More

  ರಿಷಿಕಾ ಈಗ ‘ಓಕೆ ಮಗಾ’!

  ಹರ್ಷವರ್ಧನ್ ಬ್ಯಾಡನೂರು
  ಬೆಂಗಳೂರು: ನಟಿ ರಿಷಿಕಾ ಸಿಂಗ್, ಕಳೆದ ಮೂರು ವರ್ಷಗಳಿಂದ ಚಿತ್ರರಂಗದಿಂದ ದೂರಾಗಿದ್ದಾರೆ. ಅದಕ್ಕೆ ಕಾರಣ 2020ರಲ್ಲಿ ನಡೆದಿದ್ದ ಅಪಘಾತ. ಕಾರು ಅಪಘಾತದಲ್ಲಿ ಸ್ಪೈನಲ್ ಇಂಜುರಿ ಆಗಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಫಿಸಿಯೋಥೆರಪಿ ಮುಂದುವರಿದಿದ್ದು, ಇನ್ನು ಕೆಲವೇ ತಿಂಗಳಲ್ಲಿ ಸಂಪೂರ್ಣ ಗುಣಮುಖರಾಗಲಿದ್ದಾರೆ. ‘ಗಾಯಗೊಳ್ಳುವುದು ನಮ್ಮ ಕೈಯಲ್ಲಿರುವುದಿಲ್ಲ. ಅದಕ್ಕೇ ಯಾವಾಗಲೂ ದೊಡ್ಡವರು ಮನೆಯಿಂದ ಹೊರ ಹೋಗುವಾಗ ಹುಷಾರು ಎನ್ನುತ್ತಿರುತ್ತಾರೆ. ಆದರೆ, ಕೆಲವೊಮ್ಮೆ ಹಣೆಬರಹ…’ ಎಂದು ಮೌನವಾಗುತ್ತಾರೆ ರಿಷಿಕಾ ಸಿಂಗ್. 2011ರಲ್ಲಿ ‘ಕಂಠೀರವ’ ಚಿತ್ರದ ಮೂಲಕ ನಾಯಕಿಯಾಗಿ ಡೆಬ್ಯೂ ಮಾಡಿದ ರಿಷಿಕಾ, ಬಳಿಕ ‘ಕಳ್ಳ ಮಳ್ಳ ಸುಳ್ಳ’, ‘ಬೆಂಕಿ ಬಿರುಗಾಳಿ’, ‘ಕಿರೀಟ’ ಚಿತ್ರಗಳಲ್ಲಿ ನಟಿಸಿದ್ದರು.

  2 ವರ್ಷ ಮೊಬೈಲ್ ಆಫ್

  ಅಪಘಾತದ ಬಳಿಕ, ಚಿಕಿತ್ಸೆ ಪಡೆಯುತ್ತಿರುವಾಗ ರಿಷಿಕಾ ಎರಡು ವರ್ಷಗಳ ಕಾಲ ಮೊಬೈಲ್ ಆಫ್ ಮಾಡಿಕೊಂಡಿದ್ದರಂತೆ. ‘ಎರಡು ವರ್ಷ ಮೊಬೈಲ್ ಆಫ್ ಮಾಡಿಕೊಂಡು, ಎಲ್ಲರಿಂದ ದೂರವಾಗಿದ್ದೆ. ಹೊರಜಗತ್ತಿನಿಂದ ಕಟ್​ಆಫ್ ಆಗಿದ್ದೆ. ಹಲವಾರು ಮಂದಿ ಚಿತ್ರರಂಗದವರು ನನ್ನನ್ನು ಸಂರ್ಪಸಲು ಪ್ರಯತ್ನಿಸಿದರೂ, ಸಾಧ್ಯವಾಗಿರಲಿಲ್ಲ. ಅಣ್ಣ (ಆದಿತ್ಯ), ಅಪ್ಪ (ರಾಜೇಂದ್ರ ಸಿಂಗ್ ಬಾಬು), ಅತ್ತೆ (ವಿಜಯಲಕ್ಷ್ಮೀ ಸಿಂಗ್), ಅಂಕಲ್ (ಜೈ ಜಗದೀಶ್), ವೈನಿಧಿ, ವೈಸಿರಿ, ವೈಭವಿ ಎಲ್ಲರೂ ಚೇತರಿಸಿಕೊಳ್ಳಲು ಸಹಾಯ ಮಾಡಿದರು. ಹಲವಾರು ಸಂಬಂಧಿಕರು, ಗೆಳೆಯರು ಆಸ್ಪತ್ರೆಗೆ ಬರುತ್ತಿದ್ದರು’ ಎಂದು ಹೇಳಿಕೊಳ್ಳುತ್ತಾರೆ.

  ಹೇಗಿದ್ದಾರೆ ರಿಷಿಕಾ?

  ರಿಷಿಕಾ ಸಿಂಗ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಸುದೀರ್ಘ ಫಿಸಿಯೋಥೆರಪಿಯಿಂದ ಮತ್ತೆ ಫಿಟ್ ಆಗುತ್ತಿದ್ದಾರೆ. ‘ಕ್ರಚಸ್ ಇಲ್ಲದೆಯೂ ನಡೆಯಬಹುದು. ಆದರೆ ಸುಮ್ಮನೇ ರಿಸ್ಕ್ ಯಾಕೆ? ಸುರಕ್ಷತೆ ಮುಖ್ಯ. ಹೀಗಾಗಿ ಇನ್ನೂ ಮೂರು ತಿಂಗಳು ಕ್ರಚಸ್ ಬಳಸಲಿದ್ದೇನೆ. ಅದರಿಂದ ಆಚೆ ಬಂದ ನಂತರ ನನಗೆ ಕ್ರಚಸ್ ಬೇಕೆಂದರೆ ಯಾರು ಕೊಡುತ್ತಾರೆ? ಇದೇ ಈಗ ನನ್ನ ಪಾಲಿನ ಹೀರೋ. ಅ. 18ರಂದು ನನ್ನ ಹುಟ್ಟುಹಬ್ಬ. ಅದಕ್ಕೂ ಮುನ್ನ ಕ್ರಚಸ್​ನಿಂದ ಹೊರಬರಬೇಕು ಅಂತ ನಿರ್ಧರಿಸಿದ್ದೇನೆ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ರಿಷಿಕಾ.

  ದೇವಯಾನಿ ಶೀರ್ಷಿಕೆ ಬದಲು

  ಕರೋನಾಗೂ ಮುನ್ನ ರಿಷಿಕಾ ‘ದೇವಯಾನಿ’ ಚಿತ್ರದ ಮೂಲಕ ನಿರ್ದೇಶನಕ್ಕಿಳಿದಿದ್ದರು. ಆದರೆ ಕರೊನಾ, ನಂತರ ಅಪಘಾತದಿಂದಾಗಿ ಚಿತ್ರ ತಡವಾಗಿದೆ. ಹೀಗಾಗಿಯೇ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಮತ್ತೆ ಚಿತ್ರೀಕರಣಕ್ಕಿಳಿಯಲು ರಿಷಿಕಾ ಸಿದ್ಧತೆ ನಡೆಸುತ್ತಿದ್ದಾರೆ. ‘‘ದೇವಯಾನಿ’ ಚಿತ್ರದ ಶೀರ್ಷಿಕೆಯನ್ನು ‘ಓಕೆ ಮಗಾ’ ಎಂದು ಬದಲಿಸಿದ್ದೇವೆ. ಐವರು ಗೆಳೆಯರ ಗೆಳೆತನ, ಹೋರಾಟ, ಜೀವನದ ಕುರಿತ ಕತೆಯಿದು. ‘ದೇವಯಾನಿ’ ಪಾತ್ರದಲ್ಲಿ ನೀವೇ ನಟಿಸಿ ಎಂದು ಹಠ ಹಿಡಿದರು. ನಟನೆಯೇ ಬೇಡ ಅಂತಿದ್ದವಳು, ಈಗ ಮತ್ತೆ ಬಣ್ಣ ಹಚ್ಚಲಿದ್ದೇನೆ. ಈಗಾಗಲೇ ಪ್ರಮೋಷನಲ್ ಹಾಡನ್ನು ಚಿತ್ರೀಕರಿಸಿದ್ದೇವೆ. ಅದರಲ್ಲಿ ನಾನು ಕ್ರಚಸ್ ಹಿಡಿದೇ ನಟಿಸಿದ್ದೇನೆ, ಡಾನ್ಸ್ ಮಾಡಿದ್ದೇನೆ. ಹುಷಾರಾದ ಬಳಿಕವೂ ಚಿತ್ರದ ಶೂಟಿಂಗ್ ಮುಗಿಯುವವರೆಗೂ ಕ್ರಚಸ್ ಬಳಸಲೇಬೇಕಿದೆ’ ಎನ್ನುತ್ತಾರೆ. ಮೇ 20ರಿಂದ ಕೊಡಗಿನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

