ತುಪ್ಪದ ಹುಡುಗಿಗೆ ದಶಕದ ಸಂಭ್ರಮ

ನಟಿ ರಾಗಿಣಿ ‘ವೀರ ಮದಕರಿ’ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿ ಬರೋಬ್ಬರಿ 10 ವರ್ಷಗಳಾದವು. ದಶಕದ ಜರ್ನಿಯಲ್ಲಿ ಬಹುತೇಕ ಎಲ್ಲ ಸ್ಟಾರ್ ನಟರ ಜತೆ ಸಿನಿಮಾ ಮಾಡಿದ ಹೆಚ್ಚುಗಾರಿಕೆ ಅವರದ್ದು. ಇದೀಗ ಆ 10 ವರ್ಷಗಳ ಏರಿಳಿತದ ಪ್ರಯಾಣವನ್ನು ನಮಸ್ತೆ ಬೆಂಗಳೂರು ಜತೆ ರಾಗಿಣಿ ನೆನಪು ಮಾಡಿಕೊಂಡಿದ್ದಾರೆ.

ರಾಗಿಣಿ ಹುಟ್ಟಿ ಬೆಳೆದಿದ್ದು ಪಂಜಾಬ್​ನಲ್ಲಾದರೂ, ಸಿನಿಮಾ ನಂಟು ಬೆಳೆಸಿಕೊಂಡಿದ್ದು ಸ್ಯಾಂಡಲ್​ವುಡ್​ನಿಂದ. ಮೊದಲು ಸಿನಿಮಾ ಅಂದ್ರೆ ಅಷ್ಟಕಷ್ಟೇ ಅಂತಿದ್ದ ರಾಗಿಣಿ, ನಂತರ ಅದನ್ನೇ ವೃತ್ತಿಯನ್ನಾಗಿಸಿಕೊಂಡರು. ‘ನನ್ನ ಮೊದಲ ಸಿನಿಮಾ ‘ವೀರ ಮದಕರಿ’ ಮಾಡುವಾಗ ಕನ್ನಡದ ಒಂದು ಶಬ್ಧವೂ ಬರುತ್ತಿರಲಿಲ್ಲ. ಸುಮ್ಮನೆ ಎಲ್ಲದಕ್ಕೂ ತಲೆ ಅಲ್ಲಾಡಿಸುತ್ತಿದ್ದೆ. ಸುದೀಪ್ ಅವರೇ ಎಲ್ಲವನ್ನೂ ಹೇಳಿಕೊಟ್ಟಿದ್ದರು. ಅಂದಿನಿಂದ ಇಂದಿನವರೆಗಿನ ಪಯಣವನ್ನು ನೆನಪಿಸಿಕೊಂಡರೆ ಒಂದು ರೀತಿ ಹಿತವೆನಿಸುತ್ತದೆ. ಮೂಲ ಪಂಜಾಬಿ ಆದರೂ, ನಾನೀಗ ಕನ್ನಡತಿ ಆಗಿದ್ದೇನೆ. ತಂತ್ರಜ್ಞರು, ಪ್ರೊಡಕ್ಷನ್ ಹುಡುಗರಿಂದಲೇ ಹೆಚ್ಚು ಕನ್ನಡ ಕಲಿತಿದ್ದೇನೆ. ಇದೀಗ ನಿರರ್ಗಳವಾಗಿ ಕನ್ನಡ ಮಾತನಾಡುತ್ತೇನೆ’ ಎಂದು ಕನ್ನಡ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ ರಾಗಿಣಿ.

ಕರ್ನಾಟಕದ ಜನತೆಗೆ ಕೋಟಿ ಧನ್ಯವಾದ
‘ನನಗೆ ಈಗಲೂ ಸರಿಯಾಗಿ ನೆನಪಿದೆ 2009ರ ಮಾರ್ಚ್ 20ರಂದು ‘ವೀರ ಮದಕರಿ’ ಸಿನಿಮಾ ಬಿಡುಗಡೆ ಆಗಿತ್ತು. ಆ ದಿನವನ್ನು ನಾನು ಯಾವತ್ತೂ ಮರೆಯುವುದಿಲ್ಲ. ಅಂದಿನಿಂದ ಶುರುವಾದ ಪಯಣ ಇದೀಗ 10 ವರ್ಷ ತಲುಪಿದೆ ಎಂದರೆ ಸಣ್ಣ ವಿಷಯ ಅಲ್ಲ. ಅದೆಲ್ಲದಕ್ಕೂ ಕಾರಣ ಕನ್ನಡಿಗರು. ಅವರಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿರುವುದು. ನನ್ನ ಸಿನಿಮಾಗಳನ್ನು ನೋಡಿ ಇಷ್ಟಪಟ್ಟಿದ್ದಾರೆ. ಅವರ ಮನಸ್ಸಿನಲ್ಲಿ ಜಾಗ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ ಹೇಳದಿದ್ದರೆ ಈ ದಶಕದ ಪಯಣಕ್ಕೆ ಅರ್ಥ ಸಿಗುವುದಿಲ್ಲ’ ಎನ್ನುವ ರಾಗಿಣಿಗೆ ಕರ್ನಾಟಕದ ಮೇಲೆ ದೊಡ್ಡ ಅಭಿಮಾನವಿದೆಯಂತೆ .

ನನ್ನ ಸಾಹಸಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು…
ಕರಿಯರ್ ಆರಂಭದಲ್ಲಿ ಗ್ಲಾಮರಸ್ ಪಾತ್ರಗಳಿಗಷ್ಟೇ ಸೀಮಿತವಾಗಿದ್ದ ರಾಗಿಣಿ, ಕ್ರಮೇಣ ಆ ಪರಿಧಿಯನ್ನ ದಾಟಿ ಆಚೆ ಬಂದರು. ಆಗ ನಾಯಕಿ ಪ್ರಧಾನ ಸಿನಿಮಾಗಳ ಅವಕಾಶಗಳು ಅವರನ್ನು ಅರಸಿಕೊಂಡು ಬಂದವು. ಒಂದರ ಮೇಲೊಂದರಂತೆ ಸಿನಿಮಾ ಮಾಡಿದರು. ‘ಖುಷಿಯ ವಿಚಾರವೆನೆಂದರೆ ‘ರಾಗಿಣಿ’ ಶೀರ್ಷಿಕೆಯಲ್ಲಿ ಸಿನಿಮಾ ಆಯಿತು. ನಾನು ಮಾಡುವ ಸಾಹಸ ಕಂಡು ಪ್ರೇಕ್ಷಕರು ಚಪ್ಪಾಳೆ ತಟ್ಟಿದರು. ಡೈಲಾಗ್​ಗೆ ಮೆಚ್ಚುಗೆ ಸೂಚಿಸಿದರು. ನಟಿಯಾಗಿ ಮನರಂಜನೆ ನೀಡುವುದು ನನ್ನ ಉದ್ದೇಶ. ಅದನ್ನು ಸಿನಿಮಾಗಳ ಮೂಲಕ ನೀಡಿದ್ದೇನೆ’ ಎನ್ನುತ್ತಾರೆ.

ಪಯಣದಲ್ಲಿ ಕೆಲ ಅಡೆತಡೆಗಳೂ ಇದ್ದವು!
ಆರಂಭದಲ್ಲಿ ಸಾಲು ಸಾಲು ಅವಕಾಶಗಳ ಜತೆಗೆ ಅಷ್ಟೇ ಪ್ರಮಾಣದ ಕಷ್ಟವೂ ರಾಗಿಣಿಗೆ ಎದುರಾಗಿತ್ತಂತೆ. ಹಾಗಂತ ಯಾವತ್ತೂ ಆ ಕಷ್ಟವನ್ನು ಮನಸ್ಸಿಗೆ ತೆಗೆದುಕೊಂಡಿಲ್ಲ ಎನ್ನುವುದು ಅವರ ಅಭಿಪ್ರಾಯ. ‘ಪ್ರತಿ ಕ್ಷೇತ್ರದಲ್ಲೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಅದಕ್ಕೆ ಸಿನಿಮಾ ಕ್ಷೇತ್ರವೂ ಹೊರತಲ್ಲ. ಕಷ್ಟಪಟ್ಟಿದ್ದೇನೆ. ಅವಮಾನಗಳನ್ನು ಎದುರಿಸಿದ್ದೇನೆ. ಬಳಿಕ ಗೌರವವನ್ನೂ ಸ್ವೀಕರಿಸಿದ್ದೇನೆ. ಇಡೀ ಪಯಣವೇ ಏರಿಳಿತದಂತಿದೆ’ ಎನ್ನುತ್ತಾರೆ .

ನನಗೆ ಮೀಟೂ ಅನುಭವವಾಗಿಲ್ಲ!
ಕೆಲ ತಿಂಗಳ ಹಿಂದೆ ಸಿನಿಮಾ ಕ್ಷೇತ್ರದಲ್ಲಿ ಮೀಟೂ ಬಿರುಗಾಳಿ ಬೀಸಿತ್ತು. ಆರೋಪ-ಪ್ರತ್ಯಾರೋಪಗಳ ಮಳೆಯೇ ಸುರಿದಿತ್ತು. ಆ ಬಗ್ಗೆ ರಾಗಿಣಿ ಸಹ ಮಾತನಾಡಿದ್ದಾರೆ. ‘ನನಗೆ ಮೀಟೂ ಅನುಭವ ಆಗಿಲ್ಲ. ಆ ರೀತಿ ಆಗದೆ ಇರುವುದಕ್ಕೆ ದೇವರ ಆಶೀರ್ವಾದ, ನನ್ನೊಳಗಿನ ಶಕ್ತಿ ಅಥವಾ ನನ್ನ ಬೋಲ್ಡ್​ನೆಸ್ ಕಾರಣ ಇರಬಹುದು. ಇಂಥ ಪ್ರಕರಣಗಳಿಂದ ನನಗೆ ಯಾವತ್ತೂ ಅಸುರಕ್ಷತೆಯ ಭಾವ ಕಾಡಿಲ್ಲ. ಚಿತ್ರರಂಗ ಬಿಟ್ಟುಬಿಡೋಣ ಅಂತಲೂ ಅನಿಸಿಲ್ಲ’ ಎಂಬುದು ರಾಗಿಣಿ ಮಾತು.