More

    ಧ್ಯಾನದಿಂದ ಮನಸನ್ನು ಚಾರ್ಜ್ ಮಾಡಿಕೊಳ್ಳಿ..; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​​ನಲ್ಲಿ ನಟಿ ಪ್ರೇಮಾ..

    ಧ್ಯಾನದಿಂದ ಮನಸನ್ನು ಚಾರ್ಜ್ ಮಾಡಿಕೊಳ್ಳಿ..; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​​ನಲ್ಲಿ ನಟಿ ಪ್ರೇಮಾ..ನಾವು ಮೊದಲು ಪ್ರೀತಿಸುವುದನ್ನು ಕಲಿಯಬೇಕು. ಬೇರೆಯವರನ್ನು ಪ್ರೀತಿಸುವುದರ ಜತೆಗೆ, ನಮ್ಮನ್ನೂ ನಾವು ಪ್ರೀತಿಸಬೇಕು. ಏಕೆಂದರೆ, ಮೊದಲು ನಾವು ನಮ್ಮನ್ನು ಪ್ರೀತಿಸಿಕೊಂಡ ನಂತರ ಬೇರೆಯವರನ್ನು ಪ್ರೀತಿಸುವುದಕ್ಕೆ ಸಾಧ್ಯವಾಗುತ್ತದೆ. ನಮ್ಮ ಮೇಲೆ ನಮಗೇ ಪ್ರೀತಿ ಇಲ್ಲ ಎಂದರೆ, ಬೇರೆಯವರನ್ನು ಹೇಗೆ ಪ್ರೀತಿಸುವುದಕ್ಕೆ ಸಾಧ್ಯ?

    ನಮ್ಮ ಆರೋಗ್ಯದ ಮಹತ್ವ ನಮಗೆ ಯಾವಾಗ ಗೊತ್ತಾಗುತ್ತದೆ ಗೊತ್ತಾ? ಅನಾರೋಗ್ಯದಿಂದ ಆಸ್ಪತ್ರೆಗೆ ಅಡ್ಮಿಟ್ ಆದಾಗಲೇ. ಅಲ್ಲಿಯವರೆಗೂ ಕೆಲಸದ ಬಗ್ಗೆ ಬಹಳ ಫೋಕಸ್ ಮಾಡುತ್ತೇವೆ. ಕೆರಿಯರ್ ಬಗ್ಗೆ, ಸ್ಟೇಟಸ್ ಬಗ್ಗೆ, ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಹೆಚ್ಚು ಗಮನಹರಿಸಿರುತ್ತೇವೆ ಮತ್ತು ಇದರಿಂದ ಆರೋಗ್ಯವನ್ನು ಕಡೆಗಣಿಸಿರುತ್ತೇವೆ. ಕೆಲಸ ಮತ್ತು ಒತ್ತಡದಿಂದಾಗಿ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ನಮಗೇನು ಬೇಕು, ಏನು ಬೇಡ ಎಂದು ಯೋಚಿಸುವುದಕ್ಕೂ ಹೋಗುವುದಿಲ್ಲ. ಯಾವಾಗ ನಾವು ನಮ್ಮ ದೇಹವನ್ನು ಪ್ರೀತಿಸುತ್ತೇವೋ, ಆಟೋಮ್ಯಾಟಿಕ್ ಆಗಿ ನಮ್ಮ ಕೆಲಸ, ಕುಟುಂಬ ಎಲ್ಲವನ್ನೂ ಪ್ರೀತಿಸುತ್ತೇವೆ.

    Stress is the main cause of unhappiness ಎಂಬ ಮಾತಿದೆ. ಒತ್ತಡ ಎನ್ನುವುದು ಆರೋಗ್ಯದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಇವತ್ತು ಬಹಳಷ್ಟು ಸಮಸ್ಯೆಗಳಿಗೆ ಕಾರಣ ಈ ಒತ್ತಡ ಎಂದರೆ ತಪ್ಪಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಪ್ರತಿಯೊಬ್ಬರೂ ಒತ್ತಡದಲ್ಲಿರುತ್ತೇವೆ. ಎಷ್ಟೋ ಬಾರಿ ಒತ್ತಡದಲ್ಲಿ ನನಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ ಎಂದರೆ, ಧ್ಯಾನ ಮಾಡುತ್ತೇನೆ. ಏನು ಮಾಡಬೇಕು, ಏನು ಮಾಡಬಾರದು ಎಂದು ಯೋಚಿಸುತ್ತೇನೆ. ಆ ನಂತರ ಒಂದು ತೀರ್ವನಕ್ಕೆ ಬರುತ್ತೇನೆ. ಯಾವುದು ಸರಿ, ಯಾವುದು ತಪು್ಪ ಎಂದು ಚೆನ್ನಾಗಿ ಅರ್ಥವಾಗಿಬಿಡುತ್ತದೆ.

