ತಾಯಿಯನ್ನೇ ಮನೆಯಿಂದ ದೂಡಿರುವ ಹಿಂದಿನ ನೋವಿನ ಕತೆಯನ್ನು ಹೇಳಿಕೊಂಡ ನಟಿ ಸಂಗೀತಾ ಕ್ರಿಶ್​

ಚೆನ್ನೈ: ಬಹುಭಾಷಾ ನಟಿ ಹಾಗೂ ಸ್ಯಾಂಡಲ್​ವುಡ್​ನಲ್ಲಿ ನಟ ಕಿಚ್ಚ ಸುದೀಪ್​ ಜತೆ ನಲ್ಲ ಸಿನಿಮಾದಲ್ಲಿ ನಟಿಸಿದ್ದ ನಟಿ ಸಂಗೀತಾ ಕ್ರಿಶ್​ ಅವರು ಬಹಳ ದಿನಗಳ ಬಳಿಕ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಸಿನಿಮಾ ವಿಚಾರಕ್ಕಲ್ಲದೆ, ತಮ್ಮಹೆತ್ತ ತಾಯಿಯ ವಿರುದ್ಧ ಬೆರಳು ತೋರಿಸುವ ಮೂಲಕ ಸುದ್ದಿಗೆ ಆಹಾರವಾಗಿದ್ದಾರೆ.

ಹಿನ್ನೆಲೆ ಗಾಯಕ ಕ್ರಿಶ್​ ಜತೆ ವೈವಾಹಿಕ ಜೀವನ ಸಾಗಿಸುತ್ತಿರುವ ಸಂಗೀತಾ ಅವರ ಮೇಲೆ ತಾಯಿಯನ್ನು ಮನೆಯಿಂದ ಆಚೆಗೆ ಹಾಕಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ಸಂಗೀತಾ ಅವರ ತಾಯಿಯೇ ಇಳಿ ವಯಸ್ಸಿನಲ್ಲಿ ನನ್ನನ್ನು ಮನೆಯಿಂದ ಆಚೆಗೆ ಹಾಕಿದ್ದಾರೆ. ಅಲ್ಲದೆ, ನನ್ನ ಪಾಲಿನ ಆಸ್ತಿಯನ್ನು ಕಬಳಿಸಬೇಕೆಂದುಕೊಂಡಿದ್ದಾರೆ ಎಂದು ಮಗಳ ವಿರುದ್ಧ ಆರೋಪ ಗೈದಿದ್ದಾರೆ.

ತಾಯಿಯ ಆರೋಪದ ಬಗ್ಗೆ ತಮ್ಮ ಟ್ವಿಟರ್​ ಮೂಲಕ ಸ್ಪಷ್ಟನೆ ನೀಡಿರುವ ನಟಿ ಸಂಗೀತಾ, ಚಿಕ್ಕವಯಸ್ಸಿನಲ್ಲಿ ತಾಯಿ ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ನನ್ನನ್ನು ಈ ಭೂಮಿಗೆ ತಂದಿದ್ದಕ್ಕೆ ಧನ್ಯವಾದಗಳು ಅಮ್ಮ ಎಂದು ಆರಂಭಿಸಿರುವ ಸಂಗೀತಾ 13ನೇ ವಯಸ್ಸಿನಲ್ಲಿ ನನ್ನನ್ನು ಶಾಲೆಯುಂದ ಹೊರಗೆ ಹಾಕಿ ಕೆಲಸಕ್ಕೆ ದೂಡಿದ ನಿಮಗೆ ಧನ್ಯವಾದಗಳು, ಬ್ಲ್ಯಾಂಕ್​ ಚೆಕ್​ ಮೇಲೆ ಸಹಿ ಮಾಡುವಂತೆ ಮಾಡಿದ ನಿಮಗೆ ಧನ್ಯವಾದಗಳು, ಇಡೀ ಜೀವನದಲ್ಲಿ ಎಂದೂ ಕೆಲಸಕ್ಕೆ ಹೋಗದೆ ಬರೀ ಮದ್ಯ ಹಾಗೂ ಡ್ರಗ್ಸ್​ ವ್ಯಸನಿಯಾಗಿದ್ದ ತಮ್ಮ ಮಗನ ನೆಮ್ಮದಿಯ ಜೀವನಕ್ಕಾಗಿ ನನ್ನನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು, ನನ್ನ ನಿರ್ಧಾರಗಳಿಗೆ ಬೆಲೆ ಕೊಡದೆ ಸ್ವಂತ ಮನೆಯಲ್ಲಿ ನನ್ನನ್ನು ಮೂಲೆಗುಂಪು ಮಾಡಿದ ನಿಮಗೆ ಧನ್ಯವಾದಗಳು, ನಾನು ಹೋರಾಡುವ ತನಕ ನನಗೆ ಮದುವೆಯಾಗಲು ಬಿಡದಿದ್ದಕ್ಕೆ ನಿಮಗೆ ಧನ್ಯವಾದಗಳು, ಪದೇ ಪದೆ ನನ್ನ ಗಂಡ ಹಾಗೂ ನನ್ನ ಕುಟುಂಬದ ನೆಮ್ಮದಿಗೆ ಭಂಗ ತರುತ್ತಿರುವ ನಿಮಗೆ ಧನ್ಯವಾದಗಳು. ತಾಯಿ ಯಾವ ರೀತಿ ಇರಬಾರದೆಂದು ನನಗೆ ಕಲಿಸಿದ ನಿಮಗೆ ಧನ್ಯವಾದಗಳು ಹಾಗೂ ಕೊನೆಯದಾಗಿ ನನ್ನ ವಿರುದ್ಧ ತಪ್ಪು ಅರೋಪಗಳನ್ನು ಮಾಡುತ್ತಿರುವ ನಿಮಗೆ ಧನ್ಯವಾದಗಳು ಎಂದು ವ್ಯಂಗ್ಯವಾಗಿ ತಾಯಿಯ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಗೊತ್ತಿದ್ದೋ, ಗೊತ್ತಿಲ್ಲದೆಯೋ ನನ್ನನ್ನು ಒಂದು ಮೂಕ ಮಗುವಿನಿಂದ ಹೋರಾಟಗಾರ್ತಿಯನ್ನಾಗಿ ಮಾಡಿದ್ದೀರಿ. ನಾನೀಗ ತುಂಬಾ ಪಕ್ವತೆ ಹಾಗೂ ಶಕ್ತಿಯುತವಾದ ಮಹಿಳೆಯಾಗಿದ್ದೇನೆ. ನನ್ನನ್ನು ಈ ರೀತಿ ಬೆಳೆಸಿದ ಒಂದೇ ಕಾರಣಕ್ಕೆ ನಾನು ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ. ಒಂದು ದಿನ ನಿಮ್ಮ ಅಹಂ ಕೊನೆಗೊಂಡು ನನ್ನ ಬಗ್ಗೆ ಹೆಮ್ಮೆಪಡುವ ದಿನ ಬರುತ್ತದೆ ಎಂದು ತಿಳಿಸಿದ್ದಾರೆ.

2009ರಲ್ಲಿ ಸಂಗೀತಾ ಕ್ರಿಶ್​ ಎಂಬವರನ್ನು ವಿವಾಹವಾದರು. 2012ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಸಂಗೀತಾ ಸುಖಕರ ವೈವಾಹಿಕ ಜೀವನವನ್ನು ಸಾಗಿಸುತ್ತಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *