ನಟಿ ಮಧುಬಾಲ 90ರ ದಶಕದಲ್ಲಿ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದರು. ಇದೀಗ ಕೆಲ ವರ್ಷಗಳಿಂದ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ “ಅಣ್ಣಯ್ಯ’, “ರನ್ನ’, “ರೇಮೊ’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಅವರು, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲೂ ಬಿಜಿಯಾಗಿದ್ದಾರೆ. ಇಂತಹ ಮಧುಬಾಲ ಇತ್ತೀಚೆಗಷ್ಟೆ ವಿಷ್ಣು ಮಂಚು ನಾಯಕನಾಗಿರುವ, ಪ್ಯಾನ್ ಇಂಡಿಯಾ ಪೌರಾಣಿಕ ಸಿನಿಮಾ “ಕಣ್ಣಪ್ಪ’ ಚಿತ್ರತಂಡ ಸೇರಿಕೊಂಡಿದ್ದಾರೆ. ಅವರಿಲ್ಲಿ ಪನ್ನಗಾ ಎಂಬ ಹೆಸರಿನ ಬೇಡ ಕುಲದ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು ಶತ್ರುಗಳ ಸಂಹಾರಕ್ಕೆ ನಿಂತಿರುವ ಅವರ ಲುಕ್ ರಿಲೀಸ್ ಆಗಿದ್ದು, ಕುತೂಹಲ ಮೂಡಿಸಿದೆ.
ಕಾನ್ ಚಿತ್ರೋತ್ಸವದಲ್ಲಿ ರಿಲೀಸ್ ಆಗಿದ್ದ “ಕಣ್ಣಪ್ಪ’ ಟೀಸರ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಚಿತ್ರದ ಬಗ್ಗೆ ವಿಷ್ಣು ಮಂಚು, “ಇದು ಎರಡನೇ ಶತಮಾನದ ಚೋಳರ ಕಾಲದ ಕಥೆ ಎಂದು ಶಂಕರಾಚಾರ್ಯರು ಹೇಳಿದ್ದರು. 14ನೇ ಶತಮಾನದಲ್ಲಿ ಕವಿ ಧೂರ್ಜಟಿ ಈ ಬಗ್ಗೆ ಬರೆದಿದ್ದಾರೆ. 18ನೇ ಶತಮಾನದಲ್ಲಿ ಬ್ರಿಟಿಷರೂ ಇಂಗ್ಲೀಷ್ನಲ್ಲಿ ಈ ಕಥೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಇದೆಲ್ಲವನ್ನೂ ಅಧ್ಯಯನ ನಡೆಸಿ ಸಿನಿಮಾ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ವಿಷ್ಣು ಮಂಚು ಕಣ್ಣಪ್ಪ ಪಾತ್ರದಲ್ಲಿ ನಟಿಸುತ್ತಿದ್ದು, ಅಕ್ಷಯ್ ಕುಮಾರ್ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ಮೋಹನ್ ಬಾಬು, ಪ್ರಭಾಸ್, ಮೋಹನ್ ಲಾಲ್, ಶರತ್ ಕುಮಾರ್, ಮಧುಬಾಲ, ಕಾಜಲ್ ಅಗರ್ವಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಮುಕೇಶ್ ಕುಮಾರ್ ಸಿಂಗ್ ಆ್ಯಕ್ಷನ್&ಕಟ್ ಹೇಳುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಹಲವು ಭಾಷೆಗಳಲ್ಲಿ ತೆರೆಗೆ ಬರಲಿದೆ. ಇದೇ ಡಿಸೆಂಬರ್ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದ್ದು, ಸದ್ಯ ಪೋಸ್ಟ್&ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ.