ಬೆಂಗಳೂರು: ನೆಟ್ಟಿಗರ ಟ್ರೋಲ್ಗೆ ಗುರಿಯಾಗಿದ್ದ ನಟಿ ಹಾಗೂ ಬಿಕಿನಿ ಕ್ರೀಡಾಪಟು ಚಿತ್ರಾಲ್ ರಂಗಸ್ವಾಮಿ ಅವರು ಮತ್ತಷ್ಟು ಮಾದಕ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹರಿಬಿಡುವ ಮೂಲಕ ಟ್ರೋಲಿಗರಿಗೆ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.
ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಚಿತ್ರಾಲ್ ರಂಗಸ್ವಾಮಿ ಅವರು ಮೊದಲ ಬಾರಿಗೆ ಬಿಕಿನಿ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಕುರಿತಾಗಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನೆಟ್ಟಿಗನೊಬ್ಬ “ಇನ್ನು ಏನೇನು ತೋರಿಸ್ತೀರೋ ಆ ದೇವರಿಗೆ ಗೊತ್ತು. ಅಷ್ಟಾದ್ರೂ ಯಾಕ್ ಹಾಕೋಂಡಿದ್ದೀಯಾ ತಾಯಿ” ಎಂದು ಕಾಮೆಂಟ್ ಮಾಡಿದ್ದು, ಇದು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.
ಇದೀಗ ಪ್ರತ್ಯುತ್ತರವಾಗಿ ಚಿತ್ರಾಲ್ ಅವರು ಮತ್ತಷ್ಟು ಮಾದಕ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಹೆಚ್ಚು ಮಂದಿ ಚಿತ್ರಾಲ್ ಅವರ ಬೆನ್ನಿಗೆ ನಿಂತಿದ್ದಾರೆ. ನಿಮ್ಮ ಧೈರ್ಯ ಮೆಚ್ಚಲೇಬೇಕು. ಯಾರು ಏನೆ ಅಂದರೂ ನಿಮ್ಮ ಪ್ರಯತ್ನವನ್ನು ಮಾತ್ರ ನಿಲ್ಲಿಸಿಬೇಡಿ ಸಹೋದರಿ, ಹೀಗೆ ಮುಂದುವರಿಯಿರಿ, ಮತ್ತಷ್ಟು ಯಶಸ್ಸು ನಿಮ್ಮ ಬೆನ್ನ ಹಿಂದೆ ಬರಲಿ ಎಂದು ಆಶಿಸಿದ್ದಾರೆ. ನಿಮ್ಮ ಪ್ರತಿಭೆಗೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಹಾರೈಸಿದ್ದಾರೆ.
ಬಿಕಿನಿ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಬಾಡಿ ಶೇಪ್ ಮತ್ತು ಆರೋಗ್ಯ ಕಾಪಾಡಿಕೊಳ್ಳುವುದರ ಬಗ್ಗೆ ಚಿತ್ರಾಲ್ ಬರೆದುಕೊಂಡಿದ್ದರು. ಅಲ್ಲದೆ, ತನ್ನ ಕಲೆಗೆ ಯಾವುದೇ ಹೇಳಿಕೆ ಮಾತಿಗೆ ಬೆಲೆಕೊಡದೆ ಪ್ರೋತ್ಸಾಹ ನೀಡುತ್ತಿರುವ ತಾಯಿ ಮತ್ತು ಸಹೋದರಿಯ ಬಗ್ಗೆ ಚಿತ್ರಾಲ್ ಭಾವುಕರಾಗಿ ಬರೆದುಕೊಂಡಿದ್ದರು. ಇದರೊಂದಿಗೆ ತಮ್ಮ ಕೋಚ್ ಧನ್ಯವಾದ ತಿಳಿಸಿದ್ದರು.