ನಟರಿಗೆ ಸಾಮಾಜಿಕ ಜವಾಬ್ದಾರಿಯೂ ಇದೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

‘ಅಮರ’ ಚಿತ್ರ ಪ್ರಚಾರಕ್ಕೆ ಹುಬ್ಬಳ್ಳಿಗೆ ಶನಿವಾರ ಆಗಮಿಸಿದ್ದ ನಟ ಅಭಿಷೇಕ, ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಬದುಕು, ಚಿತ್ರರಂಗ, ರಾಜಕಾರಣ ಕುರಿತಂತೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ವಿದ್ಯಾನಗರ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ ಆವರಣದ ಬಯೋಟೆಕ್ ಹಾಲ್​ನಲ್ಲಿ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಸುಮಲತಾ ನಗುತ್ತಲೇ ಉತ್ತರಿಸಿದರು.

‘ಬದುಕು, ರಾಜಕಾರಣ, ಚಿತ್ರರಂಗ’ ಈ ಮೂರರ ಹೊಂದಾಣಿಕೆ ಹೇಗೆ ಸಾಧ್ಯವಾಯಿತು? ಸಿನೆಮಾ ನಟರು ಸಾಮಾನ್ಯರಂತೆ ಲೈಫ್ ಎಂಜಾಯ್ ಮಾಡುತ್ತಾರೆಯೇ? ಸಿನಿಮಾದಂತೆ ನಿಜ ಜೀವನದಲ್ಲಿರೋಕಾಗುತ್ತಾ ಎಂಬ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸುಮಲತಾ, ಮನಸ್ಸಿನ ಉತ್ತಮ ವಿಚಾರಗಳು ಮಾತುಗಳಾಗುತ್ತವೆ. ಮಾತುಗಳು ನಡವಳಿಕೆಯಾಗಿ ವ್ಯಕ್ತಿತ್ವ ರೂಪಿಸುತ್ತವೆ. ಇವುಗಳಲ್ಲಿ ಸಮತೋಲನ ಸಾಧಿಸಿದ್ದರಿಂದ ಚಿತ್ರರಂಗ, ರಾಜಕಾರಣ, ವೈಯಕ್ತಿಕ ಬದುಕಿನ ಮಧ್ಯೆ ಹೊಂದಾಣಿಕೆ ಸಾಧ್ಯವಾಯಿತು. ನಾನು ಚಿತ್ರರಂಗಕ್ಕೆ ಬರುತ್ತೇನೆಂದು ಅಂದುಕೊಂಡಿರಲಿಲ್ಲ. 16ನೇ ವಯಸ್ಸಿನಲ್ಲೇ ಈ ಕ್ಷೇತ್ರಕ್ಕೆ ಬಂದೆ. ಹೀಗಾಗಿ ಕಾಲೇಜ್​ಗೆ ಹೋಗುವುದಕ್ಕಾಗಲಿಲ್ಲ. ಸಿನಿಮಾನೇ ಬೇರೆ, ನಿಜ ಜೀವನವೇ ಬೇರೆ. ಆದರೆ, ನಟರಿಗೆ ಸಾಮಾಜಿಕ ಜವಾಬ್ದಾರಿಯೂ ಇರುತ್ತವೆ ಎಂದರು.

ಸಂವಾದದ ಮಧ್ಯೆ ಮಧ್ಯೆ ಅಭಿಷೇಕ್ ಹಾಗೂ ಯೋಗರಾಜ ಭಟ್ ಅವರ ಡೈಲಾಗ್, ಹಾಸ್ಯ ಚಟಾಕಿಗಳು ವಿದ್ಯಾರ್ಥಿಗಳಿಗೆ ಮನರಂಜನೆ ನೀಡಿದವು. ನಿರ್ವಪಕ ರಾಕ್​ಲೈನ್ ವೆಂಕಟೇಶ, ನಿರ್ದೇಶಕ ನಾಗಶೇಖರ, ನಟ ದೊಡ್ಡಣ್ಣ ವೇದಿಕೆಯಲ್ಲಿದ್ದರು. ಕೆಎಲ್​ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪ್ರೊ. ಸಿದ್ದು ಯಾಪಲಪರವಿ, ಇತರರು ಉಪಸ್ಥಿತರಿದ್ದರು.

ನಿಜವಾದ ಭವಿಷ್ಯ:ಮಂಡ್ಯದಲ್ಲಿ ಸುಮಲತಾ ಗೆಲ್ಲುತ್ತಾರೆಂದು ಸವದತ್ತಿ ಯಲ್ಲಮ್ಮನ ಪಡ್ಡಲಗಿ ಎತ್ತಿ ಭವಿಷ್ಯ ಹೇಳಿದ್ದ ಗದಗ ನ ಬಾಳು ಬಯಲಮ್ಮ, ಶನಿವಾರ ಸಂವಾದದಲ್ಲಿ ಸುಮಲತಾ ಅವರನ್ನು ಭೇಟಿಯಾದರು. ನನ್ನ ಮಗಳ ಸಮನಾದ ನೀವು ಗೆಲ್ಲುತ್ತೀರಿ, ದೇವಗೌಡರು ಸೋಲುತ್ತಾರೆಂದು ನಾನು ಭವಿಷ್ಯ ಹೇಳಿದ್ದೆ ಎಂದು ಬಯಲಮ್ಮ ಸುಮಲತಾಗೆ ತಿಳಿಸಿದಾಗ ಸುಮಲತಾ ಅವರ ಮುಖದಲ್ಲಿ ಮುಗುಳುನಗೆ ಇತ್ತು.

ನಿಖಿಲ್ ಎಲ್ಲಿದೀಯಪ್ಪ: ಸುಮಲತಾ ಅವರು ವೇದಿಕೆಗೆ ಆಗಮಿಸು ತ್ತಿದ್ದಂತೆಯೇ ಸಭಾಂಗಣದಲ್ಲಿ ಕಿಕ್ಕಿರಿದು ಜಮಾಯಿಸಿದ್ದ ವಿದ್ಯಾರ್ಥಿಗಳು ‘ನಿಖಿಲ್ ಎಲ್ಲಿದೀಯಪ್ಪ ಎಂದು ಕೂಗಿದರು. ಈ ಕೂಗಿಗೆ ಸುಮಲತಾ ನಗುತ್ತಲೇ ವೇದಿಕೆ ಏರಿದರೆ, ನಟ ಅಭಿಷೇಕ ‘ಅವರು ಎಲ್ಲಿಯಾದರೂ ಇರಲಿ’ ನಾವು ನಿಮ್ಮ ಮುಂದೆ ಇದ್ದೇವಲ್ಲಾ ಎಂದು ಹಾಸ್ಯ ಚಟಾಕಿ ಹಾರಿಸಿದರು.

Leave a Reply

Your email address will not be published. Required fields are marked *