ಕನಸಿನ ಸುಳಿಯಲ್ಲಿ ಕೃಷಿ ಬ್ಲ್ಯಾಂಕ್​

ಬೆಂಗಳೂರು: ‘ಲೂಸಿಯಾ’ ಚಿತ್ರದ ಮೂಲಕ ನಿರ್ದೇಶಕ ಪವನ್​ಕುಮಾರ್ ಭಿನ್ನ ಮಾದರಿಯ ಪ್ರಕಾರಕ್ಕೆ ಕೈ ಹಾಕಿ ಯಶಸ್ಸು ಕಂಡಿದ್ದರು. ಇದೇ ಹಾದಿಯಲ್ಲಿ ನಿರ್ದೇಶಕ ಸುಹಾಸ್ ಜೆ . ಸಾಗುತ್ತಿದ್ದಾರೆ. ಅವರ ನಿರ್ದೇಶನದ ಮೊದಲ ಚಿತ್ರಕ್ಕೆ ‘ಬ್ಲ್ಯಾಂಕ್​’ ಎಂದು ಶೀರ್ಷಿಕೆ ಇಟ್ಟಿದ್ದಾರೆ. ಇದು ಕೂಡ ‘ಲೂಸಿಯಾ’ ರೀತಿಯಲ್ಲೇ ಕನಸು ಮತ್ತು ವಾಸ್ತವದ ಪರಿಕಲ್ಪನೆಯನ್ನು ಹೊಂದಿದೆಯಂತೆ.

ನಟಿ ಕೃಷಿ ತಾಪಂಡ, ಪೂರ್ಣಚಂದ್ರ ಮೈಸೂರು ಪ್ರಮುಖ ಪಾತ್ರದಲ್ಲಿದ್ದಾರೆ. ಈ ಹಿಂದೆ ಅನೇಕ ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವವುಳ್ಳ ಸುಹಾಸ್​ಗೆ ಬೆಳ್ಳಿತೆರೆಯಲ್ಲಿ ‘ಬ್ಲಾ್ಯಂಕ್’ ಮೊದಲ ಪ್ರಯತ್ನ. ‘ಪ್ರತಿಯೊಬ್ಬರಿಗೂ ತಮ್ಮ ದೃಷ್ಟಿಕೋನದಲ್ಲಿ ತಾವು ಸರಿ ಎಂಬ ಭಾವನೆ ಇರುತ್ತದೆ. ತಮ್ಮನ್ನು ಇತರರ ಎದುರು ಒಳ್ಳೆಯವರಂತೆ ತೋರಿಸಿಕೊಳ್ಳುತ್ತಾರೆ, ಇತರರನ್ನು ಖಳರಂತೆ ಬಿಂಬಿಸುತ್ತಾರೆ. ಲುಸಿಡ್ ಡ್ರೀಮಿಂಗ್ ಕಾನ್ಸೆಪ್ಟ್ ಮೇಲೆ ಈ ಸಿನಿಮಾ ಸಾಗಲಿದೆ’ ಎಂದು ಮಾಹಿತಿ ನೀಡುವ ನಿರ್ದೇಶಕರು, ‘ಲೂಸಿಯಾ’ ಶೈಲಿಯ ಸಿನಿಮಾ ಇದು ಎಂದೂ ಹೇಳಿಕೊಳ್ಳುತ್ತಾರೆ. ‘ಕನ್ನಡದಲ್ಲಿ ಲುಸಿಡ್ ಡ್ರೀಮಿಂಗ್ ಕುರಿತ ಮೊದಲ ಸಿನಿಮಾ ಎಂದರೆ ‘ಲೂಸಿಯಾ’ ಒಂದೇ. ಆ ಜಾನರ್​ನ ಸಿನಿಮಾ ಇದಾಗಿರುವುದರಿಂದ, ಅದನ್ನೇ ಉದಾಹರಣೆ ನೀಡಬೇಕಿದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಚಿತ್ರ ಸಾಗಲಿದ್ದು, ಯುವ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕರು.

ಇನ್ನು, ಕೃಷಿಗೆ ಡಿಫರೆಂಟ್ ಆದ ಪಾತ್ರವಿದೆಯಂತೆ. ಹಲವು ಶೇಡ್​ಗಳಿರುವ ಪಾತ್ರವನ್ನು ನಿಭಾಯಿಸಿರುವ ಕೃಷಿ, ಇಲ್ಲಿ ಬೇರೆ ರೀತಿಯಲ್ಲಿಯೇ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಶೇ.80 ಭಾಗ ಚಿತ್ರೀಕರಣವನ್ನು ಮೈಸೂರಿನಲ್ಲಿ ಮುಗಿಸಿಕೊಳ್ಳಲಾಗಿದೆ. ಹಾಡುಗಳ ಚಿತ್ರೀಕರಣ ಬಾಕಿ ಇದೆ. ಫೋಷಕ ಪಾತ್ರಗಳಲ್ಲಿ ಭರತ್, ಪ್ರಶಾಂತ್ ಸಿದ್ಧಿ, ತೀರ್ಥ, ಸುಚೇಂದ್ರ ಪ್ರಸಾದ್, ರಶ್​ವುಲಿಕ್ ಮುಂತಾದವರು ನಟಿಸಿದ್ದಾರೆ. ‘ಬ್ಲಾ್ಯಂಕ್’ಗೆ ಎನ್.ಪಿ. ಮಂಜುನಾಥ್ ಪ್ರಸನ್ನ ಬಂಡವಾಳ ಹೂಡಿದ್ದು, ಪುರುಷೋತ್ತಮ್ ಛಾಯಾಗ್ರಹಣ ಮಾಡಿದ್ದಾರೆ.

Leave a Reply

Your email address will not be published. Required fields are marked *