ಮುಖ ಮುಚ್ಚಿಕೊಂಡು ರಚಿತಾ ಮೆಟ್ರೋ ಪಯಣ

ಬೆಂಗಳೂರು: ನಟಿ ರಚಿತಾ ರಾಮ್ ಚಂದನವನದ ಬಹುಬೇಡಿಕೆಯ ನಟಿ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗಲೇ ದಸರಾ ಹಬ್ಬದ ದಿನ ಯಾರಿಗೂ ಗೊತ್ತಾಗದಂತೆ ಬೆಂಗಳೂರು ಸುತ್ತಿದ್ದಾರೆ. ಸ್ನೇಹಿತೆಯ ಜತೆ ಮೆಟ್ರೋ ಏರಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇಷ್ಟೆಲ್ಲವನ್ನೂ ಅವರು ಮಾಡಿದ್ದು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಅಂದರೆ ನೀವು ನಂಬಲೇಬೇಕು. ಸಿನಿಮಾ ತಾರೆಯರು ಎಲ್ಲೆಂದರಲ್ಲಿ ಓಡಾಡುವುದು ಕಡಿಮೆ. ಹೋದಲ್ಲೆಲ್ಲ ಅಭಿಮಾನಿಗಳು ಸುತ್ತುವರಿಯುವುದರಿಂದ ಖಾಸಗಿ ಬದುಕಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಆ ಸಾಹಸಕ್ಕಿಳಿಯಲು ಹಿಂಜರಿಯುತ್ತಾರೆ. ಹಾಗಾಗಿ ಸಾರ್ವಜನಿಕ ಜೀವನದಿಂದ ಸದಾ ಅಂತರ ಕಾಯ್ದುಕೊಂಡಿರುತ್ತಾರೆ. ಯಾರಿಗೂ ಕಾಣದಂತೆ ವೇಷ ಮರೆಸಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡಿ ಬರುತ್ತಾರೆ. ಈಗ ಮುಖಕ್ಕೆ ಸ್ಕಾರ್ಪ್ ಕಟ್ಟಿಕೊಂಡು ಮೆಟ್ರೋ ಏರಿ ಬಹುದಿನಗಳ ಆಸೆಯನ್ನು ರಚಿತಾ ಈಡೇರಿಸಿಕೊಂಡಿದ್ದಾರೆ. ಗೆಳತಿ ತೇಜು ಕ್ರಾಂತಿ ಜತೆ ಮೆಟ್ರೋದಲ್ಲಿ ಪ್ರಯಾಣಿಸಿ ಕೆಲವು ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ‘ಆಯುಷ್ಮಾನ್ ಭವ’, ‘100’, ‘ಏಪ್ರಿಲ್’, ‘ಏಕ್ ಲವ್ ಯಾ’ ಮುಂತಾದ ಸಿನಿಮಾ ಕೆಲಸಗಳಲ್ಲಿ ರಚಿತಾ ತೊಡಗಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *