ವಜ್ರದ ವ್ಯಾಪಾರಿ ನಿಗೂಢ ಸಾವು ಪ್ರಕರಣದಲ್ಲಿ ಕಿರುತೆರೆ ನಟಿಯ ವಿಚಾರಣೆ

ಮುಂಬೈ: ಮಹಾರಾಷ್ಟ್ರದ ವ್ರಜ ವರ್ತಕ ರಾಜೇಶ್ವರ್​ ಉದಾನಿ ಅವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಖ್ಯಾತ ಮಾಡೆಲ್​ ಮತ್ತು ಕಿರುತೆರೆ ನಟಿ ದೆಬೊಲಿನಾ ಬಟ್ಟಾಚಾರ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹಾರಾಷ್ಟ್ರದ ಬಿಜೆಪಿ ನಾಯಕ ಸಚಿನ್​ ಪವಾರ್​ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈತ ಸದ್ಯ ಸಾವಿಗೀಡಾಗಿರುವ ವಜ್ರದ ಉದ್ಯಮಿ ರಾಜೇಶ್ವರ್​ ಉದಾನಿ ಅವರ ಆಪ್ತನಾಗಿದ್ದ ಎನ್ನಲಾಗಿದೆ.

ಇದೇ ವಿಚಾರವಾಗಿ ನಟಿ ದೆಬೊಲಿನಾ ಬಟ್ಟಾಚಾರ್ಯ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಆದರೆ, ರಾಜೇಶ್ವರ್​ ಅವರ ಸಾವಿನಲ್ಲಿ ದೆಬೊಲಿನಾ ಅವರ ಪಾತ್ರ ಇರುವ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಕಿರುತೆರೆ ಕ್ಷೇತ್ರದ ಇನ್ನೂ ಹಲವು ನಟಿಯರನ್ನು ಇದೇ ವಿಚಾರವಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸುವ ಬಗ್ಗೆ ಪೊಲೀಸರು ಮುನ್ಸೂಚನೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಮುಂಬೈನಿಂದ ಕಾಣೆಯಾಗಿದ್ದ ವಜ್ರದ ವರ್ತಕ ರಾಜೇಶ್ವರ್​ ಉದಾನಿ ಅವರು ಮೂರು ದಿನಗಳ ನಂತರ ರಾಯ್​ಘಡದ ಅರಣ್ಯದ ಅಂಚಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣ ಮಹಾರಾಷ್ಟ್ರದಲ್ಲಿ ಭಾರಿ ಸಂಚನ ಸೃಷ್ಟಿಸಿದೆ. ಜತೆಗೇ ಕೆಲ ರಾಜಕಾರಣಿಗಳು ಮತ್ತು ಕಿರುತೆರೆ ನಟಿಯರಲ್ಲಿ ನಡುಕ ಹುಟ್ಟಿಸಿದೆ.