    ನಮ್ಮ ಬಗ್ಗೆ ಯಾರೋ ಏನೋ ಮಾತಾಡಿದಾಗ, ಬಹಳ ಬೇಗ ಹರ್ಟ್ ಆಗುತ್ತೇವೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗುತ್ತೇವೆ. ಅದರಿಂದ ನಮಗೆ ನಿದ್ದೆಯೇ ಬರುವುದಿಲ್ಲ, ಊಟ ಸೇರುವುದಿಲ್ಲ. ಅವರು ಯಾಕೆ ನಮ್ಮ ಬಗ್ಗೆ ಹಾಗೆ ಹೇಳಿದರು ಎಂದು ಯೋಚಿಸಿ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತೇವೆ. ಅದರ ಬದಲು, ಆ ವಿಷಯವನ್ನು ಮನಸ್ಸಿನಿಂದ ತೆಗೆದು ಹಾಕುವ ಕೆಲಸವನ್ನು ಮಾಡಿದರೆ, ಜೀವನ ನೆಮ್ಮದಿಯಾಗಿರುತ್ತದೆ. ಆ ವಿಷಯವನ್ನು ಮನಸ್ಸಿಗೆ ತೆಗೆದುಕೊಂಡರೆ ತಾನೇ ನೋವಾಗುವುದು? ಅದರ ಬದಲು ಮನಸ್ಸಿಗೆ ತೆಗೆದುಕೊಳ್ಳದಿದ್ದರೆ ಆಯಿತು. ನಮ್ಮ ಬಗ್ಗೆ ಯಾರು ಬೇಕಾದರೂ, ತಮಗಿಷ್ಟ ಬಂದಂತೆ ಮಾತನಾಡಬಹುದು. ಆದರೆ, ಅದನ್ನು ತೆಗೆದುಕೊಳ್ಳುವುದು, ಬಿಡುವುದು, ನಮ್ಮ ಕೈಯಲ್ಲೇ ಇರುತ್ತದೆ. ನನ್ನ ಬಗ್ಗೆಯೇ ಹೇಳುವುದಾದರೆ, ಮೊದಲು ಸಣ್ಣಸಣ್ಣ ವಿಷಯಗಳಿಗೂ ಹರ್ಟ್ ಆಗುತ್ತಿದ್ದೆ. ಈಗ ಸಾಕಷ್ಟು ಬದಲಾಗಿದ್ದೇನೆ ಮತ್ತು ಸ್ಟೆಡಿಯಾಗಿದ್ದೇನೆ. ಇದು ಸಾಧ್ಯವಾಗಿದ್ದು ಧ್ಯಾನದಿಂದ.

    ನಾನು ಮೊದಲಿನಿಂದಲೂ ಯೋಗ, ಧ್ಯಾನ ಮಾಡುತ್ತಲೇ ಇದ್ದೇನೆ. ಆದರೆ, ಇತ್ತೀಚೆಗೆ ಸ್ವಲ್ಪ ಆಳಕ್ಕೆ ಇಳಿದಿದ್ದೇನೆ. ಧ್ಯಾನ ಮಾಡುವಾಗ ಉತ್ತರಗಳು ಸಿಗುತ್ತವೆ. ಅದಕ್ಕೆ ಸಮಯ ಬೇಕು ಮತ್ತು ಸಾಕಷ್ಟು ಆಳಕ್ಕೆ ಇಳಿಯಬೇಕು. ಮೈಸೂರಿನಲ್ಲಿ ಓಶೋ ಸನ್ನಿಧಿಗೆ ಹೋದಾಗ, ಧ್ಯಾನದ ಬಗ್ಗೆ ಮಾತನಾಡುವಾಗ ನನಗೆ ಸ್ಪೂರ್ತಿ ಸಿಕ್ಕಿತು. ಮುಂಚೆ ಯೋಗ, ಧ್ಯಾನ ಮಾಡುತ್ತಿದ್ದೆ. ಮೈಸೂರಿಗೆ ಹೋದ ಮೇಲೆ ನನಗೆ ಅದರ ಅನುಭವವಾಯಿತು. ಅದರಷ್ಟು ನೆಮ್ಮದಿ ಬೇರೆಲ್ಲೂ ಸಿಗುವುದಿಲ್ಲ. ಅಲ್ಲಿಂದ ನನ್ನ ಜೀವನ ಬಹಳ ಬದಲಾಗಿದೆ. ನಾವು ಜೀವನದಲ್ಲಿ ನಿರೀಕ್ಷೆಗಳನ್ನು ಮಾಡುತ್ತಲೇ ಇರುತ್ತೇವೆ. ಇದು ಮಾಡಬೇಕು, ಅದು ಮಾಡಬೇಕು ಎಂದು ಹಾತೊರೆಯುತ್ತಲೇ ಇರುತ್ತೇವೆ. ಯಾವಾಗ ಒಂದು ಫುಲ್​ಸ್ಟಾಪ್ ಸಿಗುತ್ತದೋ, ಆಗ ಧ್ಯಾನದ ಬಗ್ಗೆ ಮನಸ್ಸು ಹೋಗುತ್ತದೆ. ನನ್ನ ಜೀವನದಲ್ಲಿ ಕೆಲವು ವಿಷಯಗಳನ್ನು ಮಾಡಬೇಕು ಎಂದು ಅಂದುಕೊಂಡಿದ್ದೆ. ಅದರಂತೆ ಮಾಡಿಕೊಂಡು ಬಂದೆ. ನನಗೆ ಸಿಲ್ವರ್ ಜ್ಯೂಬಿಲಿ ಅಂದರೇನು ಗೊತ್ತಿರಲಿಲ್ಲ, ಗೋಲ್ಡನ್ ಜ್ಯೂಬಿಲಿ ಅಂದರೇನು ಎಂದು ಗೊತ್ತಿರಲಿಲ್ಲ. ಇವೆರಡನ್ನೂ ನೋಡಿದ ಮೇಲೆ, ಜೀವನದಲ್ಲಿ ಇನ್ನೇನು ಸಾಧನೆ ಮಾಡುವುದಕ್ಕಿದೆ ಎಂದನಿಸುವುದಕ್ಕೆ ಶುರುವಾಯಿತು. ಅಲ್ಲಿಗೆ ನಿರೀಕ್ಷೆ ಅಂತ್ಯವಾಯಿತು. ಆ ನಂತರ ಶಾಂತಿಯತ್ತ ಮುಖ ಮಾಡಿದೆ. ನೆಮ್ಮದಿ ಇದ್ದಾಗ ಜೀವನದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಗಳು ತನ್ನಿಂತಾನೇ ಸಿಗುತ್ತ ಹೋಗುತ್ತವೆ.

    ಧ್ಯಾನ ಎಂದರೆ ಬರೀ ಆಧ್ಯಾತ್ಮಿಕವಾಗಿ ಮಾತ್ರ ನೋಡುವುದಲ್ಲ. ನಾವು ಪ್ರತಿದಿನ ಕೆಲಸ ಮಾಡುತ್ತಲೇ ಇರುತ್ತೇವೆ. ಬರೀ ಕೆಲಸ ಮಾಡುವುದಷ್ಟೇ ಅಲ್ಲ, ನಾವು ಮೊದಲು ಪ್ರೀತಿಸುವುದನ್ನು ಕಲಿಯಬೇಕು. ಬೇರೆಯವರನ್ನು ಪ್ರೀತಿಸುವುದರ ಜತೆಗೆ, ನಮ್ಮನ್ನೂ ನಾವು ಪ್ರೀತಿಸಬೇಕು. ಏಕೆಂದರೆ, ಮೊದಲು ನಾವು ನಮ್ಮನ್ನು ಪ್ರೀತಿಸಿಕೊಂಡ ನಂತರ ಬೇರೆಯವರನ್ನು ಪ್ರೀತಿಸುವುದಕ್ಕೆ ಸಾಧ್ಯವಾಗುತ್ತದೆ. ನಮ್ಮ ಮೇಲೆ ನಮಗೇ ಪ್ರೀತಿ ಇಲ್ಲ ಎಂದರೆ, ಬೇರೆಯವರನ್ನು ಹೇಗೆ ಪ್ರೀತಿಸುವುದಕ್ಕೆ ಸಾಧ್ಯ? ಆ ಪ್ರೀತಿ ಬರುವುದು ಧ್ಯಾನದಿಂದ ಎಂಬುದು ನನ್ನ ಬಲವಾದ ನಂಬಿಕೆ.

    ಧ್ಯಾನ ಮಾಡುವುದಕ್ಕೆ ಇಷ್ಟು ವಯಸ್ಸು ಆಗಿರಬೇಕು ಅಂತೇನಿಲ್ಲ. ಐದು ವರ್ಷದ ಮಕ್ಕಳಿರುವುದರಿಂದಲೇ ಧ್ಯಾನ ಅಭ್ಯಾಸ ಮಾಡಿಸಬಹುದು. ಪ್ರತಿಯೊಬ್ಬರ ಜೀವನದಲ್ಲಿ ಏನೋ ತಪು್ಪಗಳಿರುತ್ತವೆ, ಸಾಕಷ್ಟು ಏರುಪೇರುಗಳಾಗುತ್ತಿರುತ್ತವೆ. ಅವೆಲ್ಲ ಆಗಿ ಧ್ಯಾನದ ಮೊರೆ ಹೋಗುವುದಕ್ಕಿಂತ ಮೊದಲೇ ಹೋದರೆ, ಸಮಸ್ಯೆಗಳನ್ನು ನಿರ್ವಹಿಸುವ ಶಕ್ತಿ-ಸಾಮರ್ಥ್ಯ ಇರುತ್ತದೆ. ಹಾಗಾಗಿ, ಚಿಕ್ಕ ವಯಸ್ಸಿನಿಂದಲೇ ಧ್ಯಾನ ಮಾಡಿದರೆ, ಆಗ ಮಕ್ಕಳು ಬೆಳೆಯುವ ರೀತಿಯೇ ಬೇರೆ ರೀತಿ ಇರುತ್ತದೆ. ಮನುಷ್ಯರು ಡಿಪ್ರೆಶನ್​ಗೆ ಒಳಗಾಗುತ್ತಾರಲ್ಲ, ಧ್ಯಾನದ ಬಗ್ಗೆ ಗೊತ್ತಿದ್ದರೆ, ಈ ಡಿಪ್ರೆಶನ್​ಗೆ ಹೋಗುವುದಿಲ್ಲ. ಏಕೆಂದರೆ, ಧ್ಯಾನ ಮಾಡುವುದರಿಂದ ಮನಸ್ಸು ಸ್ಟೆಡಿ ಆಗುತ್ತದೆ.

    ಕೆಲವರಿಗೆ ಫೋಕಸಿಂಗ್ ಗೊತ್ತಿರುವುದಿಲ್ಲ, ಜೀವನದಲ್ಲಿ ಯಾವ ದಿಕ್ಕಿಗೆ ಹೋಗಬೇಕು ಎಂದು ಗೊತ್ತಿರುವುದಿಲ್ಲ. ಧ್ಯಾನ ಮಾಡುವುದರಿಂದ ಫೋಕಸ್ ಸಿಗುತ್ತದೆ ಮತ್ತು ಜೀವನದಲ್ಲಿ ಏನೇನೋ ಸಾಧನೆ ಮಾಡಬೇಕು ಎಂಬ ಆಸೆ ಇರುತ್ತದೋ, ಅವೆಲ್ಲವೂ ಸಾಧ್ಯವಾಗುತ್ತದೆ. ಏನು ಮಾಡಬೇಕು ಅಥವಾ ಮಾಡಬಾರದು ಎಂದು ಯೋಚಿಸಿದರೆ, ಅದಕ್ಕೊಂದು ಉತ್ತರ ಸಿಗುತ್ತದೆ. ಧ್ಯಾನ ಎನ್ನುವುದು ಟಾನಿಕ್ ತರಹ. ನಮ್ಮ ಮನಸ್ಸಿನಿಂದ ಟಾಕ್ಸಿನ್​ಗಳನ್ನು ತೆಗೆಯುತ್ತದೆ ಮತ್ತು ನೆಗೆಟಿವ್ ಯೋಚನೆಗಳು ಮನಸ್ಸಿನಿಂದ ದೂರವಾಗುತ್ತವೆ. ಪಾಸಿಟಿವ್ ಯೋಚನೆಗಳು ಹೆಚ್ಚಾಗುತ್ತವೆ. ಯಾವುದೇ ವಿಷಯವಾಗಲೀ ಗೊಂದಲ ಸಹಜ. ಒಂದು ಕೆಲಸ ಮಾಡಿದರೆ ಹೇಗೋ, ಏನು ತಪ್ಪಾಗುತ್ತದೋ ಎಂದು ನಕಾರಾತ್ಮಕವಾಗಿ ಯೋಚಿಸುತ್ತ ಕುಳಿತುಬಿಟ್ಟರೆ ಏನೂ ಸಾಧಿಸುವುದಕ್ಕೆ ಆಗುವುದಿಲ್ಲ. ಏಕೆಂದರೆ, ನಾವು ಹೆಜ್ಜೆ ಇಡದೇ, ನಾವು ಮಾಡುತ್ತಿರುವ ಕೆಲಸವು ಸರಿಯೋ, ತಪ್ಪೋ ಎಂದು ನಮಗೆ ಗೊತ್ತಾಗುವುದಿಲ್ಲ. ಭಯದಿಂದ ಹಾಗೆಯೇ ಉಳಿದುಬಿಡುತ್ತೇವೆ. ಧ್ಯಾನದಿಂದ ಭಯ, ಆತಂಕ ಹೋಗುತ್ತದೆ. ಏಕಾಗ್ರತೆ ಹೆಚ್ಚುತ್ತದೆ. ಫೋಕಸ್ ಹೆಚ್ಚಾಗುತ್ತದೆ ಮತ್ತು ಜೀವನದಲ್ಲಿ ಅಂದುಕೊಂಡಿದ್ದು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ.

    ನಾವು ಹೇಗೆ ಕೆಲಸವನ್ನು ಪ್ರೀತಿಸುತ್ತೇವೋ, ಅದೇ ರೀತಿ ಧ್ಯಾನವನ್ನೂ ಪ್ರೀತಿಸಬೇಕು. ನಾವು ಹೇಗೆ ಪ್ರತಿದಿನ ಫೋನ್ ಚಾರ್ಜ್ ಮಾಡುತ್ತೇವೋ, ಅದೇ ರೀತಿ ಮನಸ್ಸನ್ನು ಸಹ ಚಾರ್ಜ್ ಮಾಡಿಕೊಳ್ಳಬೇಕು. ಆ ಚಾರ್ಜಿಂಗ್ ಮಾಡುವುದಕ್ಕೆ ಧ್ಯಾನದಿಂದ ಮಾತ್ರ ಸಾಧ್ಯ. ಹಾಗೆ ಚಾರ್ಜ್ ಮಾಡಿದರೆ, ಇಡೀ ದಿನವೆಲ್ಲ ಬಹಳ ಎನರ್ಜೆಟಿಕ್ ಆಗಿ ಇರಬಹುದು. ನಾವು ಅರ್ಧ ಕುಸಿಯುವುದು ನೆಗೆಟಿವ್ ಯೋಚನೆಗಳಿಂದಲೇ. ನಾವು ನೆಗೆಟಿವ್ ಆಗಿ ಯೋಚಿಸುವುದರಿಂದ ಮತ್ತು ಬೇರೆಯವರ ಮಾತುಗಳ ಬಗ್ಗೆ ಅತಿಯಾಗಿ ತಲೆ ಕೆಡಿಸಿಕೊಳ್ಳುವುದರಿಂದ ನಮ್ಮ ಬ್ಯಾಟರಿಯ ಚಾರ್ಜ್ ಕಡಿಮೆ ಆಗುತ್ತ ಹೋಗುತ್ತದೆ. ನಮಗೆ ಎನರ್ಜಿ ಬಹಳ ಮುಖ್ಯ. ಆ ಎನರ್ಜಿ ಸಿಗಬೇಕಾದರೆ ಅದು ಧ್ಯಾನದಿಂದ ಸಾಧ್ಯ.

    (ಲೇಖಕಿ ಖ್ಯಾತ ನಟಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts