ್ಲಿ ಇನ್ನೂ ಎರಡು ಕಥೆಗಳನ್ನು ಶರಣ್ಯಾ ಓಕೆ ಮಾಡಿದ್ದಾರಂತೆ. ಹಾಗೇ ತೆಲುಗಿನಲ್ಲೂ ಒಂದು ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದ್ದು, “ನನಗೆ ಮೊದಲಿನಿಂದಲೂ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸುವ ಆಸೆ ಇತ್ತು. ಅದು ತೆಲುಗು ಸಿನಿಮಾ ಮೂಲಕ ಈಡೇರಲಿದೆ. ದೊಡ್ಡ ಬ್ಯಾನರ್ನಲ್ಲಿ ಹೆಸರಾಂತ ನಾಯಕ ನಟನ ಜತೆ ಟಾಲಿವುಡ್ಗೆ ಪದಾರ್ಪಣೆ ಮಾಡುತ್ತಿರುವ ಖುಷಿಯಿದೆ. ತಮಿಳಿನಲ್ಲೂ ಮೂರು ಕಥೆ ಕೇಳಿದ್ದೇನೆ. ಆದರೆ, ಓಕೆ ಮಾಡಿಲ್ಲ. ನನಗೆ ಕನ್ನಡದಲ್ಲೇ ಹೆಚ್ಚು ಚಿತ್ರಗಳಲ್ಲಿ, ವಿಭಿನ್ನ ಪಾತ್ರಗಳಲ್ಲಿ ನಟಿಸುವ ಆಸೆ’ ಎಂದು ಹೇಳಿಕೊಳ್ಳುತ್ತಾರೆ.
ಕಲಿಕೆ ಮುಂದುವರಿದಿದೆ…
ಶರಣ್ಯಾ ಸದ್ಯ ಡಾನ್ಸ್ ತರಬೇತಿಯ ಜತೆಗೆ ಕುದುರೆ ಸವಾರಿ, ಬಾಕ್ಸಿಂಗ್ ಕೂಡ ಕಲಿಯುತ್ತಿದ್ದಾರಂತೆ. “ಶರಣ್ಯಾ ಗ್ಲಾಮರ್ ಡಾಲ್ ಮಾತ್ರವಲ್ಲ ಒಬ್ಬ ಉತ್ತಮ ಕಲಾವಿದೆ ಅಂತಲೂ ಹೇಳಿಸಿಕೊಳ್ಳಬೇಕು ಎಂಬ ಆಸೆ ನನ್ನದು. ಹೀಗಾಗಿಯೇ ಕಥೆ ಮತ್ತು ಪಾತ್ರಕ್ಕೆ ಮೊದಲ ಸ್ಥಾನ ನೀಡುತ್ತೇನೆ. ನಂತರ ತಾಂತ್ರಿಕ ತಂಡ, ಬಳಿಕ ತಾರಾಗಣ, ಕೊನೆಯಲ್ಲಿ ಸಂಭಾವನೆಯ ಬಗ್ಗೆ ಮಾತನಾಡುತ್ತೇನೆ’ ಎನ್ನುತ್ತಾರೆ.