| ಹರ್ಷವರ್ಧನ್ ಬ್ಯಾಡನೂರು

ನಾಯಕ ಉಪೇಂದ್ರ, ನಿರ್ದೇಶಕ ನಾಗಣ್ಣ ಮತ್ತು ನಿರ್ಮಾಪಕ ಸೂರಪ್ಪ ಬಾಬು ಕಾಂಬಿನೇಷನ್ನಲ್ಲಿ ಕೆಲ ದಿನಗಳ ಹಿಂದಷ್ಟೇ “ಭಾರ್ಗವ’ ಚಿತ್ರವನ್ನು ಘೋಷಿಸಲಾಗಿತ್ತು. ಇದೀಗ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ “ನಮ್ಮನೆ ಯುವರಾಣಿ’ ಧಾರಾವಾಹಿ ಮತ್ತು “ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಖ್ಯಾತಿಯ ನಟಿ ಅಂಕಿತಾ ಅಮರ್ ಆಯ್ಕೆಯಾಗಿದ್ದಾರೆ. ಈ ಬಗ್ಗೆ ವಿಜಯವಾಣಿ ಜತೆ ಸಂತಸ ಹಂಚಿಕೊಂಡ ಅವರು, “”ಇಬ್ಬನಿ ತಬ್ಬಿದ ಇಳೆಯಲಿ ಚಿತ್ರವನ್ನು ಉಪೇಂದ್ರ ಸರ್ ನೋಡಿದ್ದರಂತೆ. “ಭಾರ್ಗವ’ ಕಥೆ ಕೇಳುವಾಗ, ನಾಯಕಿಯ ಪಾತ್ರದ ಬಗ್ಗೆ ತಿಳಿದು, ನಿರ್ದೇಶಕರಾದ ನಾಗಣ್ಣ ಸರ್ಗೆ ಈ ಪಾತ್ರಕ್ಕೆ ನನ್ನನ್ನು ಸೂಚಿಸಿದ್ದಾರೆ. ನಾನೂ ಕಥೆ ಕೇಳಿದ್ದೇನೆ. ಪರ್ಫಾಮೆನ್ಸ್ ಪ್ರಧಾನ ಪಾತ್ರ ಮತ್ತು ಚಿತ್ರ’ ಎಂದು ಮಾಹಿತಿ ನೀಡುತ್ತಾರೆ.
ಜಸ್ಟ್ ಮ್ಯಾರಿಡ್, ಸತ್ಯ ಸನ್ ಆಫ್ ಹರಿಶ್ಚಂದ್ರ!
ಅಂದಹಾಗೆ, “ಇಬ್ಬನಿ ತಬ್ಬಿದ ಇಳೆಯಲಿ’ ಬಳಿಕ ಅಂಕಿತಾ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ನಿರ್ಮಿಸುತ್ತಿರುವ, ಸಂಗೀತ ನಿರ್ದೇಶಕಿ ಸಿ.ಆರ್. ಬಾಬಿ ಚೊಚ್ಚಲ ಬಾರಿಗೆ ಆ್ಯಕ್ಷನ್&ಕಟ್ ಹೇಳುತ್ತಿರುವ “ಜಸ್ಟ್ ಮ್ಯಾರಿಡ್’ ಚಿತ್ರದಲ್ಲಿ ಶೈನ್ ಶೆಟ್ಟಿ ಜತೆ ನಟಿಸುತ್ತಿದ್ದಾರೆ. ಹಾಗೇ ಸಚಿನ್ ವಾಲಿ ನಿರ್ದೇಶಿಸುತ್ತಿರುವ, ನಿರೂಪ್ ಭಂಡಾರಿ ನಾಯಕನಾಗಿರುವ “ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಎರಡೂ ಚಿತ್ರಗಳ ಶೂಟಿಂಗ್ ಮತ್ತು ಡಬ್ಬಿಂಗ್ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್&ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಅದರ ಬೆನ್ನಲ್ಲೇ ಇದೀಗ “ಭಾರ್ಗವ’ ತಂಡದ ಭಾಗವಾಗಿದ್ದಾರೆ ಅಂಕಿತಾ.
