ಬೈಪಾಸ್ ರೋಡ್​ನಲ್ಲಿ ಭಾವನಾ ಸಂಚಾರ: ಚೊಚ್ಚಲ ಬಾಲಿವುಡ್ ಚಿತ್ರದ ರಿಲೀಸ್ ಖುಷಿ

ಬೆಂಗಳೂರು: ‘ನಧೀಂ ಧೀಂತನ…’ ಎನ್ನುತ್ತ ಕನ್ನಡ ಸಿನಿಪ್ರಿಯರ ಮನಗೆದ್ದ ನಟಿ ಭಾವನಾ ರಾವ್ ನವೆಂಬರ್ ಯಾವಾಗ ಬರುತ್ತೋ ಎಂದು ಕಾದು ಕುಳಿತಿದ್ದಾರೆ. ಅದಕ್ಕೆ ಕಾರಣ, ಅವರ ಮೊದಲ ಹಿಂದಿ ಚಿತ್ರದ ರಿಲೀಸ್! ಹೌದು, ಕನ್ನಡ ಮತ್ತು ತಮಿಳಿನಲ್ಲಿ ಜನಪ್ರಿಯತೆ ಪಡೆದ ಬಳಿಕ ಬಿಟೌನ್​ನಲ್ಲಿ ಮಿಂಚುವ ಅವಕಾಶ ಅವರನ್ನು ಹುಡುಕಿಕೊಂಡು ಬಂದಿದೆ.

ಬಾಲಿವುಡ್​ನ ಖ್ಯಾತ ನಟ ನೀಲ್ ನಿತಿನ್ ಮುಖೇಶ್ ಜತೆಗೆ ‘ಬೈ ಪಾಸ್ ರೋಡ್’ ಸಿನಿಮಾದಲ್ಲಿ ಭಾವನಾ ನಟಿಸಿದ್ದು, ನವೆಂಬರ್ 1ರಂದು ತೆರೆಕಾಣಲಿದೆ. ಇತ್ತೀಚೆಗಷ್ಟೇ ಚಿತ್ರದ ನಿರ್ವಪಕರು ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದಾರೆ. ಅದರ ಜತೆಗೆ ಇರುವ ಒಂದು ಪೋಸ್ಟರ್ ಕೂಡ ಗಮನ ಸೆಳೆಯುತ್ತಿದೆ. ‘ಈ ಚಿತ್ರಕ್ಕೆ ಆಡಿಷನ್ ನಡೆಯುತ್ತಿದೆ ಎಂಬ ವಿಷಯ ನನ್ನ ಪರಿಚಯದವರಿಂದ ತಿಳಿಯಿತು. ಪ್ರಯತ್ನಿಸೋಣ ಎಂದು ಆಡಿಷನ್ ಕೊಟ್ಟು ಬಂದಿದ್ದೆ. ಸೆಲೆಕ್ಟ್ ಆಗಿದ್ದಕ್ಕೆ ಖುಷಿ ಆಯಿತು. ಚಿತ್ರದಲ್ಲೊಂದು ಮುಖ್ಯ ಪಾತ್ರ ಮಾಡಿದ್ದೇನೆ. ಗ್ರೇ ಶೇಡ್ ಇರುವಂತಹ ಪಾತ್ರ ಸಿಕ್ಕಿದೆ’ ಎನ್ನುವ ಭಾವನಾ ಕಥೆ ಬಗ್ಗೆ ಹೆಚ್ಚು ಮಾಹಿತಿ ನೀಡಿಲ್ಲ. ಯಾಕೆಂದರೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಂತೆ. ಸ್ವಲ್ಪವೇ ಬಿಟ್ಟುಕೊಟ್ಟರೂ ಕಥೆ ಬಹಿರಂಗವಾಗಬಹುದು ಎಂಬ ಕಾರಣಕ್ಕೆ ರಹಸ್ಯವನ್ನು ಅವರು ಕಾಯ್ದುಕೊಂಡಿದ್ದಾರೆ. ಶಾಲಾ ದಿನಗಳಿಂದಲೂ ಹಿಂದಿ ಮಾತನಾಡಿ ಬಲ್ಲ ಅವರಿಗೆ ಈ ಚಿತ್ರದಲ್ಲಿ ನಟಿಸುವುದು ಕಷ್ಟ ಆಗಲಿಲ್ಲವಂತೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇದ್ದು, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುವ ಹಂಬಲವನ್ನೂ ಭಾವನಾ ವ್ಯಕ್ತಪಡಿಸಿದ್ದಾರೆ.

ನಮನ್ ಮುಖೇಶ್ ‘ಬೈಪಾಸ್ ರೋಡ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಅದಾ ಶರ್ವ, ರಜಿತ್ ಕಪೂರ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ‘ತುಂಬ ಶ್ರಮವಹಿಸಿ ಚಿತ್ರೀಕರಣ ಮಾಡಿದೆವು. 24 ಗಂಟೆ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದೂ ಇದೆ. ಅಂಥ ಸಮಯದಲ್ಲಿ ಎಲ್ಲರನ್ನೂ ನೀಲ್ ನಿತಿನ್ ಹುರಿದುಂಬಿಸುತ್ತ ಕೆಲಸ ಮಾಡುತ್ತಿದ್ದರು. ಅವರೆಲ್ಲರಿಂದಲೂ ತುಂಬ ವಿಷಯಗಳನ್ನು ಕಲಿತುಕೊಂಡೆ’ ಎಂದು ಶೂಟಿಂಗ್ ಅನುಭವ ಹಂಚಿಕೊಳ್ಳುವ ಭಾವನಾ ಹೊಸದೊಂದು ಕನ್ನಡ ಚಿತ್ರಕ್ಕೂ ಸಹಿ ಹಾಕಿದ್ದಾರಂತೆ. ಸೆಪ್ಟೆಂಬರ್​ನಲ್ಲಿ ಆ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ದಕ್ಷಿಣದವರಿಗೆ ಬಾಲಿವುಡ್ ಬಗ್ಗೆ ಆಕರ್ಷಣೆ ಇರುವಂತೆಯೇ ಬಾಲಿವುಡ್​ನವರು ಕೂಡ ನಮ್ಮ ಸಿನಿಮಾಗಳನ್ನು ಅಚ್ಚರಿಯಿಂದ ನೋಡುತ್ತಾರೆ. ದಕ್ಷಿಣದಿಂದ ಬಂದ ನಟಿಯರು ಎಂಬ ಕಾರಣಕ್ಕೆ ನಮಗೂ ತುಂಬ ಗೌರವ ನೀಡುತ್ತಾರೆ.

| ಭಾವನಾ ನಟಿ

Leave a Reply

Your email address will not be published. Required fields are marked *