  ಕಲೆ ಬಿಡುವುದಿಲ್ಲ…

  ಚಿತ್ರರಂಗಕ್ಕೆ ವಾಪಸ್ಸಾಗಲು ರಿಷಿಕಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ‘ಕಲಾವಿದರು ಕಲೆಯನ್ನು ಬಿಟ್ಟರೂ, ಕಲೆ ಕಲಾವಿದರನ್ನು ಬಿಡುವುದಿಲ್ಲವಂತೆ. ಸ್ವೀಟ್ ಡೆವಿಲ್​ನಂತೆ ಕಾಡುತ್ತಿರುತ್ತದೆ. ಅಲೆಗಳಂತೆ ಬಂದು ಕಲಾವಿದರನ್ನು ತನ್ನೊಂದಿಗೆ ಕರೆದೊಯ್ಯುತ್ತದೆ,’ ಎನ್ನುತ್ತಾರವರು.

  ಆಗುವುದೆಲ್ಲವೂ ಒಳ್ಳೆಯದಕ್ಕೇ…

  ಚಿಕಿತ್ಸೆಯ ಸಮಯದಲ್ಲಿ ಮಾನಸಿಕ ಅನುಭವಗಳ ಬಗ್ಗೆ ಹೇಳಿಕೊಳ್ಳುವ ರಿಷಿಕಾ, ‘ಅಪಘಾತವಾದ ಮೊದಲು ಕೆಲವು ತಿಂಗಳು ತುಂಬ ಬೇಜಾರಾಗುತ್ತಿತ್ತು. ಬೇಜಾರಾಗಿ ಆಗಿ ಆಮೇಲೆ ಒಂದು ಖುಷಿ ಸಿಗುತ್ತದೆ. ಆ ಖುಷಿಗಾಗಿ ಕಾಯಬೇಕು. ಗಾಯ ವಾಸಿಯಾಗುವಾಗ ನೋವಾಗುತ್ತದೆ. ಅದನ್ನು ತಡೆದುಕೊಳ್ಳಬೇಕು. ಅಳು, ಬೇಸರಗಳ ನಡುವೆ ಸಾಗಬೇಕು. ಬಳಿಕ ತಾನಾಗಿಯೇ ಎಲ್ಲ ಸರಿಹೋಗುತ್ತದೆ. ಹಲವರು ನನಗೆ ಹೀಗಾಗಬಹುದು, ಹಾಗಾಗಬಹುದು ಅಂತ ಹೆದರಿಸಿದ್ದರು. ಆದರೆ ಈಗ ಎಲ್ಲವೂ ಒಳ್ಳೆಯದೇ ಆಗುತ್ತಿದೆ. ನಾನು ಸಿನಿಮಾಗೆ ಬರುವುದಿಲ್ಲ ಅಂತಂದುಕೊಂಡಿದ್ದೆ, ಆದರೆ ಈಗ ವಾಪಸ್ ಬರುತ್ತಿದ್ದೇನೆ. ಜೀವನ ನನಗೆ ಏನೋ ದೊಡ್ಡ ಉಡುಗೊರೆ ನೀಡಲೆಂದೇ ಈ ಸಣ್ಣ ತ್ಯಾಗ ಕೇಳಿದೆ. ಮುಂದೆ ಎಲ್ಲವೂ ಒಳ್ಳೆಯದೇ ಆಗುತ್ತದೆ..’ ಎಂದು ಮೌನವಾಗುತ್ತಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts