ಬೆಂಗಳೂರು: ಮಂಗಳೂರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಬಂದವರು ಮೌನ ಗುಡ್ಡೆಮನೆ. ಕನ್ನಡದ ‘ರಾಮಾಚಾರಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಆಗಮಿಸಿದ ಅವರು, ಜನಪ್ರಿಯರಾದರು. ಇದೇ ಸಮಯದಲ್ಲಿ ಅವರಿಗೆ ಕನ್ನಡ ಚಿತ್ರರಂಗವೂ ಕೈ ಬೀಸಿ ಕರೆಯಿತು. ಹಲವು ಕಥೆಗಳ ನಡುವೆ ಅವರು ಆಯ್ಕೆ ಮಾಡಿದ್ದು, ‘ಕುಲದಲ್ಲಿ ಕೀಳ್ಯಾವುದೋ’. ಕೆ. ರಾಮನಾರಾಯಣ್ ನಿರ್ದೇಶನದ ಮಡೆನೂರು ಮನು ಅಭಿನಯದ ಈ ಚಿತ್ರ ಇದೇ 23ಕ್ಕೆ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಜರ್ನಿ ಹಾಗೂ ಪಾತ್ರದ ಬಗ್ಗೆ ‘ವಿಜಯವಾಣಿ’ ಜತೆ ಖುಷಿ ಹಂಚಿಕೊಂಡ ಮೌನ, ‘‘ರಾಮಾಚಾರಿ’ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಹಲವು ಸಿನಿಮಾ ಆಫರ್‌ಗಳು ಬಂದವು. ಆದರೆ, ನಾನು ಎರಡು ದೋಣಿಯ ಮೇಲೆ ಕಾಲಿಡುವುದು ಬೇಡ ಅಂತ ಸುಮ್ಮನಾಗಿದ್ದೆ. ‘ಕುಲದಲ್ಲಿ ಕೀಳ್ಯಾವುದೋ’ ಯೋಗರಾಜ್ ಭಟ್ ಸರ್ ಅವರ ಕಥೆ ಎಂದು ಗೊತ್ತಾಗಿ ತಕ್ಷಣ ಒಪ್ಪಿಕೊಂಡೆ. ನಾನಿಲ್ಲಿ ಪಕ್ಕಾ ಹಳ್ಳಿ ಹುಡುಗಿ. ಮುಗ್ಧತೆ ಜತೆಗೆ ಗಂಭೀರವಾದ ಕ್ಯಾರೆಕ್ಟರ್. ‘ಸಂಪತ್ತಿಗೆ ಸವಾಲ್’, ‘ಕಿರಗೂರಿನ ಗಯ್ಯಳಿಗಳು’ ಚಿತ್ರಗಳ ಮಹಿಳಾ ಪಾತ್ರಗಳಂತೆಯೇ ಗಟ್ಟಿ ಪಾತ್ರ. ಪಕ್ಕಾ ದೇಶಿ ಸೊಗಡಿನ ಚಿತ್ರವಿದು. ನನ್ನದು ಮಂಗಳೂರು ಕನ್ನಡ. ಆದರೆ, ಇಲ್ಲಿ ಮಂಡ್ಯ ಸೊಗಡಿನ ಕನ್ನಡ ಮಾತನಾಡಬೇಕಿತ್ತು. ಅದಕ್ಕಾಗಿ ಸ್ವಲ್ಪ ಸಿದ್ಧತೆ ಮಾಡಿಕೊಂಡೆ. ಯಾವುದೇ ಆಗಲಿ ನಾನು ಬೇಗ ಗ್ರಹಿಸುತ್ತೇನೆ. ಮಾಡರ್ನ್ ಆಗಿದ್ದರೂ ನಾನು ಹಳ್ಳಿ ಹುಡುಗಿಯಂತಹ ಡಿ-ಗ್ಲಾಮರ್ ಪಾತ್ರ ಮಾಡಲು ಸಾಧ್ಯವಾಯಿತು. ಮೇಕಪ್, ವಸ ವಿನ್ಯಾಸ ಹೀಗೆ ನಾನಾ ಕಾರ್ಯಗಳನ್ನು ನಾನೇ ಮಾಡಿಕೊಂಡಿರುವುದು ದೊಡ್ಡ ಕಲಿಕೆಯ ಜತೆಗೆ ಒಳ್ಳೆ ಅನುಭವ ನೀಡಿದೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ.

ತಂಡದ ನಿರ್ಧಾರ ಸರಿಯಾಗಿದೆ: ಕನ್ನಡಾಭಿಮಾನವನ್ನು ಪಹಲ್ಗಾಮ್ ಉಗ್ರರಿಗೆ ಹೋಲಿಸಿದ್ದ ಬಾಲಿವುಡ್ ಗಾಯಕ ಸೋನು ನಿಗಮ್, ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ‘ಮನಸು ಹಾಡ್ತದೆ’ ಹಾಡು ಹಾಡಿದ್ದರು. ವಿವಾದದಿಂದಾಗಿ ಆ ಹಾಡಿಗೆ ಕೊಕ್ ನೀಡಲಾಯಿತು. ಈ ಬಗ್ಗೆ ಮೌನ, ‘ನಾವು ಬೆಳೆದು ಬಂದ ಹಾದಿಯನ್ನು ಎಂದಿಗೂ ಮರೆಯಬಾರದು. ಸೋನು ನಿಗಮ್‌ಗೆ ಕನ್ನಡ ಎಲ್ಲವೂ ನೀಡಿರುವಾಗ ಆ ರೀತಿ ಮಾತಾಡಿರುವುದು ಸರಿಯಲ್ಲ. ನಮ್ಮ ಚಿತ್ರಕ್ಕೆ ಅಣ್ಣಾವ್ರ ಹಾಡಿನ ಟ್ಯಾಗ್‌ಲೈನ್ ಬಳಸಿದ್ದೇವೆ. ಅಣ್ಣಾವ್ರ ಹಿರಿಮೆಯನ್ನು ನಾವು ಎತ್ತಿ ಹಿಡಿಯಬೇಕಿದೆ. ಈ ಕಾರಣಕ್ಕಾಗಿ ನಮ್ಮ ತಂಡ ತೆಗೆದುಕೊಂಡ ನಿರ್ಧಾರ ಸರಿಯಾಗಿದೆ’ ಎನ್ನುತ್ತಾರೆ.
ಮೌನ ಅಲ್ಲ, ಗಂಭೀರೆ: ಹೆಸರಿಗೆ ಮೌನ ಆದರೂ, ನಟಿ ಸ್ವಭಾವದಲ್ಲಿ ತುಂಬಾ ಗಂಭೀರ. ಆ್ಯಕ್ಟಿಂಗ್ ಜತೆಗೆ ಓದು, ಚಾರಣ ಅವರಿಗೆ ಇಷ್ಟದ ಹವ್ಯಾಸಗಳು. ‘ನನಗೆ ಟ್ರೆಕ್ಕಿಂಗ್ ಇಷ್ಟ. ಹಾಗೆಯೇ ಕಥೆ, ಕಾದಂಬರಿ ಹಾಗೂ ಬಯೋಗ್ರಫಿ ಓದುತ್ತೇನೆ. ಓದು ಅದ್ಭುತ ಅನುಭವ ನೀಡುತ್ತದೆ. ಮೊಬೈಲ್ ಗೀಳಿನಿಂದ ಹೊರಬರಲು ನಾನು ಆಯ್ಕೆ ಮಾಡಿಕೊಂಡ ಮಾರ್ಗ ಓದು. ಕುವೆಂಪು ೇವರಿಟ್ ಲೇಖಕರು. ಇನ್ನು ಸ್ವಭಾವದಲ್ಲಿ ನನ್ನನ್ನು ಹಿಟ್ಲರ್‌ಗೆ ಹೋಲಿಸುತ್ತಾರೆ’ ಎಂದು ನಗುತ್ತಾರೆ ಮೌನ ಗುಡ್ಡೆಮನೆ.