ಓದಿನಲ್ಲೂ ಬಿಜಿ
“ಸಿನಿಮಾಗಳಲ್ಲಿ ಬಿಜಿಯಾಗಿರುವ ಕಾರಣ ಸದ್ಯ ಮತ್ತೆ ಸೀರಿಯಲ್ನಲ್ಲಿ ನಟಿಸುವ ಸಾಧ್ಯತೆ ಇಲ್ಲ’ ಎನ್ನುವ ಅವರು, ನಟನೆಯ ಜತೆಗೆ ಶಿಕ್ಷಣವನ್ನೂ ಮುಂದುವರಿಸಿದ್ದಾರೆ. “ಚೈಲ್ಡ್ ಸೈಕಾಲಜಿಯಲ್ಲಿ ಮಾಸ್ಟರ್ಸ್ ಓದುತ್ತಿದ್ದೇನೆ ಆ ಬಳಿಕ ಪಿಎಚ್ಡಿ ಮಾಡಬೇಕು ಅಂತಂದುಕೊಂಡಿದ್ದೇನೆ. ಸೈಕಾಲಜಿ ನಟನೆಗೂ ತುಂಬ ಸಹಕಾರಿಯಾಗಿದೆ. ಒಂದು ಪಾತ್ರವನ್ನು ಅರ್ಥ ಮಾಡಿಕೊಳ್ಳಲು, ಅಧ್ಯಯನ ಮಾಡಿ, ಪೋಷಿಸಲು ಸೈಕಾಲಜಿಯಿಂದ ಸಹಾಯವಾಗುತ್ತಿದೆ’ ಎನ್ನುತ್ತಾರೆ.
ಎರಡು ಶೇಡ್ಗಳಲ್ಲಿ ಉಪ್ಪಿ
“ಕಬ್ಜಾ’, “ಯುಐ’, “45′ ಸಿನಿಮಾಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಉಪೇಂದ್ರ “ಭಾರ್ಗವ’ ಚಿತ್ರದಲ್ಲಿ ಎರಡು ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೇಮಕಥೆಯ ಜತೆಗೆ ಕೌಟುಂಬಿಕ ಮೌಲ್ಯ, ಸಂಬಂಧಗಳಿಗೆ ಹೆಚ್ಚು ಮಹತ್ವವಿದ್ದು, ಆ್ಯಕ್ಷಮ್, ಕಾಮಿಡಿ ಜತೆಗೆ ಮಾಸ್ ಅಂಶಗಳೂ ಇರುವ ಫ್ಯಾಮಿಲಿ ಡ್ರಾಮಾ ಥ್ರಿಲ್ಲರ್ ಚಿತ್ರವಿದು. ಜೂನ್ನಿಂದ “ಭಾರ್ಗವ’ ಶೂಟಿಂಗ್ ಪ್ರಾರಂಭವಾಗಲಿದೆ. ಅರ್ಜುನ್ ಜನ್ಯ ಸಂಗೀತ, ರಾಜರತ್ನಂ ಛಾಯಾಗ್ರಹಣ ಮತ್ತು ಬಿ.ಎ. ಮಧು ಸಂಭಾಷಣೆಯಲ್ಲಿ ಸಿನಿಮಾ ಮೂಡಿಬರಲಿದೆ.
ನಾಯಕಿಯ ಪಾತ್ರಕ್ಕೆ ಕನ್ನಡ ಚೆನ್ನಾಗಿ ಮಾತನಾಡುವಂತಹ ಕನ್ನಡದ ಹುಡುಗಿಯೇ ಬೇಕು ಅಂತ ಹುಡುಕುತ್ತಿದ್ದೆವು. ಆಗ “ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ಅಂಕಿತಾ ಅಮರ್ ನಟನೆ ನೋಡಿ, ನಮ್ಮ ಚಿತ್ರಕ್ಕೂ ಅವರು ಒಪು$್ಪತ್ತಾರೆ ಅಂತನ್ನಿಸಿತು. ಜೂನ್ನಲ್ಲಿ ಸಿನಿಮಾ ಸೆಟ್ಟೇರಲಿದೆ. ಮೂರು ಶೆಡ್ಯೂಲ್ಗಳಲ್ಲಿ ಚಿತ್ರೀಕರಣ ನಡೆಸಲಿದ್ದೇವೆ.
– ನಾಗಣ್ಣ, ನಿರ್ದೇಶಕ